ಐಪಿಎಲ್ 2022 ಮೆಗಾ ಹರಾಜು ಅಂತಿಮ ಪಟ್ಟಿ ಪ್ರಕಟ: ಈ 5 ಸ್ಟಾರ್ ಆಟಗಾರರ ಹೆಸರು ಹುಡುಕಿದವರಿಗೆ ಬೇಸರ!

ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಲಿದ್ದು, ಈಗಾಗಲೇ ಟೂರ್ನಿ ಹಲವಾರು ವಿಷಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು ಲಕ್ನೋ ಮತ್ತು ಅಹ್ಮದಾಬಾದ್ ನೂತನ ತಂಡಗಳಾಗಿ ಸೇರ್ಪಡೆಗೊಂಡಿವೆ. ಹೀಗೆ ನೂತನ ತಂಡಗಳ ಸೇರ್ಪಡೆಯಾಗಿರುವುದರಿಂದ ಟೂರ್ನಿಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ಕಡ್ಡಾಯವಾಗಿ ನಡೆಯಲಿದ್ದು, ಯಾವ ಆಟಗಾರರು ಯಾವ ತಂಡದ ಪಾಲಾಗಲಿದ್ದಾರೆ ಎಂಬ ಕುತೂಹಲವನ್ನು ಹೆಚ್ಚಿಸಿದೆ.
ಇನ್ನು ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಈ ಹರಾಜಿನಲ್ಲಿ ಪಾಲ್ಗೊಳ್ಳಲು ವಿಶ್ವದ ಹಲವಾರು ದೇಶಗಳ 1214 ಕ್ರಿಕೆಟಿಗರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಹೀಗೆ ನೋಂದಾಯಿಸಿಕೊಂಡಿದ್ದ ಆಟಗಾರರ ಪೈಕಿ ಒಟ್ಟು 590 ಆಟಗಾರರನ್ನು ಅಂತಿಮವಾಗಿ ಬಿಸಿಸಿಐ ಆಯ್ಕೆ ಮಾಡಿದೆ.
ಫೆಬ್ರವರಿ 1ರಂದು ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಈ ಪರಿಷ್ಕರಿಸಿದ ಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದ್ದು, ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಅತಿ ದೊಡ್ಡ ಹೆಸರು ಮಾಡಿರುವ ಕೆಲ ಸ್ಟಾರ್ ಆಟಗಾರರ ಹೆಸರು ಈ ಪಟ್ಟಿಯಲ್ಲಿ ಇಲ್ಲದೇ ಇರುವುದು ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರೇಕ್ಷಕರಲ್ಲಿ ಬೇಸರವನ್ನುಂಟು ಮಾಡಿದೆ. ಹೀಗೆ ಪಟ್ಟಿಯಲ್ಲಿ ಈ ಕೆಳಕಂಡ 5 ಸ್ಟಾರ್ ಆಟಗಾರರ ಹೆಸರು ಇಲ್ಲದೇ ಇರುವುದು ಪ್ರೇಕ್ಷಕರಲ್ಲಿ ಭಾರೀ ನಿರಾಸೆ ಮೂಡಿಸಿದೆ.

1. ಜೋಫ್ರಾ ಆರ್ಚರ್
ಈ ಹಿಂದೆ ಸ್ವತಃ ಜೋಫ್ರಾ ಆರ್ಚರ್ ಅವರೇ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಹಾಗೂ ಟೂರ್ನಿಯಲ್ಲಿ ತಾನು ಭಾಗವಹಿಸಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದ ಕಾರಣ ಈ ಪಟ್ಟಿಯಲ್ಲಿ ಇವರ ಹೆಸರು ಇಲ್ಲದಿರುವುದು ಅನೇಕರಲ್ಲಿ ಆಶ್ಚರ್ಯವನ್ನು ಮೂಡಿಸಿದೆ. ಆದರೆ ಜೋಫ್ರಾ ಅರ್ಚರ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಈ ಬಾರಿಯ ಮೆಗಾ ಹರಾಜಿಗೆ ಅಲಭ್ಯರಾಗಲಿದ್ದು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಕಣಕ್ಕಿಳಿಯಲಿದ್ದಾರೆ.

2. ಕ್ರಿಸ್ ಗೇಲ್
ಇಷ್ಟು ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತನ್ನ ಸ್ಪೋಟಕ ಆಟದಿಂದ ಮನರಂಜನೆ ನೀಡಿದ್ದ ಕ್ರಿಸ್ ಗೇಲ್ ಅವರ ಸುವರ್ಣ ಯುಗ ಅಂತ್ಯಗೊಂಡಿದೆ. ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಕ್ರಿಸ್ ಗೇಲ್ ಈ ಬಾರಿಯ ಮೆಗಾ ಹರಾಜಿನಲ್ಲಿ ಭಾಗವಹಿಸುವುದಿಲ್ಲ ಎಂಬುದು ಹಲವಾರು ಅಭಿಮಾನಿಗಳಿಗೆ ಬೇಸರ ತಂದಿದೆ. ಕ್ರಿಸ್ ಗೇಲ್ ಬಾರಿಸಿದ್ದ 175 ರನ್ ಇಂದಿಗೂ ಕೂಡ ಐಪಿಎಲ್ ಇತಿಹಾಸದ ಅತಿ ಹೆಚ್ಚು ವೈಯಕ್ತಿಕ ರನ್ ಆಗಿದೆ. ಹೀಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರನ್ನು ಕ್ರೀಡಾಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ.

