
ಐಪಿಎಲ್ 2022ರ ಐಪಿಎಲ್ ಆವೃತ್ತಿಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಎರಡು ತಮಡಗಳ ಪೈಕಿ ಅಹದಾಬಾದ್ ಫ್ರಾಂಚೈಸಿ ವಿವಾದಕ್ಕೆ ಸಿಲುಕಿತ್ತು. ಹೀಗಾಗಿ ಅಹದಾಬಾದ್ ಐಪಿಎಲ್‌ನಲ್ಲಿ ಭಾಗಿಯಾಗುವ ಬಗ್ಗೆ ಅನುಮಾನಗಳು ಎದ್ದಿತ್ತು. ಅಹಮದಾಬಾದ್ ಫ್ರಾಂಚೈಸಿಯ ಮಾಲೀಕತ್ವ ಹೊಂದಿರುವ ಸಿವಿಸಿ ಕ್ಯಾಪಿಟಲ್ಸ್‌ಗೆ ಬಿಸಿಸಿಐ ಈ ವಿಚಾರವಾಗಿ ಕ್ಲೀನ್ ಚಿಟ್ ನೀಡಲು ಮುಂದಾಗಿದ್ದು ಮುಂಬರುವ ಟೂರ್ನಿಯಲ್ಲಿ ಭಾಗಿಯಾಗಲು ಗ್ರೀನ್ ಸಿಗ್ನಲ್ ದೊರೆಯುವ ಸಾಧ್ಯತೆಯಿದೆ.
ಏನಿದು ವಿವಾದ?: ಇತ್ತೀಚೆಗಷ್ಟೇ ಐಪಿಎಲ್‌ಗೆ ಸೇರ್ಪಡೆಯಾಗಿರುವ ಎರಡು ತಂಡಗಳ ಪೈಕಿ ಅಹಮದಾಬಾದ್ ಫ್ರಾಂಚೈಸಿ ಕೂಡ ಒಂದು. ಈ ಎರಡು ತಂಡಗಳಿಗಾಗಿ ನಡೆದ ಬಿಡ್ಡಿಂಗ್‌ನಲ್ಲಿ ಲಕ್ನೋ ತಂಡವನ್ನು 7,090 ಕೋಟಿ ಮೊತ್ತಕ್ಕೆ ಆರ್‌ಪಿಜಿಎಸ್ ಗ್ರೂಪ್ ತೆಕ್ಕೆಗೆ ಹಾಕಿಕೊಂಡಿದ್ದರೆ, ಅಹಮದಾಬಾದ್ ಫ್ರಾಂಚೈಸಿಯನ್ನು ಸಿವಿಸಿ ಕ್ಯಾಪಿಟಲ್ ಪಾರ್ಟ್ನರ್ಸ್ 5625 ಕೋಟಿಗೆ ಖರೀದಿಸಿತ್ತು. ಆದರೆ ಅಹಮದಾಬಾದ್ ಫ್ರಾಂಚೈಸಿಯನ್ನು ಖರೀದಿಸಿರುವ ಸಿವಿಸಿ ಕ್ಯಾಪಿಟಲ್ ಪಾರ್ಟ್ನರ್ಸ್ ಬೆಟ್ಟಿಂಗ್ ಹಾಗೂ ಜೂಜಾಟದ ಕಂಪನಿಗಳ ಮೇಲೆ ಭಾರೀ ಹೂಡಿಕೆ ಮಾಡಿರುವುದುದಾಗಿ ಆರೋಪ ಕೇಳಿ ಬಂದಿತ್ತು.
ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಕೂಡ ಈ ಬಗ್ಗೆ ಬಿಸಿಸಿಐ ಮೇಲೆ ಟೀಕೆಯನ್ನು ಮಾಡಿದ್ದರು. ಬೆಟ್ಟಿಂಗ್ ಕಂಪನಿಗಳೇ ಐಪಿಎಲ್ ತಂಡಗಳನ್ನು ಖರೀದಿಸಬಹುದು ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ಹೊಸ ನಿಯಮ ಜಾರಿಯಾಗಬೇಕು. ನಿಸ್ಸಂಶಯವಾಗಿಈ ಬಿಡ್ದಾರರು ದೊಡ್ಡ ಬೆಟ್ಟಿಂಗ್ ಕಂಪನಿಯನ್ನು ಹೊಂದಿದ್ದಾರೆ. ಮುಂದೆ ಏನಾಗಲಿದೆ? ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಏನು ಮಾಡಬಹುದು?" ಎಂದು ಪ್ರಶ್ನಿಸಿದ್ದರು. ಈ ಮೂಲಕ ಲಲಿತ್ ಮೋದಿ ಪರೋಕ್ಷವಾಗಿ ಬಿಸಿಸಿಐ ಐಪಿಎಲ್ ಅನ್ನು ಬೆಟ್ಟಿಂಗ್ ಕಂಪೆನಿಗಳಿಗೆ ವಹಿಸುತ್ತಿದೆ ಎಂದು ಚಾಟಿ ಬೀಸಿದ್ದರು. ಈ ಗಂಭೀರ ಆರೋಪಗಳಿಂದಾಗಿ ಬಿಸಿಸಿಐ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಅನಿವಾರ್ಯತೆಗೆ ಸಿಲುಕಿತ್ತು. ಹೀಗಾಗಿ ಅಹಮದಾಬಾದ್ ಫ್ರಾಂಚೈಸಿಯ ಈ ಒಪ್ಪಂದ ರದ್ದಾಗುವ ಭೀತಿಯೂ ಎದುರಾಗಿತ್ತು.
ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ಬಿಸಿಸಿಐ ತನಿಖೆಯನ್ನು ಆರಂಭಿಸಿತ್ತು. ಕಳೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ಪದಾಧಿಕಾರಿಗಳು ಸಿವಿಸಿ ಕಂಪನಿ ವಿಚಾರವಾಗಿ ಚರ್ಚಿಸಿದ್ದು ಈ ಸಂದರ್ಭದಲ್ಲಿ ಈ ಕಾರ್ಪೊರೇಶನ್ ಯುರೋಪಿಯನ್ ಮತ್ತು ಏಷ್ಯನ್ ಎಂಬ ಎರಡು ಫಂಡ್‌ಗಳನ್ನು ಹೊಂದಿದೆ ಎಂದು ತಿಳಿಸಲಾಗಿದೆ.
ಇದರಲ್ಲಿ ಯುರೋಪಿಯನ್ ಫಂಡ್ ಬೆಟ್ಟಿಂಗ್ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿದ್ದು ಏಷ್ಯಾದ ಫಂಡ್ ಈ ಬೆಟ್ಟಿಂಗ್ ವ್ಯವಹಾರಿಗಳಿಗೆ ಸಂಬಂಧಿಸಿದ್ದಲ್ಲ ಎಂಬ ಅಂಶವನ್ನು ಕಂಡುಕೊಂಡಿದೆ. ಇನ್ನು ಬಿಸಿಸಿಐ ಅಧಿಕಾರಿಗಳ ಪ್ರಕಾರ ಸಿವಿಸಿ ಕಂಪನಿ ತಮ್ಮ ಏಷ್ಯನ್ ಫಂಡ್‌ನಿಂದ ಐಪಿಎಲ್‌ನಲ್ಲಿ ಹೂಡಿಕೆಯನ್ನು ಮಾಡಿದೆ. ಹೀಗಾಗಿ ಮೂಲಗಳ ಪ್ರಕಾರ ಬಿಸಿಸಿಐ ಸಿವಿಸಿ ಕ್ಯಾಪಿಟಲ್‌ಗೆ 'ಲೆಟರ್ ಆಫ್ ಇಂಟೆಂಟ್' ಅನ್ನು ನೀಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.