ಐಪಿಎಲ್ 2022: ರನ್ ಹೊಳೆ ಹರಿಸಿ ಆರೆಂಜ್ ಕ್ಯಾಪ್ ಗೆಲ್ಲಬಹುದಾದ ಆರ್‌ಸಿಬಿಯ 3 ಆಟಗಾರರು

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇಂದಿನಿಂದ ( ಮಾರ್ಚ್ 26 ) ಆರಂಭವಾಗುತ್ತಿದ್ದು, ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಇತ್ತ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಸುತ್ತಿನಲ್ಲಿ ಸೋಲುವುದರ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ನೂತನ ನಾಯಕ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ಟೂರ್ನಿಯ ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮಾರ್ಚ್ 27ರಂದು ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಹೀಗೆ ಈ ಬಾರಿಯ ಟೂರ್ನಿಯಲ್ಲಿ ಹಲವು ಬದಲಾವಣೆಗಳು ಹಾಗೂ ಹೊಸ ಆಟಗಾರರೊಂದಿಗೆ ಕಣಕ್ಕಿಳಿಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದು ಅಬ್ಬರಿಸಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಗೆಲ್ಲಬಹುದಾದ ಮೂವರು ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

1. ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಶತಕ ಬಾರಿಸಿ ಎರಡು ವರ್ಷಗಳೇ ಕಳೆದಿದ್ದು, ಕಳೆದೆರಡು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ನಿರೀಕ್ಷಿಸಿದಷ್ಟು ರನ್ ಹರಿದು ಬಂದಿಲ್ಲ. ಹಾಗೆಂದ ಮಾತ್ರಕ್ಕೆ ವಿರಾಟ್ ಕೊಹ್ಲಿ ಮತ್ತೆ ಐಪಿಎಲ್‌ನಲ್ಲಿ ಅಬ್ಬರಿಸಲಾರರು ಎಂದು ಹೇಳಲಾಗುವುದಿಲ್ಲ. ಐಪಿಎಲ್ ಇತಿಹಾಸದಲ್ಲಿ 6283 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಅತಿಹೆಚ್ಚು ರನ್ ಗಳಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಇದುವರೆಗೂ ಒಮ್ಮೆ ಐಪಿಎಲ್ ಆರೆಂಜ್ ಕ್ಯಾಪ್ ಗೆದ್ದಿದ್ದು, ಆ ಆವೃತ್ತಿಯಲ್ಲಿ ಬರೋಬ್ಬರಿ 973 ರನ್ ಬಾರಿಸಿದ್ದಾರೆ. ಹೌದು, ಆವೃತ್ತಿಯೊಂದರಲ್ಲಿ ಆಟಗಾರನೋರ್ವ ಅತಿಹೆಚ್ಚು ರನ್ ಗಳಿಸಿರುವ ದಾಖಲೆಯನ್ನೂ ಸಹ ತಮ್ಮ ಹೆಸರಿನಲ್ಲಿ ಹೊಂದಿರುವ ವಿರಾಟ್ ಕೊಹ್ಲಿ ಈ ಬಾರಿ ನಾಯಕತ್ವದ ತಲೆಬಿಸಿ ಇಲ್ಲದೇ ಕಣಕ್ಕಿಳಿಯಲಿದ್ದು, ರನ್ ಹೊಳೆ ಹರಿಸುವ ಸಾಧ್ಯತೆಗಳು ಹೆಚ್ಚಿವೆ. ಹಾಗೂ ಟೂರ್ನಿ ಆರಂಭಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ ಈ ಬಾರಿ ಅಬ್ಬರಿಸುವ ಮುನ್ಸೂಚನೆಯನ್ನು ನೀಡಿದ್ದು, ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವ ಆಟಗಾರನಾಗಿದ್ದಾರೆ.

2. ಗ್ಲೆನ್ ಮ್ಯಾಕ್ಸ್‌ವೆಲ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಬಿ ಡಿವಿಲಿಯರ್ಸ್ ಕಣಕ್ಕಿಳಿಯದ ಕಾರಣ ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ ಮಧ್ಯಮ ಕ್ರಮಾಂಕದಲ್ಲಿ ರನ್ ಗಳಿಸಬೇಕಾದ ಜವಾಬ್ದಾರಿ ಬೀಳಲಿದೆ. ಹಾಗೂ ಕಳೆದ ಬಾರಿಯ ಟೂರ್ನಿಯಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದು 15 ಪಂದ್ಯಗಳನ್ನಾಡಿ 513 ರನ್ ಗಳಿಸಿದ್ದ ಮ್ಯಾಕ್ಸ್‌ವೆಲ್ ಆ ಆವೃತ್ತಿಯಲ್ಲಿ ತಂಡದ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಹೀಗೆ ಉತ್ತಮ ಫಾರ್ಮ್ ಹೊಂದಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿಯೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಬ್ಬರಿಸುವ ಸಾಧ್ಯತೆ ಹೆಚ್ಚಿದ್ದು, ಆರೆಂಜ್ ಕ್ಯಾಪ್ ಗೆಲ್ಲಬಹುದಾದ ಆಟಗಾರನಾಗಿದ್ದಾರೆ.

3. ಫಾಫ್ ಡು ಪ್ಲೆಸಿಸ್
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಾಯಕನಾಗಿ ಮುನ್ನಡೆಸಲಿರುವ ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಗೆಲ್ಲಬಹುದಾದ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಫಾಫ್ ಡು ಪ್ಲೆಸಿಸ್ 633 ರನ್ ಗಳಿಸುವುದರ ಮೂಲಕ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದರು. ಈ ಮೂಲಕ ಫಾಫ್ ಡು ಪ್ಲೆಸಿಸ್ ಆರೆಂಜ್ ಕ್ಯಾಪ್ ಗೆಲ್ಲುವ ಅವಕಾಶವನ್ನು ಕೇವಲ ಎರಡು ರನ್‌ಗಳ ಅಂತರದಿಂದ ಕಳೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications