IPL 2022: ಮುಂಬರುವ ಆವೃತ್ತಿಗೂ ಮುನ್ನ ಆರ್‌ಸಿಬಿ ತನ್ನ ತಂಡದಿಂದ ಹೊರಹಾಕಬಹುದಾದ 3 ಆಟಗಾರರಿವರು!

ಈ ಬಾರಿ ನೂತನ ನಾಯಕ ಫಾಫ್ ಡು ಪ್ಲೆಸಿಸ್ ನಾಯಕತ್ವದಡಿಯಲ್ಲಿ ಕಣಕ್ಕಿಳಿದರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಎತ್ತಿ ಹಿಡಿಯಬೇಕೆಂಬ ತನ್ನ ಬಹುವರ್ಷಗಳ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.
ಆದರೆ ಈ ಬಾರಿ ಕಳೆದೆರಡು ವರ್ಷಗಳಿಗೆ ಹೋಲಿಸಿಕೊಂಡರೆ ಒಂದು ಹಂತ ಎತ್ತರಕ್ಕೆ ತಲುಪಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಕ್ವಾಲಿಫೈಯರ್ ಪಂದ್ಯದವರೆಗೂ ಬಂದು ಫೈನಲ್ ಪಂದ್ಯಕ್ಕೆ ಲಗ್ಗೆ ಇಡುವ ಅವಕಾಶವನ್ನು ಕೊನೆಯ ಹಂತದಲ್ಲಿ ಕೈ ತಪ್ಪಿಸಿಕೊಂಡಿತ್ತು. ಹೌದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಸುತ್ತಿಗೆ ಯಶಸ್ವಿಯಾಗಿ ಲಗ್ಗೆ ಇಟ್ಟಿದ್ದ ಫಾಫ್ ಡು ಪ್ಲೆಸಿಸ್ ಬಳಗ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಭರವಸೆ ಹೆಚ್ಚಿಸಿತ್ತು. ಆದರೆ ಇದರ ಬೆನ್ನಲ್ಲೇ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತ ಬೆಂಗಳೂರು ಟೂರ್ನಿಯಿಂದ ಹೊರಬಿದ್ದಿತು.
ಹೀಗೆ ಈ ವರ್ಷ ಹಲವಾರು ನೂತನ ಆಟಗಾರರೊಂದಿಗೆ ಕಣಕ್ಕಿಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ತಲುಪುವುದರಲ್ಲಿ ವಿಫಲವಾಗಿದ್ದರೆ, ತಂಡದ ಕೆಲ ಆಟಗಾರರು ಸರಿಯಾದ ಅವಕಾಶ ಸಿಗದೇ ಬೆಂಚ್ ಕಾದಿದ್ದಾರೆ. ಕೆಲ ಆಟಗಾರರಿಗೆ ಬೆರಳೆಣಿಕೆಯಷ್ಟು ಪಂದ್ಯಗಳಲ್ಲಿ ಮಾತ್ರ ಆಡುವ ಅವಕಾಶ ಲಭಿಸಿದ್ದರೆ, ಇನ್ನೂ ಕೆಲ ಆಟಗಾರರು ಟೂರ್ನಿಯುದ್ದಕ್ಕೂ ಯಾವುದೇ ಅವಕಾಶ ಸಿಗದೇ ಬೆಂಚ್ ಕಾದಿದ್ದಾರೆ. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗದಲ್ಲಿ ಹೆಚ್ಚಿನ ಅವಕಾಶ ನೀಡದ ಈ ಮೂವರು ಆಟಗಾರರನ್ನು ಮುಂಬರುವ ಐಪಿಎಲ್ ಸಲುವಾಗಿ ತಂಡದಿಂದ ಕೈ ಬಿಡುವ ಸಾಧ್ಯತೆಗಳು ಹೆಚ್ಚಿವೆ. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಿನ ವರ್ಷಕ್ಕಾಗಿ ತಂಡದಿಂದ ಕೈಬಿಡಬಹುದಾದ ಮೂವರು ಆಟಗಾರರ ಪಟ್ಟಿ ಮುಂದೆ ಇದೆ ಓದಿ.

1. ಸಿದ್ಧಾರ್ಥ್ ಕೌಲ್
ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ 8 ಪಂದ್ಯಗಳನ್ನಾಡಿ ಕೇವಲ 7 ವಿಕೆಟ್ ಪಡೆದಿದ್ದ ಸಿದ್ಧಾರ್ಥ್ ಕೌಲ್ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 75 ಲಕ್ಷಕ್ಕೆ ಖರೀದಿ ಮಾಡಿತ್ತು. ಆದರೆ ಟೂರ್ನಿಯ ಲೀಗ್ ಹಂತದ ಅಂತಿಮ ಪಂದ್ಯದವರೆಗೂ ಯಾವುದೇ ಅವಕಾಶ ಸಿಗದ ಸಿದ್ಧಾರ್ಥ್ ಕೌಲ್ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಆದರೆ ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಸಿದ್ಧಾರ್ಥ್ ಕೌಲ್ 43 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ದುಬಾರಿಯಾದರು. ಹೀಗೆ ಆಡುವ ಬಳಗದಲ್ಲಿ ಹೆಚ್ಚು ಅವಕಾಶ ಸಿಗದ ಮತ್ತು ಸಿಕ್ಕ ಒಂದು ಅವಕಾಶವನ್ನು ಸರಿಯಾದ ರೀತಿ ಬಳಸದ ಸಿದ್ಧಾರ್ಥ್ ಕೌಲ್ ಅವರನ್ನು ಬೆಂಗಳೂರು ಫ್ರಾಂಚೈಸಿ ತಂಡದಿಂದ ಹೊರ ಹಾಕುವ ಸಾಧ್ಯತೆಗಳಿದ್ದು ಇವರು ಮುಂದಿನ ಮಿನಿ ಹರಾಜಿನಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.

2. ಡೇವಿಡ್ ವಿಲ್ಲಿ
ಈ ಬಾರಿಯ ಮೆಗಾ ಹರಾಜಿನಲ್ಲಿ 2 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದ ಡೇವಿಡ್ ವಿಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ. ಆರಂಭದ ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ವಿಲ್ಲಿ 4 ಪಂದ್ಯಗಳ ಪೈಕಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದುಕೊಂಡು 18 ರನ್ ಕಲೆ ಹಾಕಿದ್ದರು. ಹೀಗೆ ಇಟ್ಟಿದ್ದ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿರುವ ಡೇವಿಡ್ ವಿಲ್ಲಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೈ ಬಿಡುವ ಸಾಧ್ಯತೆಗಳು ಹೆಚ್ಚಿವೆ.

3. ಕರ್ಣ್ ಶರ್ಮಾ
ಈ ಬಾರಿಯ ಮೆಗಾ ಹರಾಜಿನಲ್ಲಿ ಸ್ಪಿನ್ನರ್ ಕರ್ಣ್ ಶರ್ಮಾ ಅವರನ್ನು 50 ಲಕ್ಷ ರುಪಾಯಿಗಳಿಗೆ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯ ಯಾವುದೇ ಪಂದ್ಯದಲ್ಲಿಯೂ ಆಡುವ ಅವಕಾಶವನ್ನು ನೀಡಿಯೇ ಇಲ್ಲ. ತಂಡದಲ್ಲಿ ಮತ್ತೋರ್ವ ಸ್ಪಿನ್ನರ್ ವನಿಂದು ಹಸರಂಗ ಇದ್ದ ಕಾರಣ ಶರ್ಮಾಗೆ ಅವಕಾಶವೇ ಲಭಿಸಲಿಲ್ಲ ಎನ್ನಬಹುದು. ಹೀಗಾಗಿ ಕರ್ಣ್ ಶರ್ಮಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬರುವ ಮಿನಿ ಹರಾಜಿಗೂ ಮುನ್ನ ಕೈಬಿಟ್ಟು ಇದೇ ವೇಳೆ ಬೇರೆ ಆಟಗಾರರನ್ನು ಖರೀದಿಸುವ ಸಾದ್ಯತೆಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications