
ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 56ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಇತ್ತಂಡಗಳ ನಡುವಿನ ಈ ಪಂದ್ಯ ಇಂದು ( ಮೇ 9 ) ಸಂಜೆ 7.30ಕ್ಕೆ ಆರಂಭವಾಗಲಿದ್ದು, ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಪ್ಲೇ ಆಫ್ ಪ್ರವೇಶಿಸುವ ಅವಕಾಶಗಳನ್ನು ಈಗಾಗಲೇ ಕಳೆದುಕೊಂಡಿರುವ ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಜಯ ಸಾಧಿಸಿದರೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇ ಆಫ್ ಪ್ರವೇಶಿಸುವ ಕನಸಿಗೆ ತಣ್ಣೀರು ಬೀಳಲಿದೆ. ಹೀಗಾಗಿ ಕೋಲ್ಕತ್ತ ನೈಟ್ ರೈಡರ್ಸ್ ಈ ಪಂದ್ಯದಲ್ಲಿ ಎದುರಾಳಿ ಮುಂಬೈ ಇಂಡಿಯನ್ಸ್ ತಂಡವನ್ನು ಕಡ್ಡಾಯವಾಗಿ ಸೋಲಿಸಲೇಬೇಕಾದ ಅನಿವಾರ್ಯತೆಯಲ್ಲಿದೆ.
ಹೀಗೆ ಕುತೂಹಲವನ್ನು ಕೆರಳಿಸಿರುವ ಈ ಪಂದ್ಯದಲ್ಲಿ ಯಾವ ತಂಡ ಜಯ ಸಾಧಿಸಬಹುದು ಎಂಬ ಲೆಕ್ಕಾಚಾರಗಳಲ್ಲಿ ಕೆಲ ಕ್ರಿಕೆಟ್ ಪ್ರೇಮಿಗಳು ತೊಡಗಿಕೊಂಡಿದ್ದರೆ, ಮತ್ತೊಂದಿಷ್ಟು ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು, ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರನ್ನು ಊಹಿಸಿ ಆರಿಸುವುದರಲ್ಲಿ ನಿರತರಾಗಿದ್ದಾರೆ. ಹೀಗೆ ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುವ ಸಾಧ್ಯತೆಗಳಿರುವ ಈ ಕೆಳಕಂಡ ಮೂವರು ಆಟಗಾರರನ್ನು ಕಡೆಗಣಿಸುವುದು ಉತ್ತಮ ಎಂದೇ ಹೇಳಬಹುದು.
1. ಆ್ಯರನ್ ಫಿಂಚ್: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಅರ್ಧಶತಕವನ್ನು ಹೊರತುಪಡಿಸಿದರೆ ಇನ್ಯಾವುದೇ ಪಂದ್ಯದಲ್ಲಿಯೂ ಆ್ಯರನ್ ಫಿಂಚ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮಿಂಚಿಲ್ಲ. ಆಡಿರುವ ಒಟ್ಟು 5 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಕೇವಲ ಒಂದಂಕಿ ರನ್ ಕಲೆಹಾಕಿರುವ ಆ್ಯರನ್ ಫಿಂಚ್ ಕಳೆದ ಪಂದ್ಯದಲ್ಲಿ ಕೇವಲ 14 ರನ್ ಕಲೆಹಾಕಿದ್ದಾರೆ. ಹೀಗೆ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಪರದಾಡುತ್ತಿರುವ ಆ್ಯರನ್ ಫಿಂಚ್ ಅವರನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಸೂಕ್ತ.
2. ಕೀರನ್ ಪೊಲಾರ್ಡ್: ಇಷ್ಟು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಅಬ್ಬರಿಸುತ್ತಿದ್ದ ಕೀರನ್ ಪೊಲಾರ್ಡ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಪಂದ್ಯವೊಂದರಲ್ಲಿ 25ಕ್ಕಿಂತ ಹೆಚ್ಚು ರನ್ ಕಲೆಹಾಕುವಲ್ಲಿ ವಿಫಲರಾಗಿರುವ ಕೀರನ್ ಪೊಲಾರ್ಡ್ ಬೌಲಿಂಗ್ ವಿಭಾಗದಲ್ಲಿಯೂ ವಿಫಲರಾಗಿದ್ದಾರೆ. ಟೂರ್ನಿಯಲ್ಲಿ ಇಲ್ಲಿಯವರೆಗೂ ಕೀರನ್ ಪೊಲಾರ್ಡ್ ಕಬಳಿಸಿರುವ ವಿಕೆಟ್ ಸಂಖ್ಯೆ ಕೇವಲ 4.
3. ಸುನಿಲ್ ನರೈನ್: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿರುವ ಫ್ರಾಂಚೈಸಿ ಕ್ರಿಕೆಟ್ ಲೀಗ್ ದಿಗ್ಗಜರಲ್ಲಿ ಸುನಿಲ್ ನರೈನ್ ಕೂಡ ಓರ್ವರು. ತನ್ನ ವರ್ಚಸ್ಸಿಗೆ ತಕ್ಕಂತೆ ವಿಕೆಟ್ ಕಬಳಿಸುವಲ್ಲಿ ವಿಫಲರಾಗಿರುವ ಸುನಿಲ್ ನರೈನ್ ಬ್ಯಾಟಿಂಗ್ ಕೂಡಾ ನೆಲಕಚ್ಚಿದೆ. ಹೀಗಾಗಿ ಸುನಿಲ್ ನರೈನ್ ಅವರನ್ನು ಸಹ ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಉತ್ತಮ.