ಅಂದು ಕಳಪೆ, ಈಗ ಉತ್ತಮ: ಐಪಿಎಲ್‌ನಲ್ಲಿ ಮಿಂಚುತ್ತಿರುವ ಈ ಐವರಲ್ಲಿ ಶುರು ಟಿ20 ವಿಶ್ವಕಪ್‌ಗಾಗಿ ಪೈಪೋಟಿ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಿದ್ದು, ಟೂರ್ನಿಯ ಮೊದಲ ವಾರದಲ್ಲಿ ಯುವ ಕ್ರಿಕೆಟಿಗರಿಗಿಂತ ಹೆಚ್ಚಾಗಿ ಅನುಭವಿ ಕ್ರಿಕೆಟಿಗರೇ ಉತ್ತಮ ಪ್ರದರ್ಶನ ನೀಡಿ ಮಿಂಚುತ್ತಿದ್ದಾರೆ. ಹೌದು, ಈ ಹಿಂದೆ ಟೀಮ್ ಇಂಡಿಯಾದಲ್ಲಿದ್ದ ಕೆಲ ಆಟಗಾರರು ಕಳಪೆ ಪ್ರದರ್ಶನ ನೀಡಿದ ಕಾರಣದಿಂದಾಗಿ ಅವಕಾಶ ಕಳೆದುಕೊಂಡು ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದರು. ಹೀಗೆ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಐವರು ಕ್ರಿಕೆಟಿಗರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮಿಂಚುತ್ತಿದ್ದು, ಆಯ್ಕೆಗಾರರ ಗಮನ ಸೆಳೆದು ಮತ್ತೆ ಟೀಮ್ ಇಂಡಿಯಾ ಸೇರುವ ಸಾಧ್ಯತೆಗಳಿವೆ.
ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಅಕ್ಟೋಬರ್ 16ರಂದು ಆರಂಭವಾಗಲಿದ್ದು, ಫೈನಲ್ ಪಂದ್ಯ ನವೆಂಬರ್ 13ರಂದು ಜರುಗಲಿದೆ. ಇತ್ತ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಲೀಗ್ ಹಂತದಲ್ಲಿಯೇ ಹೊರಬಿದ್ದಿದ್ದ ಟೀಮ್ ಇಂಡಿಯಾ ಈ ಬಾರಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ಟ್ರೋಫಿ ಗೆಲ್ಲಲೇಬೇಕೆಂಬ ಗುರಿಯನ್ನು ಹೊಂದಿದೆ. ಹೀಗಾಗಿ ಕಳೆದ ಬಾರಿ ರೀತಿ ಯುವ ಕ್ರಿಕೆಟಿಗರಿಗೆ ಮಣೆ ಹಾಕುವ ಬದಲು ಒತ್ತಡವನ್ನು ಎದುರಿಸಿ ಜಾಣ್ಮೆಯಿಂದ ಬ್ಯಾಟ್ ಬೀಸಬಲ್ಲ ಅನುಭವಿ ಕ್ರಿಕೆಟಿಗರಿಗೆ ಅವಕಾಶ ನೀಡುವತ್ತ ಟೀಮ್ ಇಂಡಿಯಾ ಆಯ್ಕೆಗಾರರು ಚಿತ್ತ ನೆಟ್ಟಿದ್ದಾರೆ.
ಹೀಗಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಟೂರ್ನಿಯಲ್ಲಿ ಇಲ್ಲಿಯವರೆಗೂ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಕೆಳಕಂಡ ಐವರು ಆಟಗಾರರು ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ.

1. ದಿನೇಶ್ ಕಾರ್ತಿಕ್
ಈ ಹಿಂದೆ ಭಾರತ, ಶ್ರೀಲಂಕಾ ಮತ್ತು ಬಾಂಗ್ಲದೇಶ ಟಿ ಟ್ವೆಂಟಿ ತ್ರಿಕೋನ ಸರಣಿಯಲ್ಲಿ ಅಬ್ಬರಿಸಿ ಮಿಂಚಿದ್ದ ದಿನೇಶ್ ಕಾರ್ತಿಕ್ ನಂತರದ ದಿನಗಳಲ್ಲಿ ನಿರೀಕ್ಷಿಸಿದಷ್ಟು ಉತ್ತಮ ಪ್ರದರ್ಶನ ನೀಡಲಾಗದೇ ಕಳಪೆಯಾದರು. ಸೌರವ್ ಗಂಗೂಲಿ ನಾಯಕತ್ವದಲ್ಲಿಯೇ ಎಂ ಎಸ್ ಧೋನಿ ಆಗಮಿಸುವುದಕ್ಕೂ ಮುನ್ನವೇ ಟೀಮ್ ಇಂಡಿಯಾ ಸೇರಿದ್ದ ದಿನೇಶ್ ಕಾರ್ತಿಕ್ 32 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ 399 ರನ್ ಬಾರಿಸಿದ್ದಾರೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿರುವ ದಿನೇಶ್ ಕಾರ್ತಿಕ್ ಪಂಜಾಬ್ ಕಿಂಗ್ಸ್ ವಿರುದ್ಧದ ಪ್ರಥಮ ಪಂದ್ಯದಲ್ಲಿ 14 ಎಸೆತಗಳಿಗೆ 32 ರನ್ ಬಾರಿಸಿದರು. ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಸನಿಹದಲ್ಲಿದ್ದಾಗ ಕಣಕ್ಕಿಳಿದ ಕಾರ್ತಿಕ್ ಆಂಡ್ರೆ ರಸೆಲ್ ಎಸೆತಗಳಿಗೆ ಸಿಕ್ಸರ್, ಬೌಂಡರಿ ಚಚ್ಚಿ 7 ಎಸೆತಗಳಲ್ಲಿ ಅಜೇಯ 14 ರನ್ ಗಳಿಸಿ ಜಯ ತಂದುಕೊಟ್ಟರು. ಹೀಗೆ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮಿಂಚಿ ಭರವಸೆ ಹುಟ್ಟುಹಾಕಿರುವ ದಿನೇಶ್ ಕಾರ್ತಿಕ್‌ಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಆಡುವ ಅವಕಾಶ ಸಿಗಬಹುದು.

2. ಉಮೇಶ್ ಯಾದವ್
ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಉತ್ತಮ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಉಮೇಶ್ ಯಾದವ್ ಸದ್ಯ ಆಯ್ಕೆಗಾರರ ಮನಗೆಲ್ಲಬಹುದಾದ ಆಟಗಾರರ ಪೈಕಿ ಮುಂಚೂಣಿಯಲ್ಲಿದ್ದಾರೆ. ಇನ್ನು ಇದುವರೆಗೂ ಒಟ್ಟು 7 ಟಿ ಟ್ವೆಂಟಿ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಆಡಿರುವ ಉಮೇಶ್ ಯಾದವ್ 9 ವಿಕೆಟ್ ಪಡೆದಿದ್ದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದು ಮೊದಲ ವಾರಾಂತ್ಯಕ್ಕೆ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿನ ಮೊದಲ 3 ಪಂದ್ಯಗಳ ಪೈಕಿ 8 ವಿಕೆಟ್ ಪಡೆದಿರುವ ಉಮೇಶ್ ಯಾದವ್ ಮತ್ತೆ ಟೀಮ್ ಇಂಡಿಯಾ ಸೇರುವ ಸಾಧ್ಯತೆಗಳಿವೆ.

3. ಶಿಖರ್ ಧವನ್
ಒಟ್ಟು 193 ಐಪಿಎಲ್ ಪಂದ್ಯಗಳನ್ನಾಡಿ 5826 ರನ್ ಕಲೆಹಾಕಿರುವ ಶಿಖರ್ ಧವನ್ ಟೀಮ್ ಇಂಡಿಯಾ ಪರ ಒಟ್ಟು 68 ಟಿ ಟ್ವೆಂಟಿ ಪಂದ್ಯಗಳನ್ನಾಡಿ 1759 ರನ್ ಕಲೆಹಾಕಿದ್ದು, ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ಬಿ ತಂಡಕ್ಕೆ ನಾಯಕನೂ ಸಹ ಆಗಿದ್ದರು. ಆದರೆ ಶಿಖರ್ ಧವನ್ ಅವರ ಆರಂಭಿಕ ಸ್ಥಾನದಲ್ಲಿ ಕಣಕ್ಕಳಿಯಲು ಈಗಾಗಲೇ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಈಗಾಗಲೇ ತಂಡದಲ್ಲಿದ್ದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಧವನ್ ಮತ್ತಷ್ಟು ಉತ್ತಮ ಪ್ರದರ್ಶನ ನೀಡಿದರೆ ಮತ್ತೆ ಟೀಮ್ ಇಂಡಿಯಾ ಪ್ರತಿನಿಧಿಸುವ ಅವಕಾಶ ಸಿಗುವ ಸಾಧ್ಯತೆಗಳಿವೆ.

4. ರಾಹುಲ್ ಚಹರ್
43 ಐಪಿಎಲ್ ಪಂದ್ಯಗಳನ್ನಾಡಿ 44 ವಿಕೆಟ್ ಪಡೆದಿರುವ ರಾಹುಲ್ ಚಹರ್ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಆಗಿದ್ದರು. ಆದರೆ ಈ ಬಾರಿ ಪಂಜಾಬ್ ಕಿಂಗ್ಸ್ ಪರ ರಾಹುಲ್ ಚಹರ್ ಕಣಕ್ಕಿಳಿಯುತ್ತಿದ್ದು ಪರ್ಪಲ್ ಕ್ಯಾಪ್ ಗೆದ್ದರೆ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶ ಸಿಗಬಹುದು. ಇನ್ನು 2019ರಲ್ಲಿ ಟೀಮ್ ಇಂಡಿಯಾ ಪ್ರವೇಶ ಪಡೆದುಕೊಂಡಿದ್ದ ರಾಹುಲ್ ಚಹರ್ ಒಟ್ಟು 6 ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದು 7 ವಿಕೆಟ್ ಕಬಳಿಸಿದ್ದಾರೆ.

5. ಟಿ. ನಟರಾಜನ್
ಟೀಮ್ ಇಂಡಿಯಾ ಪರ 4 ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಟಿ ನಟರಾಜನ್ 7 ವಿಕೆಟ್‌ಗಳನ್ನು ಪಡೆದಿದ್ದು, ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದ ನಂತರ ಗಾಯದ ಸಮಸ್ಯೆಯಿಂದಾಗಿ ಮತ್ತೆ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಟಿ ನಟರಾಜ್ ವೇಗದ ಎಸೆತಗಳಿಗೆ ಪ್ರಸಿದ್ಧರಾಗಿದ್ದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಕಣಕ್ಕಿದಿದ್ದಾರೆ. ಈ ಬಾರಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆದರೆ ನಟರಾಜನ್ ಅವರನ್ನು ಮತ್ತೊಮ್ಮೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ನೋಡಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications