ಐಪಿಎಲ್: ಟೂರ್ನಿ ಆರಂಭಕ್ಕೂ ಮುನ್ನ ಚೆನ್ನೈಗೆ ಕೈಕೊಟ್ಟ ದೀಪಕ್ ಚಹರ್ ಸ್ಥಾನ ತುಂಬಲು ಈ ಮೂವರು ಸಿದ್ಧ

ಮುಂಬರುವ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತು ಕಳೆದ ವರ್ಷಗಳಿಂದಲೇ ಚಟುವಟಿಕೆಗಳು ಆರಂಭವಾಗಿದ್ದು ಕುತೂಹಲಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಇದೇ ತಿಂಗಳ 12 ಹಾಗೂ 13ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಈ ಬಾರಿಯ ಟೂರ್ನಿಯ ಮೇಲಿನ ನಿರೀಕ್ಷೆ ಹಾಗೂ ಕುತೂಹಲವನ್ನು ದುಪ್ಪಟ್ಟು ಮಾಡಿತು. ಹಾಗೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿಗಾಗಿ ಹತ್ತು ತಂಡಗಳು ಸೆಣಸಾಟ ನಡೆಸಲಿರುವುದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಹೀಗೆ ನಡೆದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕಳೆದ ಐಪಿಎಲ್ ಆವೃತ್ತಿಗಳಲ್ಲಿ ತನ್ನ ತಂಡದ ಪರ ಕಣಕ್ಕಿಳಿದಿದ್ದ ಆಟಗಾರರನ್ನು ಮತ್ತೆ ಖರೀದಿಸಿ ತಂಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಅದರಲ್ಲಿಯೂ ದೀಪಕ್ ಚಹರ್, ಡ್ವೇನ್ ಬ್ರಾವೋ ಮತ್ತು ರಾಬಿನ್ ಉತ್ತಪ್ಪ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ದೀಪಕ್ ಚಹರ್ ಅವರನ್ನು ೧೪ ಕೋಟಿಗೆ ಖರೀದಿಸುವ ಮೂಲಕ ಹರಾಜು ಇತಿಹಾಸದಲ್ಲಿಯೇ ಓರ್ವ ಆಟಗಾರನ ಮೇಲೆ ಹತ್ತು ಕೋಟಿಗೂ ಹೆಚ್ಚು ಹೂಡಿಕೆ ಮಾಡಿತು. ಇನ್ನು ಮೆಗಾ ಹರಾಜಿನಲ್ಲಿ ದೀಪಕ್ ಚಹರ್ ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಜೊತೆ ಪೈಪೋಟಿ ನಡೆಸಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಇದೀಗ ಅದೇ ದೀಪಕ್ ಚಹರ್ ಕುರಿತಾಗಿ ಚಿಂತಿಸಬೇಕಾದ ಹಂತ ತಲುಪಿದೆ. ಹೌದು, ದೀಪಕ್ ಚಹರ್ ಇತ್ತೀಚಿಗಷ್ಟೆ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಯ ಅಂತಿಮ ಪಂದ್ಯದಲ್ಲಿ ಗಾಯದ ಸಮಸ್ಯೆಗೊಳಗಾಗಿ ನಂತರ ನಡೆದ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೂ ಸಹ ಅಲಭ್ಯರಾಗಿದ್ದರು.
ಹೀಗೆ ಗಾಯದ ಸಮಸ್ಯೆಯಿಂದಾಗಿ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ದೀಪಕ್ ಚಹರ್ ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ಮಾರ್ಚ್ ೨೬ರಿಂದ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಹುಪಾಲು ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂದು ಐಪಿಎಲ್ ಬಲ್ಲ ಮೂಲಗಳು ತಿಳಿಸಿವೆ. ಹೀಗೆ ತಾವು ಹರಾಜಿನಲ್ಲಿ ಅತಿಹೆಚ್ಚು ಹಣ ಹೂಡಿ ಖರೀದಿಸಿದ್ದ ಹಾಗೂ ತಮ್ಮ ತಂಡದ ಆಡುವ ಬಳಗದ ಪ್ರಮುಖ ಆಟಗಾರನಾಗಿದ್ದ ದೀಪಕ್ ಚಹರ್ ಅಲಭ್ಯರಾಗುತ್ತಿರುವ ವಿಷಯ ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಹಿನ್ನಡೆಯನ್ನುಂಟುಮಾಡಿದ್ದು, ದೀಪಕ್ ಚಹರ್ ಬದಲಿಗೆ ಬೇರೆ ಆಟಗಾರನನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸಿದ್ದಪಡಿಸಬೇಕಿದೆ. ಈಗಾಗಾಲೇ ತಂಡಕ್ಕೆ ಸೇರ್ಪಡೆಯಾಗಿರುವ ಆಟಗಾರರಲ್ಲಿಯೇ ದೀಪಕ್ ಚಹರ್ ಸ್ಥಾನ ತುಂಬಬಲ್ಲ ಮೂವರು ಆಟಗಾರರಿದ್ದು, ಆ ಮೂವರ ಪಟ್ಟಿ ಈ ಕೆಳಕಂಡಂತಿದೆ.

