
ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 41ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಈ ಎರಡೂ ತಂಡಗಳು ಎರಡನೇ ಬಾರಿಗೆ ಪರಸ್ಪರ ಮುಖಾಮುಖಿಯಾಗುತ್ತಿದ್ದು, ಈ ಹಿಂದೆ ಏಪ್ರಿಲ್ 10ರಂದು ನಡೆದಿದ್ದ ಮೊದಲ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 44 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿತ್ತು.
ಇನ್ನು ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ನಂತರದ ಪಂದ್ಯಗಳಲ್ಲಿ ಹೆಚ್ಚಿನ ಗೆಲುವು ಸಾಧಿಸಲಾಗದೇ ಇದೀಗ ಅಂಕಪಟ್ಟಿಯಲ್ಲಿ ಕೆಳಮಟ್ಟದ ಸ್ಥಾನವನ್ನು ಹೊಂದಿವೆ. ಹೌದು, ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 7 ಪಂದ್ಯಗಳನ್ನಾಡಿರುವ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ 3 ಪಂದ್ಯಗಳಲ್ಲಿ ಗೆದ್ದು ಉಳಿದ 4 ಪಂದ್ಯಗಳಲ್ಲಿ ಸೋತು 6 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, 8 ಪಂದ್ಯಗಳನ್ನಾಡಿರುವ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ 3 ಪಂದ್ಯಗಳಲ್ಲಿ ಜಯ ಸಾಧಿಸಿ 5 ಪಂದ್ಯಗಳಲ್ಲಿ ಸೋತು 6 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ.
ಹೀಗೆ ಗೆಲುವಿಗಿಂತ ಸೋಲನ್ನೇ ಹೆಚ್ಚಾಗಿ ಕಂಡಿರುವ ಈ 2 ತಂಡಗಳು ಪ್ಲೇ ಆಫ್ ಹಾದಿಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಜಯ ಸಾಧಿಸಲೇಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಇತ್ತಂಡಗಳ ನಡುವಿನ ಈ ಪಂದ್ಯ ಕುತೂಹಲ ಕೆರಳಿಸಿದ್ದು, ಯಾವ ತಂಡ ಗೆಲ್ಲಲಿದೆ ಎಂಬ ಲೆಕ್ಕಾಚಾರದಲ್ಲಿ ಕ್ರೀಡಾಭಿಮಾನಿಗಳು ನಿರತರಾಗಿದ್ದರೆ, ಇನ್ನೂ ಕೆಲ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರನ್ನು ಆಯ್ಕೆ ಮಾಡುವತ್ತ ಚಿತ್ತ ನೆಟ್ಟಿದ್ದಾರೆ. ಹೀಗೆ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ರಚಿಸುತ್ತಿರುವ ಡ್ರೀಮ್ ಟೀಮ್‌ನಲ್ಲಿ ಈ ಕೆಳಕಂಡ ಮೂವರು ಆಟಗಾರರಿಗೆ ಸ್ಥಾನ ನೀಡದೆ ಇರುವುದು ಉತ್ತಮ ಎಂದು ಕ್ರಿಕೆಟ್ ಪರಿಣಿತರು ತಿಳಿಸಿದ್ದಾರೆ.
1. ರೋವ್ಮನ್ ಪೊವೆಲ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ ರೋವ್ಮನ್ ಪೊವೆಲ್ ಕಳೆದ ಪಂದ್ಯವನ್ನು ಹೊರತುಪಡಿಸಿದರೆ ಉಳಿದ ಪಂದ್ಯಗಳಲ್ಲಿ ಹೆಚ್ಚೇನೂ ಗಮನಾರ್ಹ ಪ್ರದರ್ಶನ ನೀಡಿಲ್ಲ. ಕಳೆದ ಪಂದ್ಯದಲ್ಲಿ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಿರುವ ರೋವ್ಮನ್ ಪೊವೆಲ್ ಇಲ್ಲಿಯವರೆಗೂ ಒಟ್ಟು 7 ಪಂದ್ಯಗಳನ್ನಾಡಿದ್ದು 67 ರನ್ ಕಲೆಹಾಕಿದ್ದಾರೆ. 11.16ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಪೊವೆಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತೀರ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಸುತ್ತಿದ್ದು, ಈತನಿಂದ ನಿಮ್ಮ ಡ್ರೀಮ್ ತಂಡಕ್ಕೆ ಹೆಚ್ಚಿನ ಅಂಕಗಳೇನೂ ಲಭಿಸುವುದಿಲ್ಲ. ಹೀಗಾಗಿ ಪೊವೆಲ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಸೂಕ್ತ.
2. ವೆಂಕಟೇಶ್ ಅಯ್ಯರ್
ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಹೀರೋ ಆಗಿ ಹೊರಹೊಮ್ಮಿದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವೆಂಕಟೇಶ್ ಅಯ್ಯರ್ ಈ ಬಾರಿಯ ಟೂರ್ನಿಯಲ್ಲಿ ಅದೇ ರೀತಿಯ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 8 ಪಂದ್ಯಗಳನ್ನಾಡಿರುವ ವೆಂಕಟೇಶ್ ಅಯ್ಯರ್ 126 ರನ್ ಕಲೆಹಾಕಿದ್ದು, ಸಾಲು ಸಾಲು ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ಹೀಗೆ ಮಂಕಾಗಿರುವ ವೆಂಕಟೇಶ್ ಅಯ್ಯರ್ ಅವರನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಉತ್ತಮ.
3. ಶಿವಂ ಮಾವಿ
ಟೂರ್ನಿಯಲ್ಲಿ ಇಲ್ಲಿಯವರೆಗೂ 4 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಬೌಲರ್ ಶಿವಂ ಮಾವಿ ಕೇವಲ 3 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಹಾಗೂ ಈ ಪಂದ್ಯಗಳಲ್ಲಿ ಶಿವಮ್ ಮಾವಿ ಎದುರಾಳಿ ತಂಡಕ್ಕೆ ಕಂಟಕವಾಗುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಹೀಗಾಗಿ ಶಿವಂ ಮಾವಿ ಅವರನ್ನು ನಿಮ್ಮ ಡ್ರೀಮ್ ತಂಡದಿಂದ ಕೈಬಿಡುವುದು ಉತ್ತಮ ಆಯ್ಕೆ ಎನ್ನಬಹುದು.