
1. ಟಿಮ್ ಡೇವಿಡ್
ಸಿಂಗಾಪುರ್‌ನ ಟಿಮ್ ಡೇವಿಡ್‌ಗೆ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಎಲ್ಲಾ ಪಂದ್ಯಗಳಲ್ಲಿಯೂ ಆಡುವ ಅವಕಾಶ ನೀಡಿದ್ದರೆ ತಂಡ ಮತ್ತೊಂದಷ್ಟು ಗೆಲುವನ್ನು ಸಾಧಿಸುತ್ತಿತ್ತು ಎನ್ನಬಹುದು. ಇನ್ನು ಈ ಬಾರಿ ಕೇವಲ 8 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದ ಟಿಮ್ ಡೇವಿಡ್ 186 ರನ್ ಗಳಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟಿಮ್ ಡೇವಿಡ್ ಈ ಬಾರಿ ಹೊಂದಿರುವ ಸ್ಟ್ರೈಕ್‌ರೇಟ್ 216.28 ಆಗಿದ್ದು, ತಂಡವು ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಾಧಿಸಿದ ಗೆಲುವುಗಳಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೀಗಾಗಿ ತಂಡದಲ್ಲೇ ಇದ್ದ ಈ ಉತ್ತಮ ಆಟಗಾರನಿಗೆ ಅವಕಾಶ ನೀಡದ ಮುಂಬೈ ಇಂಡಿಯನ್ಸ್ ಕೈಸುಟ್ಟುಕೊಂಡಿದೆ.

2. ಮಯಾಂಕ್ ಮಾರ್ಕಂಡೆ
ಈ ಬಾರಿಯ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಕೇವಲ ಎರಡು ಪಂದ್ಯಗಳನ್ನು ಆಡುವ ಅವಕಾಶ ಪಡೆದ ಮಯಾಂಕ್ ಮಾರ್ಕಂಡೆ ಒಂದು ವಿಕೆಟ್ ಪಡೆದರು. ಹೀಗೆ ಎರಡೇ ಪಂದ್ಯವನ್ನಾಡವ ಅವಕಾಶ ಪಡೆದ ಮಾರ್ಕಂಡೆಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ನೀಡಬಹುದಿತ್ತು. ಏಕೆಂದರೆ ಟೂರ್ನಿ ಆರಂಭಕ್ಕೂ ಮುನ್ನ ನಡೆದ 5 ಲಿಸ್ಟ್ ಎ ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದ ಮಯಾಂಕ್ ಈ ಬಾರಿಯ ಟೂರ್ನಿಯಲ್ಲಿ ಹೆಚ್ಚಿನ ಆಡುವ ಅವಕಾಶಗಳನ್ನು ಪಡೆಯಬೇಕಿದ್ದ ಆಟಗಾರ. ಆದರೆ, ಈತನ ಬದಲಾಗಿ ಮುರುಗನ್ ಅಶ್ವಿನ್ ಹೆಚ್ಚಿನ ಅವಕಾಶವನ್ನು ಪಡೆದರು. ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿದ ಅಶ್ವಿನ್ 9 ವಿಕೆಟ್‌ಗಳನ್ನು ಪಡೆದರು. ಇನ್ನು ಅಶ್ವಿನ್ ಆಡುವ ಅವಕಾಶವನ್ನು ಕಳೆದುಕೊಂಡಾಗಲೂ ಮುಂಬೈ ಇಂಡಿಯನ್ಸ್ ಹೃತಿಕ್ ಶೋಕಿನ್ ಮತ್ತು ಕುಮಾರ್ ಕಾರ್ತಿಕೇಯಗೆ ಅವಕಾಶ ನೀಡಿತೇ ಹೊರತು ಮಯಾಂಕ್ ಮಾರ್ಕಂಡೆಗೆ ಅವಕಾಶ ನೀಡಲಿಲ್ಲ.

3. ರಮಣ್‌ದೀಪ್ ಸಿಂಗ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 45 ರನ ಮತ್ತು 6 ವಿಕೆಟ್ ಪಡೆದ ಆಲ್‌ರೌಂಡರ್ ರಮಣ್‌ದೀಪ್ ಸಿಂಗ್‌ಗೆ ಹೆಚ್ಚಿನ ಅವಕಾಶಗಳು ದೊರೆಯಲಿಲ್ಲ ಎನ್ನಬಹುದು. ಇನ್ನು ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟ್ ಬೀಸುವ ಸಾಮರ್ಥ್ಯವಿರುವ ಈತನಿಗೆ ಆರಂಭದಲ್ಲಿ ಸೂರ್ಯಕುಮಾರ್ ಯಾದವ್ ಅಲಭ್ಯರಾದಾಗ ಆಡುವ ಬಳಗದಲ್ಲಿ ಅವಕಾಶ ನೀಡಬಹುದಿತ್ತು. ಹೀಗೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವಿರುವ ರಮಣ್‌ದೀಪ್ ಸಿಂಗ್‌ಗೆ 8-9 ಪಂದ್ಯಗಳಲ್ಲಾದರೂ ಆಡುವ ಅವಕಾಶವನ್ನು ನೀಡದ ಮುಂಬೈ ಇಂಡಿಯನ್ಸ್ ನೆಲಕಚ್ಚಿದೆ.

4. ಸಂಜಯ್ ಯಾದವ್
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ನಲ್ಲಿದ್ದ ಸಂಜಯ್ ಯಾದವ್ ಅವರು ಕೃನಾಲ್ ಪಾಂಡ್ಯ ಅವರ ಸ್ಥಾನ ತುಂಬಬಲ್ಲ ಆಟಗಾರ ಎಂಬ ವಿಶ್ವಾಸವನ್ನು ಹಲವಾರು ಹಿರಿಯ ಕ್ರಿಕೆಟಿಗರು ವ್ಯಕ್ತಪಡಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟ್ ಬೀಸುವ ಸಾಮರ್ಥ್ಯವೂ ಇದ್ದ ಈ ಆಲ್‌ರೌಂಡರ್ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡರು. ಹೀಗೆ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಹುಟ್ಟಿಸಿದ್ದ ಸಂಜಯ್ ಯಾದವ್‌ಗೆ ಇನ್ನೂ ಹೆಚ್ಚಿನ ಅವಕಾಶ ಸಿಕ್ಕಿದ್ದರೆ ಉತ್ತಮ ಪ್ರದರ್ಶನ ನೀಡುತ್ತಿದ್ದರು ಎನ್ನಬಹುದು.

5. ಡೆವಾಲ್ಡ್ ಬ್ರೆವಿಸ್
ಬೇಬಿ ಎಬಿಡಿ ಎಂದೇ ಖ್ಯಾತಿಯನ್ನು ಪಡೆದಿರುವ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್‌ಗೆ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಿದ ಮೂರನೇ ಪಂದ್ಯದಲ್ಲಿ ಆಡುವ ಅವಕಾಶವನ್ನು ನೀಡಿತು. ಮುಂಬೈ ಇಂಡಿಯನ್ಸ್ ಪರ 7 ಪಂದ್ಯಗಳನ್ನಾಡಿದ ಬ್ರೆವಿಸ್ 142.47 ಸ್ಟ್ರೈಕ್ ರೇಟ್‌ನೊಂದಿಗೆ 161 ರನ್ ಕಲೆಹಾಕಿದರು. ಹೀಗೆ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದ ಬ್ರೆವಿಸ್‌ಗೆ ಮತ್ತಷ್ಡು ಅವಕಾಶ ನೀಡಿದ್ದರೆ, ಅದರಲ್ಲಿಯೂ ಉತ್ತಮ ಆರಂಭ ನೀಡಲು ಪರದಾಡುತ್ತಿದ್ದ ಆರಂಭಿಕ ಆಟಗಾರರ ಬದಲು ಬ್ರೆವಿಸ್‌ಗೆ ಅವಕಾಶ ನೀಡಿದ್ದರೆ ಈತ ಪವರ್‌ಪ್ಲೇ ಓವರ್‌ಗಳಲ್ಲಿ ಮತ್ತಷ್ಟು ಸ್ಪೋಟಕ ಆಟವನ್ನಾಡುತ್ತಿದ್ದರು ಎನ್ನಬಹುದು.


Click it and Unblock the Notifications