ತುಷಾರ್ ದೇಶಪಾಂಡೆ
ಮುಂಬೈ ಮೂಲದ ವೇಗಿ ತುಷಾರ್ ದೇಶಪಾಂಡೆ 2020ರ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿದಿದು ಆಡಿದ್ದ ಐದು ಪಂದ್ಯಗಳ ಪೈಕಿ ಮೂರು ವಿಕೆಟ್ ಪಡೆದಿದ್ದರು ಹಾಗೂ 2021ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಎರಡನೇ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ೨೦೨೦ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದಿದ್ದ ಪಂದ್ಯದ ಅಂತಿಮ್ ಓವರ್ ಮಾಡಿದ್ದ ತುಷಾರ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು 22 ರನ್ ಬೇಕಿದ್ದಾಗ ಕೇವಲ 8 ರನ್ ನೀಡಿ ಮಿಂಚಿದ್ದರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಆಟಗಾರ ಬೆನ್ ಸ್ಟೋಕ್ಸ್ ವಿಕೆಟನ್ನೂ ಕೂಡ ಪಡೆದಿದ್ದರು. ಹೀಗೆ ಡೆತ್ ಓವರ್ ಸಮಯದಲ್ಲಿ ಎದುರಾಳಿ ತಂಡಕ್ಕೆ ಮಾರಕವಾಗಬಲ್ಲ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯವಿರುವ ತುಷಾರ್ ದೇಶಪಾಂಡೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ದೀಪಕ್ ಚಹರ್ ಬದಲು ಕಣಕ್ಕಿಳಿಸಬಹುದಾಗಿದೆ.

ರಾಜವರ್ಧನ್ ಹಂಗರ್ಗೆಕರ್
ಈ ಬಾರಿಯ ಮೆಗಾ ಹರಾಜು ಪ್ರಕ್ರಿಯಯಲ್ಲಿ ರಾಜವರ್ಧನ್ ಹಂಗರ್ಗೆಕರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ೧.೫ ಕೋಟಿಗೆ ಖರೀದಿಸಿದ್ದು, ಇವರು ಟೀಮ್ ಇಂಡಿಯಾ ೨೦೨೨ರ ಅಂಡರ್ ೧೯ ವಿಶ್ವಕಪ್ ಗೆಲ್ಲುವಲ್ಲಿ ಪ್ರಮಖ ಪಾತ್ರ ನಿರ್ವಹಿಸಿದ್ದರು. ದೀಪಕ್ ಚಹರ್ ರೀತಿಯೇ ತಂಡಕ್ಕೆ ಬ್ಯಾಟಿಂಗ್ ಅಗತ್ಯ ಬಿದ್ದಾಗ ಬ್ಯಾಟ್ ಬೀಸಬಲ್ಲ ಸಾಮರ್ಥ್ಯವಿರುವ ರಾಜವರ್ಧನ್ ಹಂಗರ್ಗೆಕರ್ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಸಿಕ್ಸ್ ಬಾರಿಸುವ ಮೂಲಕ ಮಿಂಚಿದ್ದರು. ಹೀಗಾಗಿ ರಾಜವರ್ಧನ್ ಹಂಗರ್ಗೆಕರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ದೀಪಕ್ ಚಹರ್ ಸ್ಥಾನ ತುಂಬಲು ಬಳಸಿಕೊಳ್ಳಬಹುದಾಗಿದೆ.

ಕೆಎಮ್ ಆಸಿಫ್
ಕೇರಳ ಮೂಲದ ಬೌಲರ್ ಕೆಎಮ್ ಆಸಿಫ್ ೨೦೧೮ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರನಾಗಿದ್ದು, ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದಾರೆ. ೨೦೧೮ರ ಜೋನಲ್ ಟಿ ಟ್ವೆಂಟಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದ ಕೆಎಮ್ ಆಸಿಫ್ ಕೇರಳ ಪರ ಉತ್ತಮ ಪ್ರದರ್ಶನ ನೀಡಿದ್ದರು. ಈ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಆಸಿಫ್ ಅವರನ್ನು ೨೦೧೮ರ ಹರಾಜಿನಲ್ಲಿ ಖರೀದಿಸಿತ್ತು. ೨೦೨೦ರ ವಿಜಯ್ ಹಜಾರೆ ಟ್ರೋಫಿಯಲ್ಲಿ ೭ ಪಂದ್ಯಗಳನ್ನಾಡಿ ೧೪ ವಿಕೆಟ್ ಪಡೆದಿದ್ದ ಆಸಿಫ್ ದೀಪಕ್ ಚಹರ್ ಸ್ಥಾನ ತುಂಬಬಲ್ಲ ಆಟಗಾರನಾಗಿದ್ದಾರೆ. ಇನ್ನು ಆಸಿಫ್ ಈ ಹಿಂದೆ ೨೦೧೮ರ ಐಪಿಎಲ್ ಆವೃತ್ತಿಯಲ್ಲಿ ದೀಪಕ್ ಚಹರ್ ಅಲಭ್ಯರಾಗಿದ್ದ ಹಲವಾರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications