
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿದ್ದು, ಆರಂಭದಲ್ಲಿ ಕಳಪೆ ಪ್ರದರ್ಶನ ತೋರಿದ್ದ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡ ನಂತರದಲ್ಲಿ ಸುಧಾರಿಸಿಕೊಂಡಿದ್ದು ಕಮ್ ಬ್ಯಾಕ್ ಮಾಡಿದೆ.
ಹೌದು, ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತೀರಾ ಕೆಳಮಟ್ಟದ ಪ್ರದರ್ಶನ ನೀಡಿದ ತಂಡ ಎನಿಸಿಕೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ಈ ಬಾರಿಯ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತು ನಂತರ ನಡೆದ ಮೂರನೇ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ನಾಲ್ಕನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡಕ್ಕೆ ಸೋಲುಣಿಸಿತು. ಹೀಗೆ ಆರಂಭದಲ್ಲೇ ಮುಗ್ಗರಿಸಿ ನಂತರ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತು ಈ ಬಾರಿಯ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಸೋಲುಣಿಸಿರುವ ಸನ್ ರೈಸರ್ಸ್ ಹೈದರಾಬಾದ್ ತನ್ನ ಐದನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸುತ್ತಿದ್ದು, ಈ ಪಂದ್ಯದಲ್ಲಿ ಗೆದ್ದು ಹ್ಯಾಟ್ರಿಕ್ ಜಯ ಸಾಧಿಸಲಿದೆಯಾ ಎಂಬ ಕುತೂಹಲ ಮೂಡಿದೆ.
ಇತ್ತ ಕೋಲ್ಕತ್ತ ನೈಟ್ ರೈಡರ್ಸ್ ಸಹ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಆರಂಭವನ್ನೇ ಪಡೆದುಕೊಂಡಿದ್ದು 5 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು ಉಳಿದೆರಡು ಪಂದ್ಯಗಳಲ್ಲಿ ಸೋಲುವುದರ ಮೂಲಕ ಸದ್ಯ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ನಡುವಿನ ಈ ಪಂದ್ಯ ಇಂದು ( ಏಪ್ರಿಲ್ 15 ) ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಗೆಲುವು ಯಾರಿಗೆ ಸಿಗಲಿದೆ ಎಂಬ ಲೆಕ್ಕಾಚಾರಗಳ ನಡುವೆ ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ನಿರ್ಮಿಸುತ್ತಿರುವ ಕೆಲ ಕ್ರಿಕೆಟ್ ಪ್ರೇಮಿಗಳು ಯಾವ ಆಟಗಾರರನ್ನು ತಂಡದಲ್ಲಿ ಹಾಕಿಕೊಳ್ಳಬೇಕು ಮತ್ತು ಯಾವ ಆಟಗಾರರನ್ನು ತಂಡದಿಂದ ಹೊರಗಿಡಬೇಕು ಎಂಬುದರ ಕುರಿತು ಚರ್ಚಿಸುತ್ತಿದ್ದಾರೆ. ಹೀಗೆ ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು ಈ ಕೆಳಕಂಡ ಮೂವರು ಆಟಗಾರರನ್ನು ತಮ್ಮ ತಂಡಗಳಿಂದ ಹೊರಗಿಡುವುದು ಸೂಕ್ತ.
1. ಶಶಾಂಕ್ ಸಿಂಗ್
ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 34 ಪಂದ್ಯಗಳನ್ನಾಡಿ 424 ರನ್ ಕಲೆಹಾಕಿರುವ ಶಶಾಂಕ್ ಸಿಂಗ್ ಕಳೆದೆರಡು ಪಂದ್ಯಗಳಲ್ಲಿ ಬ್ಯಾಟ್ ಬೀಸುವ ಅವಕಾಶವನ್ನು ಪಡೆದುಕೊಂಡಿಲ್ಲ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೆಸರನ್ನು ಮಾಡಿರದ ಈ ಕ್ರಿಕೆಟಿಗ ಬ್ಯಾಟ್ ಬೀಸುವ ಅವಕಾಶ ಪಡೆದುಕೊಂಡರೂ ಕೂಡ ಕೆಳಕ್ರಮಾಂಕದ ದಾಂಡಿಗನಾಗಿ ಕಣಕ್ಕಿಳಿಯಬಹುದು. ಹೀಗಿರುವಾಗ ಈತನಿಂದ ನಿಮ್ಮ ಡ್ರೀಮ್ ತಂಡಕ್ಕೆ ಹೆಚ್ಚಿನ ಅಂಕಗಳ ನಿರೀಕ್ಷೆಯನ್ನು ಮಾಡುವುದು ಸರಿಯಲ್ಲ. ಹೀಗಾಗಿ ಈತನನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಆಯ್ಕೆ.
2. ರಸಿಖ್ ಸಲಾಂ
ಕಳೆದ ಪಂದ್ಯದಲ್ಲಿ ಕೇವಲ ಒಂದೇ ಒಂದು ಓವರ್ ಬೌಲಿಂಗ್ ಮಾಡಿದ ರಸಿಖ್ ಸಲಾಂ ಯಾವುದೇ ವಿಕೆಟ್ ಪಡೆಯದೇ ಉಳಿದರು. ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿ ಹಲವಾರು ಬೌಲಿಂಗ್ ಆಯ್ಕೆಗಳು ಇರುವ ಕಾರಣ ಈ ಪಂದ್ಯದಲ್ಲಿಯೂ ಕೂಡ ರಸಿಖ್ ಸಲಾಂಗೆ ಬೌಲಿಂಗ್ ಮಾಡುವ ಅವಕಾಶ ಹೆಚ್ಚು ಸಿಗುವುದಿಲ್ಲ ಎನ್ನಬಹುದು. ಹೀಗಾಗಿ ಈತನನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಉತ್ತಮ.
3. ಉಮ್ರಾನ್ ಮಲಿಕ್
ಉಮ್ರಾನ್ ಮಲಿಕ್ ತಾನು ಆಡುತ್ತಿರುವ ಪ್ರತಿ ಪಂದ್ಯದಲ್ಲಿಯೂ ವೇಗದ ಎಸೆತವನ್ನು ಹಾಕಿ ಸದ್ದು ಮಾಡುತ್ತಿದ್ದಾರೆಯೇ ಹೊರತು, ಅದಕ್ಕೆ ತಕ್ಕಂತೆ ವಿಕೆಟ್ ಪಡೆದು ಸದ್ದು ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ 3 ಓವರ್ ಮಾಡಿ 39 ರನ್ ನೀಡಿ ದುಬಾರಿಯಾಗಿದ್ದ ಉಮ್ರಾನ್ ಮಲಿಕ್ ಟೂರ್ನಿಯಲ್ಲಿ ಆಡಿರುವ ಒಟ್ಟು 4 ಪಂದ್ಯಗಳ ಪೈಕಿ 3 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಹೀಗೆ ವಿಕೆಟ್ ಪಡೆದ ಉಮ್ರಾನ್ ಮಲಿಕ್ ಅವರನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಸೂಕ್ತ.