RCB vs LSG Eliminator: ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಬಹುದಾದ ಮೂವರು ಆಟಗಾರರಿವರು!

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ನೂತನ ನಾಯಕನಾದ ಡುಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೀಗ್ ಹಂತದ ಮಧ್ಯದಲ್ಲಿ ಸಾಮಾನ್ಯ ಪ್ರದರ್ಶನ ನೀಡಿದ ಹೊರತಾಗಿಯೂ ಪ್ಲೇ ಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಲೀಗ್ ಹಂತದ ತನ್ನ ಅಂತಿಮ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದ್ದರ ನೆರವಿನಿಂದ ಪ್ಲೇ ಆಫ್ ಸುತ್ತಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪ್ಲೇ ಆಫ್ ಸುತ್ತಿನಲ್ಲಿ ಎಲಿಮಿನೇಟರ್ ಪಂದ್ಯಕ್ಕೆ ಪ್ರವೇಶ ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ( ಮೇ 25 ) ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈಗಾಗಲೇ ಲೀಗ್ ಹಂತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಿ ಸೋಲುಣಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲಿಮಿನೇಟರ್ ಪಂದ್ಯದಲ್ಲಿಯೂ ಅದೇ ರೀತಿಯ ಫಲಿತಾಂಶವನ್ನು ಹೊರತರುವತ್ತ ಚಿತ್ತ ನೆಟ್ಟಿದೆ.
ಇತ್ತ ಲೀಗ್ ಹಂತದಲ್ಲಿ 18 ಅಂಕಗಳನ್ನು ಪಡೆದುಕೊಂಡರೂ ಸಹ ಕಡಿಮೆ ನೆಟ್ ರನ್ ರೇಟ್ ಹೊಂದಿದ್ದ ಕಾರಣದಿಂದಾಗಿ ಕ್ವಾಲಿಫೈಯರ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವ ಅವಕಾಶವನ್ನು ಕೈ ತಪ್ಪಿಸಿಕೊಂಡು ಎಲಿಮಿನೇಟರ್ ಸುತ್ತಿಗೆ ಆಗಮಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇನ್ನು ಈ ಪಂದ್ಯದಲ್ಲಿ ಗೆಲ್ಲುವ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆದುಕೊಳ್ಳಲಿದ್ದು, ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು, ಹಲವು ಕ್ರಿಕೆಟ್ ಅಭಿಮಾನಿಗಳು ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬುದನ್ನು ಊಹಿಸುವಲ್ಲಿ ನಿರತರಾಗಿದ್ದರೆ, ಇನ್ನೂ ಕೆಲ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು, ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರನ್ನು ಆಯ್ಕೆ ಮಾಡುವಲ್ಲಿ ನಿರತರಾಗಿದ್ದಾರೆ. ಅಂತಹ ಕ್ರಿಕೆಟ್ ಅಭಿಮಾನಿಗಳು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುವ ಸಾಧ್ಯತೆಗಳು ಹೆಚ್ಚಿರುವ ಹಾಗೂ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿರುವ ಈ ಕೆಳಕಂಡ ಆಟಗಾರರನ್ನು ಕಡೆಗಣಿಸುವುದು ಉತ್ತಮ ಎನ್ನಬಹುದು.

1. ಎವಿನ್ ಲೆವಿಸ್
ತನ್ನ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಖ್ಯಾತಿಯನ್ನು ಪಡೆದಿರುವ ಕೆರಿಬಿಯನ್ ಎವಿನ್ ಲೆವಿಸ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ತನ್ನ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ. ಟೂರ್ನಿಯಲ್ಲಿ 5 ಪಂದ್ಯಗಳನ್ನು ಆಡುವ ಅವಕಾಶ ಪಡೆದಿರುವ ಎವಿನ್ ಲೆವಿಸ್ 4 ಪಂದ್ಯಗಳನ್ನು ಆಡಿದ ಬಳಿಕ ತಂಡದ ಆಡುವ ಬಳಗದಿಂದ ಸ್ಥಾನ ಕಳೆದುಕೊಂಡು ಹೊರಬಿದ್ದರು. ಹಾಗೂ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಮತ್ತೆ ಸ್ಥಾನ ಪಡೆದುಕೊಂಡ ಎವಿನ್ ಲೆವಿಸ್ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದುಕೊಳ್ಳಲೇ ಇಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ ಯಾವುದೇ ಪಂದ್ಯದಲ್ಲಿಯೂ ಉತ್ತಮವಾಗಿ ಬ್ಯಾಟ್ ಬೀಸದ ಎವಿನ್ ಲೆವಿಸ್ ಅವರನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಉತ್ತಮ.

2. ಸಿದ್ಧಾರ್ಥ್ ಕೌಲ್
2016ರಿಂದ 2021ರ ಐಪಿಎಲ್ ಆವೃತ್ತಿಯವರೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಸದಸ್ಯನಾಗಿದ್ದ ಸಿದ್ಧಾರ್ಥ್ ಕೌಲ್ ಅವರನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 75 ಲಕ್ಷಕ್ಕೆ ಖರೀದಿಸಿತಾದರೂ ಲೀಗ್ ಹಂತದ ತನ್ನ ಅಂತಿಮ ಪಂದ್ಯದವರೆಗೂ ಆಡುವ ಬಳಗದಲ್ಲಿ ಅವಕಾಶ ನೀಡಲಿಲ್ಲ. ಹೌದು, ಗುಜರಾತ್ ಟೈಟನ್ಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಆಡುವ ಬಳಗದಲ್ಲಿ ಮೊಹಮ್ಮದ್ ಸಿರಾಜ್ ಬದಲಿಗೆ ಅವಕಾಶ ಪಡೆದ ಸಿದ್ಧಾರ್ಥ್ ಕೌಲ್ 4 ಓವರ್ ಬೌಲಿಂಗ್ ಮಾಡಿ 43 ರನ್ ನೀಡಿ ದುಬಾರಿಯಾದರು. ಹೀಗೆ ಸಿಕ್ಕ ಒಂದೇ ಒಂದು ಅವಕಾಶದಲ್ಲಿಯೂ ದುಬಾರಿಯಾಗಿರುವ ಕೌಲ್ ಇಂದಿನ ನಿರ್ಣಾಯಕ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಬೀಳುವ ಸಾಧ್ಯತೆಗಳಿವೆ. ಆಡುವ ಬಳಗಕ್ಕೆ ಮಹಮ್ಮದ್ ಸಿರಾಜ್ ಮರಳುವ ಸಾಧ್ಯತೆ ಹೆಚ್ಚಿರುವುದರಿಂದ ಸಿದ್ಧಾರ್ಥ್ ಕೌಲ್ ಅವರನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಉತ್ತಮ.

3. ಕೃಷ್ಣಪ್ಪ ಗೌತಮ್
ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರುವ ಕೃಷ್ಣಪ್ಪ ಗೌತಮ್ ಟೂರ್ನಿಯಲ್ಲಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯುವ ಅವಕಾಶ ಪಡೆದಿದ್ದಾರೆ. ಆಡಿದ ಪಂದ್ಯಗಳಲ್ಲಿ ಕನಿಷ್ಠ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಕೃಷ್ಣಪ್ಪ ಗೌತಮ್ ಸತತ ಅವಕಾಶ ಪಡೆದುಕೊಳ್ಳಲಿಲ್ಲ. ಕಳೆದ ಪಂದ್ಯದಲ್ಲಿ ತಂಡದ ಆಲ್ ರೌಂಡರ್ ಆಟಗಾರ ಕೃನಾಲ್ ಪಾಂಡ್ಯ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಕಾರಣ ಅವಕಾಶ ಪಡೆದುಕೊಂಡಿದ್ದ ಕೃಷ್ಣಪ್ಪ ಗೌತಮ್ ಈ ಪಂದ್ಯದಲ್ಲಿ ಪಾಂಡ್ಯ ಮರಳುವುದರಿಂದ ಆಡುವ ಬಳಗದಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕೃಷ್ಣಪ್ಪ ಗೌತಮ್ ಅವರನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications