IPL 2022: ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಟ್ರೋಫಿ ಗೆಲ್ಲುವುದು ಪಕ್ಕಾ ಎನ್ನುತ್ತಿವೆ ಈ 5 ಅಂಶಗಳು!

ಕ್ರಿಕೆಟ್ ಜಗತ್ತಿನ ಅತಿ ದೊಡ್ಡ ಹಾಗೂ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿ ಸದ್ಯ ನಡೆಯುತ್ತಿದ್ದು, ಈ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ನೂತನ ತಂಡಗಳಾಗಿ ಕಣಕ್ಕಿಳಿದಿವೆ. ಇನ್ನು ಈ ನೂತನ ತಂಡಗಳು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡು ಮಿಂಚುತ್ತಿವೆ.
ಹೌದು, ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಟೂರ್ನಿಯಲ್ಲಿನ ತನ್ನ ಮೊದಲ 5 ಪಂದ್ಯಗಳ ಪೈಕಿ 3 ಪಂದ್ಯಗಳಲ್ಲಿ ಗೆದ್ದು, ಉಳಿದೆರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಅತ್ತ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಟೂರ್ನಿಯಲ್ಲಿ 4 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಜಯ ಗಳಿಸಿ ಉಳಿದೊಂದು ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಹೀಗೆ ನೂತನ ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಈ ಬಾರಿ ಆರಂಭದಲ್ಲಿಯೇ ಅಬ್ಬರಿಸಿರುವ ಕಾರಣ ಪ್ಲೇಆಫ್ ಪ್ರವೇಶಿಸುವುದು ಖಚಿತ ಎನ್ನಲಾಗುತ್ತಿದೆ. ಇನ್ನು ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದ್ದು, ಈ ಕೆಳಕಂಡ 5 ಅಂಶಗಳು ತಂಡವನ್ನು ಚಾಂಪಿಯನ್ ಮಾಡಲಿವೆ.

1. ಉತ್ತಮ ಗುಣಮಟ್ಟದ ಆಲ್‌ರೌಂಡರ್ಸ್
ಲಕ್ನೋ ಸೂಪರ್ ಜೈಂಟ್ಸ್ ಈ ಬಾರಿಯ ಹರಾಜಿನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲೂ ಕೊಡುಗೆ ನೀಡಬಲ್ಲ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ತಂಡದಲ್ಲಿ ಈಗಾಗಲೇ ಕೃನಾಲ್ ಪಾಂಡ್ಯ ಮತ್ತು ಜೇಸನ್ ಹೋಲ್ಡರ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಮಿಂಚಿದ್ದಾರೆ. ಕೃನಾಲ್ ಪಾಂಡ್ಯ 5 ಪಂದ್ಯಗಳನ್ನಾಡಿ 68 ರನ್ ಗಳಿಸಿ 3 ವಿಕೆಟ್ ಪಡೆದಿದ್ದರೆ, ಜೇಸಮ್ ಹೋಲ್ಡರ್ 3 ಪಂದ್ಯಗಳನ್ನಾಡಿ 16 ರನ್ ಗಳಿಸಿ 5 ವಿಕೆಟ್ ಪಡೆದಿದ್ದಾರೆ. ಇನ್ನು ಕೇವಲ ಒಂದು ಪಂದ್ಯದಲ್ಲಿ ಕಣಕ್ಕಿಳಿದಿರುವ ಮಾರ್ಕಸ್ ಸ್ಟಾಯ್ನಿಸ್ ಅಜೇಯ 38 ರನ್ ಗಳಿಸಿ ಅಬ್ಬರಿಸಿದ್ದು, ಮುಂದಿನ ಪಂದ್ಯಗಳಲ್ಲಿ ಬೌಲಿಂಗ್‌ನಲ್ಲೂ ಸಹ ಮಿಂಚಲಿದ್ದಾರೆ. ಇನ್ನು ತಂಡದಲ್ಲಿರುವ ಮತ್ತೋರ್ವ ಆಲ್‌ರೌಂಡರ್ ದೀಪಕ್ ಹೂಡಾ ಸಹ ಅಬ್ಬರಿಸಿ ತಂಡಕ್ಕೆ ನೆರವಾಗಬಲ್ಲ ಆಟಗಾರನಾಗಿದ್ದಾರೆ.

2. ಅನುಭವಿ ಆರಂಭಿಕರು
ಇನ್ನು ಆರಂಭಿಕ ಆಟಗಾರರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ಅಸ್ತ್ರ ಎನ್ನಬಹುದು. ಹೌದು, ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಾಕಷ್ಟು ದೊಡ್ಡ ಅನುಭವವನ್ನು ಹೊಂದಿದ್ದು, ಇಂತಹ ಆಟಗಾರರು ತಂಡದ ಪರ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯುತ್ತಿರುವುದು ತಂಡದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. 99 ಬಾರಿ ಕಣಕ್ಕಿಳಿದಿರುವ ಕೆಎಲ್ ರಾಹುಲ್ ಈ ಪೈಕಿ 67 ಬಾರಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು 2905 ರನ್ ಕಲೆಹಾಕಿದ್ದರೆ, ಆಡಿರುವ ಎಲ್ಲಾ 82 ಐಪಿಎಲ್ ಇನ್ನಿಂಗ್ಸ್‌ನಲ್ಲಿಯೂ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿರುವ ಕ್ವಿಂಟನ್ ಡಿ ಕಾಕ್ 2444 ರನ್ ಕಲೆಹಾಕಿದ್ದಾರೆ. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಈ ಜೋಡಿ 5 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಕ್ವಿಂಟನ್ ಡಿ ಕಾಕ್ 188 ರನ್ ಕಲೆಹಾಕಿದ್ದರೆ, ಕೆಎಲ್ ರಾಹುಲ್ 132 ರನ್ ಗಳಿಸಿದ್ದಾರೆ.

3. ನುರಿತ ಸಿಬ್ಬಂದಿ ವರ್ಗ
ಲಕ್ನೋ ಸೂಪರ್ ಜೈಂಟ್ಸ್ ಸಿಬ್ಬಂದಿ ವರ್ಗ ಗೌತಮ್ ಗಂಭೀರ್, ಆಂಡಿ ಫ್ಲವರ್ ಮತ್ತು ವಿಜಯ್ ದಾಹಿಯಾ ರೀತಿಯ ಅನುಭವಿ ಮಾಜಿ ಕ್ರಿಕೆಟಿಗರನ್ನು ತಂಡದಲ್ಲಿ ಹೊಂದಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಎರಡು ಬಾರಿ ಐಪಿಎಲ್ ಟ್ರೋಫಿ ಗೆಲ್ಲಿಸಿರುವ ನಾಯಕ ಗೌತಮ್ ಗಂಭೀರ್ ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕನಾಗಿದ್ದರೆ, ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಆಂಡಿ ಫ್ಲವರ್ ತಂಡದ ಕೋಚ್ ಆಗಿದ್ದು, ಪಿಎಸ್ಎಲ್, ದ ಹಂಡ್ರೆಡ್ಸ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಹಾಗೂ ಟಿ ಟೆನ್ ಟೂರ್ನಿಗಳಲ್ಲಿ ತಾವು ಕೋಚ್ ಆಗಿ ಮುನ್ನಡೆಸಿದ್ದ ತಂಡಗಳನ್ನು ಪ್ಲೇಆಫ್ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಮುಲ್ತಾನ್ ಸುಲ್ತಾನ್ ತಂಡಕ್ಕೆ ಮೊದಲ ಪಿಎಸ್ಎಲ್ ಟ್ರೋಫಿ ತಂದುಕೊಟ್ಟಿದ್ದಾರೆ. ಇನ್ನು ವಿಜಯ್ ದಾಹಿಯಾ 2007ರಿಂದ ಕೋಚಿಂಗ್ ಕೆಲಸ ಮಾಡುತ್ತಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆಕೆಆರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೂ ಸಹ ಮಾರ್ಗದರ್ಶನ ನೀಡಿದ ಅನುಭವ ಹೊಂದಿದ್ದಾರೆ.

4. ಆಳವಾದ ಬ್ಯಾಟಿಂಗ್ ಬಲ
ಲಕ್ನೋ ಸೂಪರ್ ಜೈಂಟ್ಸ್‌ನಲ್ಲಿ ಹತ್ತನೇ ಕ್ರಮಾಂಕದವರೆಗೂ ಬ್ಯಾಟ್ ಬೀಸಬಲ್ಲ ಆಟಗಾರರಿರುವುದು ತಂಡಕ್ಕೆ ದೊಡ್ಡ ಅನುಕೂಲ ಎನ್ನಬಹುದು. ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಜೋಡಿ ಉತ್ತಮ ಪ್ರದರ್ಶನ ನೀಡವಲ್ಲಿ ವಿಫಲರಾದರೆ, ಒತ್ತಡದ್ಲಲಿಯೂ ಉತ್ತಮವಾಗಿ ಬ್ಯಾಟ್ ಬೀಸಬಲ್ಲ ಜೇಸನ್ ಹೋಲ್ಡರ್ ಅವರನ್ನು ಕಣಕ್ಕಿಳಿಸಬಹುದು ಅಥವಾ ಆರಂಭಿಕ ಜೋಡಿ ಉತ್ತಮವಾಗಿ ಇನ್ನಿಂಗ್ಸ್ ಕಟ್ಟಿದರೆ, ರನ್ ಹೊಳೆ ಹರಿಸಬಲ್ಲ ದೀಪಕ್ ಹೂಡಾ ಅಥವಾ ಮಾರ್ಕಸ್ ಸ್ಟಾಯ್ನಿಸ್ ಅವರನ್ನು ಕಣಕ್ಕಿಳಿಸಬಹುದಾದ ಆಯ್ಕೆಯನ್ನು ಹೊಂದಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಬೌಲರ್‌ಗಳಾದ ದುಷ್ಮಂತ ಚಮೀರಾ ಮತ್ತು ಅವೇಶ್ ಖಾನ್ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ರನ್ ಕೊಡುಗೆಯನ್ನು ನೀಡಿದ್ದರು. ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡ ಗೆಲುವು ಸಾಧಿಸಿರುವ 3 ಪಂದ್ಯಗಳಲ್ಲಿ 2 ಪಂದ್ಯವನ್ನು ಚೇಸಿಂಗ್ ಮಾಡಿಯೇ ಗೆದ್ದಿದ್ದು, ಉಳಿದೊಂದು ಪಂದ್ಯವನ್ನೂ ಕೂಡ ಬಹುತೇಕ ಚೇಸ್ ಮಾಡಿ ಕೊನೆಯ ಹಂತದಲ್ಲಿ ಸೋಲನ್ನು ಅನುಭವಿಸಿತ್ತು.

5. ತಂಡದಲ್ಲಿದ್ದಾರೆ ಬಲಿಷ್ಟ ಬದಲಿ ಭಾರತೀಯ ಆಟಗಾರರು
ಟೂರ್ನಿಯ ಆರಂಭದಲ್ಲಿ ಅನುಭವಿ ಮನಿಷ್ ಪಾಂಡೆ ಕಳಪೆ ಪ್ರದರ್ಶನ ನೀಡಿದ ಕಾರಣ ತಂಡದಿಂದ ಹೊರಬಿದ್ದರು ಹಾಗೂ ಮನಿಷ್ ಪಾಂಡೆ ಸ್ಥಾನದಲ್ಲಿ ಕೃಷ್ಣಪ್ಪ ಗೌತಮ್ ಕಣಕ್ಕಿಳಿದರು. 2 ಪಂದ್ಯಗಳನ್ನಾಡಿದ ಕೃಷ್ಣಪ್ಪ ಗೌತಮ್ 3 ವಿಕೆಟ್ ಪಡೆದಿದ್ದು, ತಂಡದಲ್ಲಿ ಕಳಪೆ ಪ್ರದರ್ಶನ ನೀಡುವ ಆಟಗಾರರ ಬದಲು ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡಬಲ್ಲಂತಹ ಭಾರತೀಯ ಆಟಗಾರರು ತಂಡದಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ತಂಡದಲ್ಲಿ ಐಪಿಎಲ್ ಅನುಭವವಿರುವ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಂಚಿರುವ ಆಟಗಾರ ಮನನ್ ವೊಹ್ರಾ ತಂಡದಲ್ಲಿದ್ದಾರೆ. ಸ್ಪಿನ್ನರ್ ರವಿ ಬಿಷ್ಣೋಯಿ ಅಲಭ್ಯರಾದರೆ ಬದಲಿ ಆಟಗಾರನಾಗಿ ಕಣಕ್ಕಿಳಿಯಲು ಶಹಬಾಜ್ ನದೀಮ್ ಸಿದ್ಧರಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ 10 ವಿಕೆಟ್ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 12 ವಿಕೆಟ್ ಪಡೆದಿರುವ ಅಂಕಿತ್ ರಜಪೂರ್ ಕೂಡ ತಂಡದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications