
ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 34ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸುತ್ತಿವೆ. ಪುಣೆಯ ಎಂಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿರುವ ಕಾರಣದಿಂದಾಗಿ ಪ್ರಯಾಣ ತಪ್ಪಿಸಲು ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಇಲ್ಲಿಯವರೆಗೂ ಒಟ್ಟು 6 ಪಂದ್ಯಗಳನ್ನಾಡಿದ್ದು, ನಾಲ್ಕರಲ್ಲಿ ಜಯ ಸಾಧಿಸಿ ಉಳಿದೆರಡು ಪಂದ್ಯಗಳಲ್ಲಿ ಸೋತು 8 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿದ್ದು, ಮೂರು ಪಂದ್ಯಗಳಲ್ಲಿ ಸೋತು ಉಳಿದ ಮೂರು ಪಂದ್ಯಗಳಲ್ಲಿ ಗೆದ್ದು, 6 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 10.3 ಓವರ್‌ಗಳಲ್ಲಿ 116 ರನ್ ಗುರಿಯನ್ನು ಚೇಸ್ ಮಾಡುವ ಮೂಲಕ 9 ವಿಕೆಟ್‌ಗಳ ಬೃಹತ್ ಗೆಲುವನ್ನು ಸಾಧಿಸಿತ್ತು. ಇತ್ತ ರಾಜಸ್ಥಾನ್ ರಾಯಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ರನ್‌ಗಳ ಗೆಲುವನ್ನು ಸಾಧಿಸಿತ್ತು. ಹೀಗೆ ತಮ್ಮ ತಮ್ಮ ಕೊನೆಯ ಪಂದ್ಯಗಳಲ್ಲಿ ಜಯ ದಾಖಲಿಸಿರುವ ಇತ್ತಂಡಗಳ ಈ ಮುಖಾಮುಖಿಯಲ್ಲಿ ಯಾವ ತಂಡ ಜಯ ಸಾಧಿಸಬಹುದು ಎಂಬ ಲೆಕ್ಕಾಚಾರಗಳಲ್ಲಿ ಕೆಲ ಕ್ರಿಕೆಟ್ ಅಭಿಮಾನಿಗಳು ತೊಡಗಿಕೊಂಡಿದ್ದರೆ, ಇನ್ನೂ ಕೆಲ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು, ಉತ್ತಮ ಪ್ರದರ್ಶನ ನೀಡಬಹುದಾದ ಆಟಗಾರರನ್ನು ಈ ತಂಡಗಳಿಗೆ ಆಯ್ಕೆ ಮಾಡುತ್ತಿದ್ದಾರೆ. ಹೀಗೆ ರಚಿಸಲಾಗುತ್ತಿರುವ ಡ್ರೀಮ್ ಟೀಮ್‌ನಿಂದ ಕಳಪೆ ಪ್ರದರ್ಶನ ನೀಡಬಹುದಾದ ಈ ಕೆಳಕಂಡ ಮೂವರು ಆಟಗಾರರನ್ನು ಹೊರಗಿಡುವುದು ಉತ್ತಮ ಆಯ್ಕೆ ಎನ್ನಬಹುದು.

1. ರೋವ್‌ಮನ್ ಪೊವೆಲ್
ತನ್ನ ಹೊಡಿಬಡಿ ಆಟದಿಂದ ಖ್ಯಾತಿಯನ್ನು ಪಡೆದಿರುವ ರೋವ್‌ಮನ್ ಪೊವೆಲ್ ಆಟ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆಯುತ್ತಿಲ್ಲ. ಆಡಿರುವ ಒಟ್ಟು 6 ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳಲ್ಲಿ ಒಂದಂಕಿ ರನ್ ಗಳಿಸಿರುವ ರೋವ್‌ಮನ್ ಪೊವೆಲ್ ಕಳೆದ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶವನ್ನೂ ಸಹ ಪಡೆದುಕೊಂಡಿಲ್ಲ. ಹೀಗಾಗಿ ರೋವ್‌ಮನ್ ಪೊವೆಲ್ ಅವರನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಉತ್ತಮ ಆಯ್ಕೆ ಎನ್ನಬಹುದು.
2. ಕರುಣ್ ನಾಯರ್
ಕಳೆದ ಪಂದ್ಯದಲ್ಲಿ ರಸ್ಸಿ ವಾನ್‌ಡರ್ ಡುಸೆನ್ ಬದಲಾಗಿ ರಾಜಸ್ಥಾನ್ ರಾಯಲ್ಸ್ ಆಡುವ ಬಳಗದಲ್ಲಿ ಕಣಕ್ಕಿಳಿದಿದ್ದ ಕರುಣ್ ನಾಯರ್ ಉತ್ತಮ ರನ್ ಗಳಿಸುವಲ್ಲಿ ಸಫಲರಾಗಲಿಲ್ಲ. ಇನ್ನು ಇಂದಿನ ಪಂದ್ಯದಲ್ಲಿಯೂ ಕರುಣ್ ನಾಯರ್ ಮತ್ತೊಂದು ಅವಕಾಶ ಪಡೆದುಕೊಳ್ಳುವ ಸಾಧ್ಯತೆಗಳಿದ್ದರೂ ಸಹ ಆತನ ಬದಲಾಗಿ ಇತರೆ ಬ್ಯಾಟರ್‌ಗಳನ್ನು ನಿಮ್ಮ ಡ್ರೀಮ್ ಟೀಮ್‌ಗೆ ತೆಗೆದುಕೊಳ್ಳುವುದು ಉತ್ತಮ ಆಯ್ಕೆ ಎನ್ನಬಹುದು.
3. ಮುಸ್ತಫಿಜರ್ ರಹಮಾನ್
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಪದಾರ್ಪಣೆ ಮಾಡಿದ ಮುಸ್ತಫಿಜರ್ ರಹಮಾನ್ ಆ ಪಂದ್ಯದಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ನಂತರ ಆಡಿದ ಮೂರು ಪಂದ್ಯಗಳಲ್ಲಿ ತನ್ನ ಪಾಲಿನ ಎಲ್ಲಾ ಓವರ್‌ಗಳನ್ನೂ ಮಾಡಿದ್ದ ರಹಮಾನ್ ಯಾವುದೇ ವಿಕೆಟ್ ಪಡೆಯದೇ ಮಂಕಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 48 ರನ್ ನೀಡಿ ದುಬಾರಿಯಾಗಿದ್ದ ಮುಸ್ತಫಿಜರ್ ರಹಮಾನ್ ಕಳೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾದರು. ಹೀಗೆ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ರಹಮಾನ್ ಬದಲು ವಿಕೆಟ್ ಪಡೆಯಬಲ್ಲ ಬೇರೆ ಆಟಗಾರರನ್ನು ನಿಮ್ಮ ಡ್ರೀಮ್ ಟೀಮ್‌ಗೆ ಆರಿಸಿಕೊಳ್ಳುವುದು ಉತ್ತಮ.