3. ಸ್ಯಾಮ್ ಕರನ್
ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಸ್ಯಾಮ್ ಕರನ್ ಈ ಬಾರಿಯ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳದೇ ಇರುವುದು ಆಶ್ಚರ್ಯವನ್ನುಂಟು ಮಾಡಿದೆ. ಇನ್ನು 2020ರ ಐಪಿಎಲ್ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸ್ಯಾಮ್ ಕರನ್ ಅವರನ್ನು 5.5 ಕೋಟಿ ರೂಪಾಯಿಗಳಿಗೆ ಖರೀದಿಯನ್ನು ಮಾಡಿತ್ತು. ಹಾಗೂ ಕಳೆದ ಆವೃತ್ತಿಯಲ್ಲಿ ಗಾಯದ ಸಮಸ್ಯೆಗೆ ಒಳಗಾಗಿ ಟೂರ್ನಿ ಮಧ್ಯದಲ್ಲಿಯೇ ಹೊರಬಿದ್ದಿದ್ದ ಸ್ಯಾಮ್ ಕರನ್ ನಂತರ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿಯೂ ಕೂಡ ಕಣಕ್ಕಿಳಿಯಲಿಲ್ಲ ಹಾಗೂ ಇದೀಗ ಸಂಪೂರ್ಣವಾಗಿ ಫಿಟ್ ಆಗದ ಸ್ಯಾಮ್ ಕರನ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗುತ್ತಿದೆ.

4. ಬೆನ್ ಸ್ಟೋಕ್ಸ್
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಇಂಗ್ಲೆಂಡ್ ಆಲ್ ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ವಿರಾಮ ಪಡೆದು ಸುಧಾರಿಸಿಕೊಂಡ ನಂತರ ಇತ್ತೀಚೆಗಷ್ಟೇ ನಡೆದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದ್ದರು. ಹೀಗೆ ವಿರಾಮದ ನಂತರ ಮತ್ತೆ ಮೈದಾನಕ್ಕೆ ಇಳಿದಿರುವ ಬೆನ್ ಸ್ಟೋಕ್ಸ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಗುಳಿಯಲು ನಿರ್ಧಾರವನ್ನು ಮಾಡಿದ್ದಾರೆ. ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗಾಯದ ಸಮಸ್ಯೆಯಿಂದಾಗಿ ಸಾಲುಸಾಲು ಪಂದ್ಯಗಳಿಗೆ ಗೈರಾದ ಬೆನ್ ಸ್ಟೋಕ್ಸ್ ಅವರನ್ನು ರಾಜಸ್ಥಾನ್ ರಾಯಲ್ಸ್ ಈ ಬಾರಿ ರಿಟೈನ್ ಮಾಡಿಕೊಂಡಿಲ್ಲ. ಹೀಗೆ ರಿಟೈನ್ ಆಗದೆ ಇರುವ ಬೆನ್ ಸ್ಟೋಕ್ಸ್ ಮೆಗಾ ಹರಾಜಿನಲ್ಲಿ ಭಾಗವಹಿಸದೇ ಹಿಂದೆ ಸರಿಯಲು ಐಪಿಎಲ್ ಬಯೋ ಬಬಲ್ ಕಿರಿಕಿರಿ ಕೂಡ ಒಂದು ಕಾರಣ ಎನ್ನಲಾಗುತ್ತಿದೆ.

5. ಮಿಚೆಲ್ ಸ್ಟಾರ್ಕ್
ಆಸ್ಟ್ರೇಲಿಯದ ವೇಗಿ ಮಿಚೆಲ್ ಸ್ಟಾರ್ಕ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು 7 ವರ್ಷಗಳ ಬಳಿಕ ಟೂರ್ನಿಯಲ್ಲಿ ಕಣಕ್ಕಿಳಿಯುವ ಸೂಚನೆ ನೀಡಿದ್ದರು. ಆದರೆ ಇದೀಗ ಹೊರಬಿದ್ದಿರುವ ಪಟ್ಟಿಯಲ್ಲಿ ಮಿಚೆಲ್ ಸ್ಟಾರ್ಕ್ ಅವರ ಹೆಸರು ಇಲ್ಲದೇ ಇರುವುದು ಕೆಲ ಕ್ರಿಕೆಟ್ ಅನುಯಾಯಿಗಳಲ್ಲಿ ಬೇಸರ ಹಾಗೂ ಗೊಂದಲವನ್ನು ಉಂಟುಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications