ಐಪಿಎಲ್, CSK vs KKR: ಸಿಎಸ್‌ಕೆ ಸೋಲಿಗೆ ಜಡೇಜಾ ತೆಗೆದುಕೊಂಡ ನಿರ್ಧಾರ, ಆ ಆಟಗಾರನೇ ಕಾರಣ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಿನ್ನೆ ( ಮಾರ್ಚ್ 26 ) ಆರಂಭವಾಗಿದ್ದು, ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಿದವು. ಇನ್ನು ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಎಂಎಸ್ ಧೋನಿ ಹೊರುಪಡಿಸಿದರೆ ಉಳಿದ ಯಾವುದೇ ಆಟಗಾರ ಕೂಡ ಹೇಳಿಕೊಳ್ಳುವಂತ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್‌ನ ಮೇಲಿನ ಕ್ರಮಾಂಕದ ಆಟಗಾರರೆಲ್ಲಾ ವಿಕೆಟ್ ಒಪ್ಪಿಸಿ ವಿಫಲರಾದ ಪರಿಣಾಮ ತಂಡ 11 ಓವರ್‌ಗಳಲ್ಲಿ 61 ರನ್‌ಗಳಿಗೆ ತನ್ನ ಮೊದಲ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಂಎಸ್ ಧೋನಿ ನಾಯಕ ರವೀಂದ್ರ ಜಡೇಜಾ ಜೊತೆ ಸೇರಿ ಅಜೇಯ 70 ರನ್‌ಗಳ ಜತೆಯಾಟವನ್ನಾಡುವುದರ ಮೂಲಕ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 131 ರನ್ ಗಳಿಸುವಂತೆ ಮಾಡಿದರು. 38 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದ ಎಂ ಎಸ್ ಧೋನಿ ತಂಡಕ್ಕೆ ಆಸರೆಯಾದರು.
ಹೀಗೆ ಚೆನ್ನೈ ತಂಡ ನೀಡಿದ ಸಾಧಾರಣ ಗುರಿಯನ್ನು ಶ್ರೇಯಸ್ ಐಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ 18.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 133 ರನ್ ಗಳಿಸುವುದರ ಮೂಲಕ 6 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭವನ್ನು ಮಾಡಿದೆ. ಹೀಗೆ ಕಳೆದ ಬಾರಿಯ ಫೈನಲ್‌ನಲ್ಲಿ ತಾನು ಸೋಲಿಸಿ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಅದೇ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲುಂಡಿದ್ದು, ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ಸೋಲಿಗೆ ಕಾರಣವಾದ ಅಂಶಗಳೇನು ಎಂಬುದರ ಕುರಿತು ಚರ್ಚೆಗಳು ಹೆಚ್ಚಾಗಿವೆ. ಈ ಬಾರಿಯ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂತನ ನಾಯಕನಾಗಿ ಆಯ್ಕೆಗೊಂಡಿರುವ ರವೀಂದ್ರ ಜಡೇಜಾ ತೆಗೆದುಕೊಂಡ ಈ ನಿರ್ಧಾರವೇ ಕಾರಣವಾಯಿತು ಎಂದು ಭಾರತ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಕೋಚ್ ರವಿಶಾಸ್ತ್ರಿ ಈ ಕೆಳಕಂಡಂತೆ ಕಾರಣ ನೀಡಿದ್ದಾರೆ.

ಸೋಲಿಗೆ ಕಾರಣವಾಯಿತು ಜಡೇಜಾ ತೆಗೆದುಕೊಂಡ ಈ ನಿರ್ಧಾರ
ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಸಾಧಾರಣ ಮೊತ್ತ ಕಲೆಹಾಕುವಲ್ಲಿ ಮಾತ್ರ ಶಕ್ತವಾಗಿತ್ತು. ಹೀಗಾಗಿ ತಂಡದ ಬೌಲಿಂಗ್ ಮೇಲೆ ಹೆಚ್ಚಿನ ಒತ್ತಡವಿತ್ತು ಎಂದೇ ಹೇಳಬಹುದು. ಈ ಸಂದರ್ಭದಲ್ಲಿ ಓರ್ವ ಅನುಭವಿ ಬೌಲರ್ ಆಗಿ ರವೀಂದ್ರ ಜಡೇಜಾ ಎಂಟನೇ ಓವರ್ ಬೌಲಿಂಗ್ ಮಾಡಲು ಶಿವಮ್ ದುಬೆಗೆ ಚೆಂಡನ್ನು ನೀಡಿದ್ದು ಸೋಲಿಗೆ ಕಾರಣವಾಯಿತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆ ಓವರ್‌ನ್ನು ಶಿವಮ್ ದುಬೆಗೆ ನೀಡವ ಬದಲು ನಿಯಂತ್ರಣ ಮಾಡಬಲ್ಲ ಬೌಲರ್‌ಗೆ ನೀಡಿದ್ದರೆ ಅಂತಿಮ ಹಂತದವರೆಗೂ ಬಂದಿದ್ದ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಮೇಲೆ ಒತ್ತಡ ಹೇರಿ ಗೆಲ್ಲಬಹುದಿತ್ತು ಎಂಬ ಕಾಮೆಂಟ್‌ಗಳೂ ಸಹ ಹರಿದಾಡುತ್ತಿವೆ. ಇನ್ನು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಕೂಡ ಈ ವಿಷಯದ ಕೂಡ ಮಾತನಾಡಿ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರವಿಶಾಸ್ತ್ರಿ ಹೇಳಿದ್ದಿಷ್ಟು
ತಂಡವು 130 ಅಥವಾ 140 ರನ್‌ಗಳ ಗುರಿಯನ್ನು ನೀಡಿದ್ದಾಗ ಶಿವಮ್ ದುಬೆ ರೀತಿಯ ಬೌಲರ್‌ಗೆ ಬೌಲಿಂಗ್ ಕೊಟ್ಟು ಅನಗತ್ಯವಾಗಿ ರನ್ ಬಿಟ್ಟುಕೊಡುವ ಬದಲು ತಂಡದಲ್ಲಿದ್ದ ಸ್ವತಃ ರವೀಂದ್ರ ಜಡೇಜಾ ಬೌಲಿಂಗ್ ಮಾಡಬಹುದಿತ್ತು ಅಥವಾ ಮಿಚೆಲ್ ಸಾಂಟ್ನರ್‌ಗೆ ಬೌಲಿಂಗ್ ನೀಡಬಹುದಿತ್ತು ಎಂದು ರವಿಶಾಸ್ತ್ರಿ ಹೇಳಿಕೆ ನೀಡಿದ್ದಾರೆ. ತಂಡ ಈ ರೀತಿಯ ಸಾಧಾರಣ ಮೊತ್ತಗಳ ಗುರಿಯನ್ನು ನೀಡಿದಾಗ ಓವರ್ ಒಂದರಲ್ಲಿ 14 ಅಥವಾ 15 ರನ್ ನೀಡಿದರೆ ಆ ಪಂದ್ಯ ನಮ್ಮ ಕೈತಪ್ಪುತ್ತದೆ ಎಂದು ರವಿಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರವಿಶಾಸ್ತ್ರಿ ಹೇಳಿದ್ದು ಈ ಓವರ್ ಬಗ್ಗೆ
ಸಾಧಾರಣ ಗುರಿ ನೀಡಿ ಬೌಲಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಶಿವಮ್ ದುಬೆ ಎಂಟನೇ ಓವರ್ ಬೌಲಿಂಗ್ ಮಾಡಿದರು. ಈ ಓವರ್‌ನಲ್ಲಿ ನಿತೀಶ್ ರಾಣಾ ಮತ್ತು ಅಜಿಂಕ್ಯಾ ರಹಾನೆ ಶಿವಮ್ ದುಬೆ ಬೌಲಿಂಗ್‌ನ್ನು ಎದುರಿಸಿದರು. ಹಾಗೂ ಈ ಓವರ್‌ನ ಯಾವುದೇ ಚೆಂಡನ್ನೂ ಕೂಡ ವ್ಯರ್ಥ ಮಾಡದ ನಿತೀಶ್ ರಾಣಾ ಒಟ್ಟು ಮೂರು ಬೌಂಡರಿಗಳನ್ನು ಬಾರಿಸಿದರು. ಈ ಮೂಲಕ ಈ ಒಂದೇ ಓವರ್‌ನಲ್ಲಿ ಶಿವಮ್ ದುಬೆ 14 ರನ್ ನೀಡಿ ಪಂದ್ಯದ ಸೋಲಿಗೆ ಪ್ರಮುಖ ಕಾರಣ ಎಂಬ ಕಾಮೆಂಟ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications