ಅಬ್ಬರಿಸುತ್ತಿರುವ ಈ ಮೂವರನ್ನು ಬಿಟ್ಟು ನಿಕೋಲಸ್ ಪೂರನ್‌ಗೆ 10.75 ಕೋಟಿ ಕೊಟ್ಟು ಕೆಟ್ಟ ಸನ್ ರೈಸರ್ಸ್ ಹೈದರಾಬಾದ್!

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ತನ್ನ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಕಳೆದ ಆವೃತ್ತಿಯ ರೀತಿಯೇ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿಯೂ ಮುಗ್ಗರಿಸಲಿದೆಯಾ ಎಂಬ ಅನುಮಾನ ಉಂಟಾಗುವಂತೆ ಮಾಡಿತ್ತು.
ಆದರೆ ನಂತರದ ಪಂದ್ಯಗಳಲ್ಲಿ ಪುಟಿದೆದ್ದ ಸನ್ ರೈಸರ್ಸ್ ಹೈದರಾಬಾದ್ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಸಾಲುಸಾಲು ಪಂದ್ಯಗಳಲ್ಲಿ ಗೆದ್ದು ಅತಿ ಹೆಚ್ಚು ಯಶಸ್ಸು ಸಾಧಿಸಿರುವ ತಂಡ ಎನಿಸಿಕೊಂಡಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಸೋಲುಣಿಸುವುದರ ಮೂಲಕ ಸತತವಾಗಿ 5 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನಕ್ಕೆ ಏರಿಕೆ ಕಂಡಿತು. ಹೀಗೆ ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ಇತ್ತೀಚೆಗೆ ಗುಜರಾತ್ ಟೈಟನ್ಸ್ ವಿರುದ್ಧದ ಟೂರ್ನಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗಿ ಸೋಲನ್ನು ಅನುಭವಿಸಿದೆ.
ಈ ಪಂದ್ಯದಲ್ಲಿ ಎಂದಿನಂತೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ 5 ಎಸೆತಗಳಿಗೆ ಕೇವಲ 3 ರನ್ ಕಲೆಹಾಕಿ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯ ಹೊರತುಪಡಿಸಿ ಉಳಿದ ಯಾವುದೇ ಪಂದ್ಯದಲ್ಲಿಯೂ ಆಕ್ರಮಣಕಾರಿ ಆಟವನ್ನು ಆಡದ ನಿಕೊಲಸ್ ಪೂರನ್ ಮೆಗಾ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ಮೇಲೆ ಸುರಿದಿದ್ದ 10.75 ಕೋಟಿಗೆ ತಕ್ಕಂಥ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಹೌದು, ನಿಕೊಲಸ್ ಪೂರನ್ ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 12 ಪಂದ್ಯಗಳನ್ನು ಆಡಿ ಕೇವಲ 85 ರನ್ ಕಲೆಹಾಕಿ ಕಳಪೆ ಪ್ರದರ್ಶನ ನೀಡಿದ್ದರೂ ಸಹ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಈ ಬಾರಿ 10.75 ಕೋಟಿ ನೀಡಿ ನಿಕೋಲಸ್ ಪೂರನ್ ಅವರನ್ನು ಖರೀದಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿ 116 ರನ್ ಕಲೆ ಹಾಕಿರುವ ನಿಕೊಲಸ್ ಪೂರನ್ ಅವರನ್ನು ದೊಡ್ಡ ಮೊತ್ತ ನೀಡಿ ಖರೀದಿಸುವ ಬದಲು ಈ ಕೆಳಕಂಡ ಮೂವರು ಆಟಗಾರರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಬಹುದಿತ್ತು.

1. ದಿನೇಶ್ ಕಾರ್ತಿಕ್
ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಆವೃತ್ತಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ಅತಿ ಹೆಚ್ಚಾಗಿ ಮಾತನಾಡುತ್ತಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ ಆಟದ ಬಗ್ಗೆ. ತಂಡಕ್ಕೆ ಹಲವಾರು ಪಂದ್ಯಗಳನ್ನು ಫಿನಿಶ್ ಮಾಡಿಕೊಟ್ಟಿರುವ ದಿನೇಶ್ ಕಾರ್ತಿಕ್ ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ತಂಡಕ್ಕೆ ಅಗತ್ಯವಿದ್ದ ಸಹಾಯವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಟೂರ್ನಿಯಲ್ಲಿ ಮಿಂಚುತ್ತಿರುವ ದಿನೇಶ್ ಕಾರ್ತಿಕ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ ನಿಕೋಲಸ್ ಪೂರನ್ ಅವರಿಗೆ ನೀಡಿರುವ ಅರ್ಧದಷ್ಟು ಮೊತ್ತವನ್ನು ಕೊಟ್ಟು ಖರೀದಿಸಿತ್ತು. ಹೀಗಾಗಿ ಸನ್ ರೈಸರ್ಸ್ ಹೈದರಾಬಾದ್ ನಿಕೋಲಸ್ ಪೂರನ್ ಮೇಲೆ ಅಷ್ಟು ಮೊತ್ತ ಸುರಿಯುವ ಬದಲು ದಿನೇಶ್ ಕಾರ್ತಿಕ್ ಅವರನ್ನು ಖರೀದಿಸುವ ಪ್ರಯತ್ನ ಮಾಡಬಹುದಿತ್ತು.

2. ಶಿಮ್ರಾನ್ ಹೆಟ್ಮಾಯೆರ್
ನಿಕೋಲಸ್ ಪೂರನ್ ಜತೆ ರಾಷ್ಟ್ರೀಯ ತಂಡದಲ್ಲಿ ಆಟವನ್ನಾಡುವ ಶಿಮ್ರಾನ್ ಹೆಟ್ಮಾಯೆರ್ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ 8.50 ಕೋಟಿಗೆ ಖರೀದಿಸಿತ್ತು. ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿದು ಅಬ್ಬರಿಸುವ ಸಾಮರ್ಥ್ಯವನ್ನು ಹೊಂದಿರುವ ಶಿಮ್ರಾನ್ ಹೆಟ್ಮಾಯೆರ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿ 227 ರನ್ ಕಲೆಹಾಕಿದ್ದಾರೆ. ಹೀಗೆ ಟೂರ್ನಿಯ ಲಕ್ನೋ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ 36 ಎಸೆತಗಳಿಗೆ 59 ರನ್ ಚಚ್ಚಿದ್ದ ಶಿಮ್ರಾನ್ ಹೆಟ್ಮಾಯೆರ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಿಕೋಲಸ್ ಪೂರನ್ ಬದಲಾಗಿ ಖರೀದಿಸುವ ಯತ್ನವನ್ನು ಮಾಡಬಹುದಿತ್ತು.

3. ರಾಹುಲ್ ತೆವಾಟಿಯಾ
ಅಂತಿಮ ಕ್ಷಣದಲ್ಲಿ ಕಣಕ್ಕಿಳಿದು ಬ್ಯಾಟ್ ಮೂಲಕ ಚಮತ್ಕಾರಗಳನ್ನು ಮಾಡಿ ತನ್ನ ತಂಡಕ್ಕೆ ಗೆಲುವು ತಂದು ಕೊಡುವಂತಹ ಸಾಮರ್ಥ್ಯವಿರುವ ರಾಹುಲ್ ತೆವಾಟಿಯಾ ಅವರನ್ನು ನಿಕೋಲಸ್ ಪೂರನ್ ಬದಲಾಗಿ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಬಹುದಿತ್ತು. ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ರಾಹುಲ್ ತೆವಾಟಿಯ ಅವರನ್ನು 9 ಕೋಟಿಗೆ ಖರೀದಿಸಿದ್ದು ನಿಕೋಲಸ್ ಪೂರನ್ ಅವರಿಗಿಂತ 1 ಕೋಟಿ 75 ಲಕ್ಷ ಕಡಿಮೆ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಹೀಗಾಗಿ ಸನ್ ರೈಸರ್ಸ್ ಹೈದರಾಬಾದ್ ನಿಕೋಲಸ್ ಪೂರನ್ ಮೇಲೆ ಅಷ್ಟು ಮೊತ್ತ ಸುರಿಯುವ ಬದಲು ಫಿನಿಶಿಂಗ್ ಮಾಡಬಲ್ಲ ಸಾಮರ್ಥ್ಯವಿರುವ ರಾಹುಲ್ ತೆವಾಟಿಯಾ ಅವರನ್ನು ಖರೀದಿಸುವ ಪ್ರಯತ್ನ ಮಾಡಬಹುದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications