
ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 47ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದು ಈ ಬಾರಿ ಇತ್ತಂಡಗಳು ಸೆಣಸಾಡುತ್ತಿರುವ ಎರಡನೇ ಪಂದ್ಯವಾಗಿದೆ.
ಹೌದು, ಇತ್ತಂಡಗಳ ನಡುವೆ ಮೊದಲು ನಡೆದಿದ್ದ ಪಂದ್ಯದಲ್ಲಿ 20 ಓವರ್‌ಗಳಲ್ಲಿ 217 ರನ್ ಗಳಿಸಿದ್ದ ರಾಜಸ್ಥಾನ್ ರಾಯಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 210 ರನ್‌ಗಳಿಗೆ ಆಲ್ಔಟ್ ಮಾಡಿ 7 ರನ್‌ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ತಂಡದ ಸ್ಪೋಟಕ ಆಟಗಾರ ಜೋಸ್ ಬಟ್ಲರ್ ಟೂರ್ನಿಯ ಎರಡನೇ ಅರ್ಧಶತಕವನ್ನು ದಾಖಲಿಸಿದ್ದರು ಹಾಗೂ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದ ಯುಜುವೇಂದ್ರ ಚಹಲ್ ಐದು ವಿಕೆಟ್‌ಗಳ ಗೊಂಚಲನ್ನೂ ಸಹ ಪಡೆದುಕೊಂಡಿದ್ದರು.
ಹೀಗೆ ಟೂರ್ನಿಯಲ್ಲಿನ ಮೊದಲ ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಸದ್ಯ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 9 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು, 6 ಪಂದ್ಯಗಳಲ್ಲಿ ಸೋತು 6 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದು, ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಬೇಕೆಂದರೆ ಇನ್ನುಳಿದ ಎಲ್ಲಾ ಪಂದ್ಯಗಳಲ್ಲೂ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ ಹಾಗೂ 9 ಪಂದ್ಯಗಳನ್ನಾಡಿ 6 ಪಂದ್ಯಗಳಲ್ಲಿ ಗೆದ್ದು 3 ಪಂದ್ಯಗಳಲ್ಲಿ ಸೋತು 12 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಗೆದ್ದು ತನ್ನ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಸುಲಭ ಮಾಡಿಕೊಳ್ಳುವ ಯೋಜನೆಯಲ್ಲಿದೆ. ಕ್ರಿಕೆಟ್ ಪ್ರೇಮಿಗಳು ಒಂದೆಡೆ ಈ ಪಂದ್ಯದಲ್ಲಿ ಯಾವ ತಂಡ ಉತ್ತಮ ಪ್ರದರ್ಶನ ನೀಡಬಹುದು ಎಂಬ ಲೆಕ್ಕಾಚಾರದಲ್ಲಿದ್ದರೆ, ಮತ್ತೊಂದೆಡೆ ಇನ್ನೂ ಕೆಲ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು, ಈ ತಂಡದಲ್ಲಿ ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಬಹುದು ಎಂಬ ಊಹೆಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಕ್ರಿಕೆಟ್ ಪರಿಣಿತರು ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಈ ಕೆಳಕಂಡ ಮೂವರು ಆಟಗಾರರು ಕಳಪೆ ಪ್ರದರ್ಶನ ನೀಡಬಹುದು ಎಂದು ಊಹಿಸಿದ್ದು, ಈ ಆಟಗಾರರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಆಯ್ಕೆ ಎನ್ನಬಹುದು.
1. ಆರನ್ ಫಿಂಚ್: ಕಳೆದ ಗುರುವಾರದಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟೂರ್ನಿಯ ತನ್ನ ಮೂರನೇ ಪಂದ್ಯವನ್ನಾಡಿದ ಆರನ್ ಫಿಂಚ್ ಕೇವಲ 3 ರನ್ ಗಳಿಸಿ ಔಟ್ ಆದರು. ಇನ್ನು ಸತತವಾಗಿ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿರುವ ಆರನ್ ಫಿಂಚ್ ಈ ಪಂದ್ಯದಲ್ಲಿಯೂ ಹೊರಗುಳಿಯುವ ಸಾಧ್ಯತೆಗಳಿವೆ. ಈ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿದ್ದು, ಹೀಗಾದರೆ ಆರನ್ ಫಿಂಚ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಆರನ್ ಫಿಂಚ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಎನ್ನಬಹುದು.
2. ವೆಂಕಟೇಶ್ ಐಯ್ಯರ್: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ವೆಂಕಟೇಶ್ ಐಯ್ಯರ್ ಉಳಿದ ಯಾವುದೇ ಪಂದ್ಯದಲ್ಲಿಯೂ ಸಹ 20 ರನ್ ಗಡಿ ದಾಟಿಯೇ ಇಲ್ಲ. ಹೀಗಾಗಿ ವೆಂಕಟೇಶ್ ಐಯ್ಯರ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಒಳ್ಳೆಯದು.
3. ಡೇರಿಲ್ ಮಿಚೆಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಡೇರಿಲ್ ಮಿಚೆಲ್ ಆ ಪಂದ್ಯದಲ್ಲಿ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು 16 ರನ್ ಗಳಿಸಿತ್ತು ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದಿದ್ದ ಕಡೆಯ ಪಂದ್ಯದಲ್ಲಿ ಡೇರಿಲ್ ಮಿಚೆಲ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಸಹ ಅದೃಷ್ಟ ಕೈಹಿಡಿಯಲಿಲ್ಲ, ಡೇರಿಲ್ ಮಿಚೆಲ್ 17 ರನ್ ಗಳಿಸಿ ಔಟ್ ಆದರು. ಹೀಗಾಗಿ ಡೇರಿಲ್ ಮಿಚೆಲ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಆಯ್ಕೆ.