ನಿವೃತ್ತಿ ಘೋಷಣೆಯ ಟ್ವೀಟ್ ಡಿಲೀಟ್!: ಅಂಬಾಟಿ ರಾಯುಡು ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ಸಿಎಸ್‌ಕೆ ಸಿಇಒ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಅಂಬಾಟಿ ರಾಯುಡು ಶನಿವಾರ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳಿಗೆ ಗೊಂದಲವನ್ನುಂಟು ಮಾಡಿದ್ದಾರೆ. ಮೊದಲಿಗೆ ಈ ಬಾರಿಯ ಐಪಿಎಲ್‌ನ ಬಳಿಕ ನಿವೃತ್ತಿ ತೆಗೆದುಕೊಳ್ಳುವುದಾಗಿ ಟ್ವೀಟ್ ಮಾಡಿ ನಂತರ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅಂಬಾಟಿ ರಾಯುಡು ಅವರ ಈ ನಡೆ ಕ್ರಿಕೆಟ್ ಪ್ರೇಮಿಗಳಿಗೆ ಕುತೂಹಲ ಮೂಡಿಸಿದೆ. ಈ ವಿಚಾರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಪ್ರತಿಕ್ರಿಯೆ ನೀಡಿದ್ದು ರಾಯುಡು ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಮಧ್ಯಾಹ್ನ 12:46ರ ವೇಳೆಗೆ ಅಂಬಾಟಿ ರಾಯುಡು ಟ್ವೀಟ್ ಮಾಡಿ ಸುಮಾರು ಒಂದು ಗಂಟೆಯ ಬಳಿಕ ಅದನ್ನು ಅವರು ಡಿಲೀಟ್ ಮಾಡಿದ್ದಾರೆ. ಹೀಗಾಗಿ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯೇ ಅಂಬಾಟಿ ರಾಯುಡು ಅವರ ಕೊನೆಯ ಆವೃತ್ತಿಯಾಗಲಿದೆಯಾ ಎಂಬ ಬಗ್ಗೆ ಗೊಂದಲಗಳು ಮೂಡಿದೆ. ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಮಾತನಾಡಿದ್ದು ರಾಯುಡು ನಿವೃತ್ತರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಈ ಬಾರಿಯ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂದು ಅಂಬಾಟಿ ರಾಯುಡು ಬೇಸರಗೊಂಡಿದ್ದಾರೆ. ಹಾಗಾಗಿ ತಪ್ಪಿ ಅವರು ಈ ಟ್ವೀಟ್ ಮಾಡಿದ್ದಾರೆ. ಅವರ ಬಳಿ ನಾನು ಮಾತನಾಡಿದ್ದು ಕೆಲ ವಿಚಾರಗಳನ್ನು ವಿವರಿಸಿದ್ದೇನೆ. ಅವರು ನಿವೃತ್ತರಾಗುವುದಿಲ್ಲ ಎಂದು ಕಾಸಿ ವಿಶ್ವನಾಥನ್ ಎನ್‌ಡಿ ಟಿವಿಗೆ ದೂರವಾಣಿ ಮೂಲಕ ಸ್ಪಷ್ಟಪಡಿಸಿ ಎಂದು ವರದಿ ಮಾಡಿದೆ.
ರಾಯುಡು ಟ್ವೀಟ್‌ನಲ್ಲೇನಿತ್ತು: "ಇದು ನನ್ನ ವೃತ್ತಿ ಜೀವನದ ಅಂತಿಮ ಐಪಿಎಲ್ ಆವೃತ್ತಿ ಎಂದು ಹೇಳಲು ನಾನು ಸಂತೋಷಪಡುತ್ತಿದ್ದೇನೆ. ಇಲ್ಲಿ ನಾನು ಆಡುತ್ತಾ ಸದ್ಭುತವಾದ ಸಮಯವನ್ನು ಕಳೆದಿದ್ದೇನೆ. ಕಳೆದ 13 ವರ್ಷಗಳಲ್ಲಿ ನಾನು ಎರಡು ಶ್ರೇಷ್ಠ ತಂಡಗಳಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದೇನೆ. ನನ್ನ ಈ ಪ್ರಯಾಣವನ್ನು ಸುಂದರವಾಗಿಸಿದ್ದಕ್ಕೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾನು ತುಂಬು ಹೃದಯದಿಂದ ಧನ್ಯವಾದ ಹೇಳುತ್ತಿದ್ದೇನೆ" ಎಂದು ಅಂಬಾಟಿ ರಾಯುಡು ಟ್ವೀಟ್ ಮಾಡಿದ್ದರು.
ಕಳೆದ ಫೆಬ್ರವರಿಯಲ್ಲಿ ನಡೆದ ಮೆಹಾ ಹರಾಜಿನಲ್ಲಿ ಸಿಎಸ್‌ಕೆ ಅಂಬಾಟಿ ರಾಯುಡು ಅವರನ್ನು 6.75 ಕೋಟಿ ನೀಡಿ ಖರೀದಿಸಿತ್ತು. ಆದರೆ ಈ ಬಾರಿಯ ಆವೃತ್ತಿಯಲ್ಲಿ ರಾಯುಡು ಸ್ಥಿತ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಈ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ 12 ಪಂದ್ಯಗಳನ್ನು ಆಡಿರುವ ರಾಯುಡು 27.10 ಸರಾಸರಿಯಲ್ಲಿ 271 ರನ್‌ಗಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ರಾಯುಡು ಮೂರನೇ ಸ್ಥಾನದಲ್ಲಿದ್ದಾರೆ. 313 ರನ್‌ಗಳಿಸಿರುವ ಋತುರಾಜ್ ಗಾಯಕ್ವಾಡ್ ಮೊದಲ ಸ್ಥಾನದಲ್ಲಿದ್ದರೆ ಶಿವಂ ದುಬೆ 289 ರನ್‌ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಐಪಿಎಲ್ ಟೂರ್ನಿಯ ಪ್ಲೇಆಫ್ ಹಂತಕ್ಕೇರುವ ಸ್ಪರ್ಧೆಯಿಂದ ಹೊರಬಿದ್ದಿದೆ. ಆಡಿರುವ 12 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಮಾತ್ರವೇ ಗೆದ್ದಿರುವ ಸಿಎಸ್‌ಕೆ 10 ತಂಡಗಳ ಲೀಗ್‌ನಲ್ಲಿ 9ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications