
ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 58ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಇಂದು ( ಮೇ 11 ) ಮುಂಬೈನ ಡಾ ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯ ಈ ಬಾರಿಯ ಟೂರ್ನಿಯಲ್ಲಿ ಇತ್ತಂಡಗಳ ನಡುವೆ ನಡೆಯಲಿರುವ ಎರಡನೇ ಪಂದ್ಯವಾಗಿದ್ದು, ಇತ್ತಂಡಗಳ ನಡುವೆ ಏಪ್ರಿಲ್ 22ರಂದು ನಡೆದಿದ್ದ ಪ್ರಥಮ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 15 ರನ್‌ಗಳ ಜಯವನ್ನು ಕಂಡಿತ್ತು.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಲ್ಲಿಯವರೆಗೂ 11 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ 7 ಪಂದ್ಯಗಳಲ್ಲಿ ಗೆದ್ದು ಉಳಿದ 4 ಪಂದ್ಯಗಳಲ್ಲಿ ಸೋತು 14 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, 11 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು ಉಳಿದ 6 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇಆಫ್ ಪ್ರವೇಶಿಸಬೇಕೆಂದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅದರಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಪರಿಣಮಿಸಿದೆ.
ಇನ್ನು ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಲೆಕ್ಕಾಚಾರಗಳಲ್ಲಿ ಕೆಲ ಕ್ರಿಕೆಟ್ ಪ್ರೇಮಿಗಳು ತೊಡಗಿಕೊಂಡಿದ್ದರೆ, ಇನ್ನೂ ಕೆಲ ಕ್ರಿಕೆಟ್ ಪ್ರೇಮಿಗಳು ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು, ಯಾವ ಆಟಗಾರರನ್ನು ಆರಿಸಿದರೆ ತಮ್ಮ ಡ್ರೀಮ್ ತಂಡಕ್ಕೆ ಹೆಚ್ಚಿನ ಫ್ಯಾಂಟಸಿ ಅಂಕಗಳು ಬರಲಿದೆ ಎಂಬುದನ್ನು ಊಹಿಸುವಲ್ಲಿ ನಿರತರಾಗಿದ್ದಾರೆ. ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿರುವ ಕ್ರಿಕೆಟ್ ಪ್ರೇಮಿಗಳು ಕಳಪೆ ಪ್ರದರ್ಶನ ನೀಡಿ ಪಂದ್ಯದಲ್ಲಿ ಫ್ಲಾಪ್ ಆಗಬಹುದಾದ ಕೆಳಕಂಡ ಮೂವರು ಆಟಗಾರರನ್ನು ಕಡೆಗಣಿಸುವುದು ಉತ್ತಮ ಎನ್ನಬಹುದು.
1. ರಿಪಾಲ್ ಪಾಟೀಲ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ರಿಪಾಲ್ ಪಾಟೀಲ್ ಕಳೆದೆರಡು ಪಂದ್ಯಗಳಲ್ಲಿ ಕೆಳಕ್ರಮಾಂಕದಲ್ಲಿ ಕಣಕ್ಕಿಳಿದಿದ್ದು, ಬ್ಯಾಟಿಂಗ್ ಮಾಡುವ ಹೆಚ್ಚು ಅವಕಾಶವನ್ನು ಪಡೆದುಕೊಂಡಿಲ್ಲ. ಇನ್ನು ತನ್ನ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನೇ ಪಡೆದುಕೊಳ್ಳದ ರಿಪಾಲ್ ಪಟೇಲ್ ದ್ವಿತೀಯ ಪಂದ್ಯದಲ್ಲಿ 3 ಎಸೆತಗಳಲ್ಲಿ ಕೇವಲ 6 ರನ್ ಕಲೆಹಾಕಿ ಮುಗ್ಗರಿಸಿದ್ದರು. ಹೀಗಾಗಿ ರಿಪಾಲ್ ಪಟೇಲ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಎನ್ನಬಹುದು.
2. ಶ್ರೀಕರ್ ಭರತ್: ಇನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಡಿ ಕೆಎಸ್ ಭರತ್ ಅವರನ್ನು ಖರೀದಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶವನ್ನು ನೀಡಿತ್ತು ಹಾಗೂ ಈ ಪಂದ್ಯದಲ್ಲಿ ಭರತ್ ಕೇವಲ 8 ರನ್ ಗಳಿಸಿದ್ದರು. ಇನ್ನು ಪೃಥ್ವಿ ಶಾ ಫಿಟ್ ಆಗಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿದರೆ ಭರತ್ ಸ್ಥಾನ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಭರತ್ ಅವರನ್ನು ಇಂದಿನ ಪಂದ್ಯದಿಂದ ಹೊರಗಿಡುವುದು ಉತ್ತಮ ಎನ್ನಬಹುದು.
3. ಶಿಮ್ರಾನ್ ಹೆಟ್ಮಾಯೆರ್: ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶಿಮ್ರಾನ್ ಹೆಟ್ಮಾಯೆರ್ ಮಂಗಳವಾರ ತಮ್ಮ ಪತ್ನಿ ಮಗುವಿಗೆ ಜನ್ಮ ನೀಡಿದ ಕಾರಣ ಐಪಿಎಲ್‌ನಿಂದ ಹೊರನಡೆದಿದ್ದಾರೆ. ಹೀಗಾಗಿ ಶಿಮ್ರಾನ್ ಹೆಟ್ಮಾಯೆರ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡಿ..