
ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿಯಲ್ಲಿನ 59ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಈ ಪೈಕಿ ಮುಂಬೈ ಇಂಡಿಯನ್ಸ್ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಈಗಾಗಲೇ ಕಳೆದುಕೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸುವ ಅವಕಾಶಗಳನ್ನು ಕೊಂಚ ಮಟ್ಟದಲ್ಲಿ ಹೊಂದಿದೆ. ಹೀಗಾಗಿ ಇತ್ತಂಡಗಳ ನಡುವಿನ ಈ ಪಂದ್ಯ ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೆಚ್ಚು ಮುಖ್ಯದ್ದಾಗಿದೆ ಎನ್ನಬಹುದು.
ಇನ್ನು ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ದಾಖಲಿಸಿದರೆ ತನ್ನ ಪ್ಲೇಆಫ್ ಪ್ರವೇಶಿಸುವ ಅವಕಾಶಗಳನ್ನು ಜೀವಂತವಾಗಿರಿಸಿಕೊಳ್ಳಲಿದ್ದು, ಒಂದುವೇಳೆ ಮುಂಬೈ ಇಂಡಿಯನ್ಸ್ ಜಯ ಸಾಧಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಪ್ರವೇಶದ ಹಾದಿಗೆ ಕಲ್ಲು ಬೀಳಲಿದೆ. ಹೀಗಾಗಿ ಇಂದಿನ ಪಂದ್ಯ ಕುತೂಹಲವನ್ನು ಕೊಂಚ ಮಟ್ಟದಲ್ಲಿ ಕೆರಳಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಇನ್ನು ಒಂದೆಡೆ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬುದರ ಕುರಿತು ಕೆಲ ಕ್ರಿಕೆಟ್ ಅಭಿಮಾನಿಗಳು ಚರ್ಚೆಯನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ಈ ಪಂದ್ಯಕ್ಕಾಗಿ ಡ್ರೀಂ ಟೀಂ ರಚಿಸುತ್ತಿದ್ದು, ಯಾವ ಆಟಗಾರರನ್ನು ಆರಿಸಬೇಕು ಎನ್ನುವುದರಲ್ಲಿ ನಿರತರಾಗಿದ್ದಾರೆ. ಹೀಗೆ ಡ್ರೀಂ ಟೀಮ್ ರಚಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಬಹುದಾದ ಈ ಕೆಳಕಂಡ ಮೂವರು ಆಟಗಾರರನ್ನು ಕಡೆಗಣಿಸದೇ ಇದ್ದರೆ ಉತ್ತಮ ಎನ್ನಬಹುದು.
1. ರಾಬಿನ್ ಉತ್ತಪ್ಪ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ್ದ ರಾಬಿನ್ ಉತ್ತಪ್ಪ ಆ ಕ್ರಮಾಂಕದಲ್ಲಿ ಎರಡು ಅರ್ಧಶತಕಗಳನ್ನು ಸಹ ಸಿಡಿಸಿದ್ದರು. ಆದರೆ ನಂತರದ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಆರಂಭಿನಾಗಿದ್ದಾಗ ನೀಡುತ್ತಿದ್ದ ರೀತಿಯ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಅದರಲ್ಲಿಯೂ ಕೊನೆಯ ನಾಲ್ಕು ಪಂದ್ಯಗಳಲ್ಲಿ ಉತ್ತಪ್ಪ ಎರಡಂಕಿ ರನ್ ಮುಟ್ಟುವಲ್ಲಿಯೂ ಸಹ ವಿಫಲರಾಗಿದ್ದಾರೆ.
2. ರಮಣ್‌ದೀಪ್ ಸಿಂಗ್: 25 ವರ್ಷದ ಪಂಜಾಬ್ ಮೂಲದ ಕ್ರಿಕೆಟಿಗ ರಮಣ್‌ದೀಪ್ ಸಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಮೂಲಕ ಮುಂಬೈ ಇಂಡಿಯನ್ಸ್ ಪರ ಪದಾರ್ಪಣೆ ಮಾಡಿ ಆ ಪಂದ್ಯದಲ್ಲಿ ಕೇವಲ 6 ರನ್ ಕಲೆಹಾಕಿದರು. ಇದಾದ ನಂತರ ಸೂರ್ಯಕುಮಾರ್ ಯಾದವ್ ಗಾಯದ ಸಮಸ್ಯೆಗೆ ಒಳಗಾಗುವವರೆಗಿನ ಯಾವುದೇ ಪಂದ್ಯದಲ್ಲಿಯೂ ಅವಕಾಶ ಪಡೆದುಕೊಳ್ಳದೇ ಇದ್ದ ರಮಣ್‌ದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡದ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದು ಕೇವಲ 12 ರನ್ ಬಾರಿಸಿದ್ದರು. ಹೀಗೆ ಸೂರ್ಯಕುಮಾರ್ ಯಾದವ್ ಬದಲು ಕಣಕ್ಕಿಳಿದು ಆತನ ಸ್ಥಾನ ತುಂಬುವಲ್ಲಿ ವಿಫಲರಾಗಬಹುದಾದ ರಮಣ್‌ದೀಪ್ ಸಿಂಗ್ ಅವರನ್ನು ನಿಮ್ಮ ಡ್ರೀಂ ತಂಡದಿಂದ ಹೊರಗಿಡುವುದು ಉತ್ತಮ ಎನ್ನಬಹುದು.
3. ಕೀರನ್ ಪೊಲಾರ್ಡ್: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಳೆದ ಆವೃತ್ತಿಗಳ ಹಾಗೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಕೀರನ್ ಪೊಲಾರ್ಡ್ ಇಲ್ಲಿಯವರೆಗೂ ಕಣಕ್ಕಿಳಿದಿರುವ ಪಂದ್ಯಗಳ ಪೈಕಿ ಒಮ್ಮೆಯೂ 25 ರನ್‌ಗಳ ಗಡಿಯನ್ನು ದಾಟುವಲ್ಲಿ ಯಶಸ್ವಿಯಾಗಿಲ್ಲ. ಹಾಗೂ ಬೌಲಿಂಗ್‌ನಲ್ಲಿಯೂ ವಿಫಲರಾಗಿರುವ ಕೀರನ್ ಪೊಲಾರ್ಡ್ ಕೇವಲ 4 ವಿಕೆಟ್ ಪಡೆಯುವಲ್ಲಿ ಮಾತ್ರ ಶಕ್ತರಾಗಿದ್ದಾರೆ. ಹೀಗಾಗಿ ಕೀರನ್ ಪೊಲಾರ್ಡ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಎನ್ನಬಹುದು.