
ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 61ನೇ ಪಂದ್ಯ ಇಂದು ( ಮೇ 14 ) ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಇತ್ತಂಡಗಳು ಈ ಪಂದ್ಯದ ಮೂಲಕ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಈ ಹಿಂದೆ ಇದೇ ಟೂರ್ನಿಯಲ್ಲಿ ಏಪ್ರಿಲ್ 15ರಂದು ನಡೆದಿದ್ದ ಪಂದ್ಯದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು ಹಾಗೂ ಈ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತ್ತು.
ಟೂರ್ನಿಯಲ್ಲಿ ಇಲ್ಲಿಯವರೆಗೂ 12 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಮಾತ್ರ ಗೆದ್ದು 7 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿ 10 ಅಂಕಗಳನ್ನು ಪಡೆದುಕೊಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು ಉಳಿದಿರುವ 2 ಪಂದ್ಯಗಳನ್ನು ಗೆದ್ದರೂ ಸಹ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆಗಳು ತೀರಾ ಕಡಿಮೆ ಇವೆ. ಇನ್ನು 11 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿರುವ ಸನ್ ರೈಸರ್ಸ್ ಹೈದರಾಬಾದ್ 5 ಪಂದ್ಯಗಳಲ್ಲಿ ಜಯ ಸಾಧಿಸಿ 6 ಪಂದ್ಯಗಳಲ್ಲಿ ಸೋಲು ಕಂಡು 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು, ಇನ್ನುಳಿದ ಎಲ್ಲಾ 3 ಪಂದ್ಯಗಳಲ್ಲಿಯೂ ಜಯ ಸಾಧಿಸಿ ಇತರೆ ತಂಡಗಳು ಸಹ ಸಮ ಅಂಕಗಳನ್ನು ಪಡೆದುಕೊಂಡು ಸನ್ ರೈಸರ್ಸ್ ಹೆಚ್ಚಿನ ನೆಟ್ ರನ್ ರೇಟ್ ಹೊಂದಿದರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಲಭಿಸಲಿದೆ. ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು, ಕೆಲ ಕ್ರಿಕೆಟ್ ಅಭಿಮಾನಿಗಳು ಯಾವ ತಂಡ ಗೆಲ್ಲಬಹುದು ಎಂಬ ಲೆಕ್ಕಾಚಾರಗಳಲ್ಲಿ ತೊಡಗಿಕೊಂಡಿದ್ದರೆ, ಇನ್ನೂ ಕೆಲ ಕ್ರಿಕೆಟ್ ಅಭಿಮಾನಿಗಳು ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸಿ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರನ್ನು ಆರಿಸುವಲ್ಲಿ ನಿರತರಾಗಿದ್ದಾರೆ. ಹೀಗೆ ಕ್ರೀಡಾಭಿಮಾನಿಗಳು ಈ ಪಂದ್ಯಕ್ಕಾಗಿ ರಚಿಸುತ್ತಿರುವ ಡ್ರೀಮ್ ತಂಡದಿಂದ ಕಳಪೆ ಪ್ರದರ್ಶನ ನೀಡಬಹುದಾದ ಈ ಕೆಳಕಂಡ 3 ಆಟಗಾರರನ್ನು ಹೊರಗಿಡುವುದು ಉತ್ತಮ.
1. ಅಜಿಂಕ್ಯ ರಹಾನೆ: ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಇಲ್ಲಿಯವರೆಗೂ ಒಟ್ಟು 6 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅಜಿಂಕ್ಯ ರಹಾನೆ 105 ರನ್ ಕಲೆಹಾಕಿದ್ದು, ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಹೀಗೆ ಟೂರ್ನಿಯುದ್ದಕ್ಕೂ ರನ್ ಕಲೆಹಾಕುವಲ್ಲಿ ಪರದಾಡುತ್ತಿರುವ ಅಜಿಂಕ್ಯ ರಹಾನೆ ಅವರನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಉತ್ತಮ.
2. ಅನುಕುಲ್ ರಾಯ್: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಅನುಕುಲ್ ರಾಯ್ 2 ಪಂದ್ಯಗಳಲ್ಲಿ ಕೇವಲ ಒಂದೇ ಒಂದು ವಿಕೆಟ್ ಪಡೆದಿದ್ದಾರೆ. ಇನ್ನು ತಂಡದಲ್ಲಿ ಆಂಡ್ರೆ ರಸೆಲ್ ಇರುವ ಕಾರಣ ಅನುಕುಲ್ ರಾಯ್ ತನ್ನ ಪಾಲಿನ ಎಲ್ಲಾ ಓವರ್ ಬೌಲಿಂಗ್ ಮಾಡುವ ಸಾಧ್ಯತೆ ತೀರಾ ಕಡಿಮೆ ಇದೆ. ಹಾಗೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅನುಕುಲ್ ರಾಯ್ ಉತ್ತಮ ಪ್ರದರ್ಶನ ನೀಡುವುದು ಕೂಡ ಅನುಮಾನವಾಗಿದೆ. ಹೀಗಾಗಿ ಈತನನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಉತ್ತಮ ಆಯ್ಕೆ ಎನ್ನಬಹುದು.
3. ಶಶಾಂಕ್ ಸಿಂಗ್: ಶಶಾಂಕ್ ಸಿಂಗ್ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟ್ ಬೀಸುವುದರಿಂದ ಹೆಚ್ಚಿನ ಎಸೆತಗಳನ್ನು ಎದುರಿಸುವಲ್ಲಿ ಸಫಲರಾಗಿಲ್ಲ. ಆದ್ದರಿಂದ ಶಶಾಂಕ್ ಸಿಂಗ್ ಹೆಚ್ಚಿನ ಫ್ಯಾಂಟಸಿ ಅಂಕಗಳನ್ನು ಪಡೆಯುವಲ್ಲಿ ವಿಫಲರಾಗಿದ್ದು, ಈತನನ್ನು ನಿಮ್ಮ ಡ್ರೀಮ್ ತಂಡದಿಂದ ಹೊರಗಿಡುವುದು ಉತ್ತಮ.