
ಐಪಿಎಲ್ ಹರಾಜಿನಲ್ಲಿ ಮೊದಲ ದಿನ ಸಂಪೂರ್ಣವಾಗಿದೆ. ಪ್ರಮುಖ ಆಟಗಾರರೆಲ್ಲರೂ ಯಾವ್ಯಾವ ತಂಡವನ್ನು ಸೇರಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಕೆಲ ಭಾರತೀಯ ಯುವ ಆಟಗಾರರು ಅದ್ಭುತ ಮೊತ್ತವನ್ನು ಪಡೆದುಕೊಳ್ಳುವ ಮೂಲಕ ಭಾರೀ ಯಶಸ್ಸು ಸಾಧಿಸಿದ್ದಾರೆ. ಕೆಲ ತಂಡಗಳು ಅತ್ಯಂತ ಜಾಣ್ಮೆಯಿಂದ ಹರಾಜಿನಲ್ಲಿ ತೊಡಗಿಸಿಕೊಂಡಿದ್ದು ಇನ್ನೂ ಕೆಲ ತಂಡಗಳು ಮೇಲ್ನೋಟಕ್ಕೆ ಎಡವಿದಂತೆ ಭಾಸವಾಗುತ್ತಿದೆ.
ಇದೀಗ ಎಲ್ಲರ ಗಮನ ಎರಡನೇ ದಿನದ ಹರಾಜಿನ ಮೇಲೆ ಬಿದ್ದಿದೆ. ಎರಡನೇ ದಿನದ ಹರಾಜಿಗೂ ಮುನ್ನ ಬಿಸಿಸಿಐ ಹರಾಜಿನಲ್ಲಿ ಆಯ್ಕೆ ಮಾಡಿಕೊಳ್ಳಲಿರುವ 20 ಆಟಗಾರರ ಪಟ್ಟಿಯನ್ನು ಫ್ರಾಂಚೈಸಿಗಳಲ್ಲಿ ಕೇಳಿದೆ. ಭಾನುವಾರ ಬೆಳಿಗ್ಗೆ 9 ಗಂಟೆಗೆ ಮುನ್ನ ಎಲ್ಲಾ ಫ್ರಾಂಚೈಸಿಗಳು ಈ ಪಟ್ಟಿಯನ್ನು ಸಲ್ಲಿಸಬೇಕಿದೆ. ಅದಾದ ಬಳಿಕ ಎರಡನೇ ದಿನದ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಿದೆ.
ಇಂದು ನಡೆಯಲಿರುವ ಹರಾಜಿನಲ್ಲಿ ಸುಮಾರು 200 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುತೇಕ ಎಲ್ಲಾ ತಂಡಗಳು ಕೂಡ ತಮ್ಮ ಬಹುಪಾಲು ಮೊತ್ತವನ್ನು ಹರಾಜಿಗಾಗಿ ವ್ಯಯಿಸಿರುವ ಕಾರಣ ಎರಡನೆ ದಿನದ ಹರಾಜಿನಲ್ಲಿ ಬಹಳ ಜಾಣ್ಮೆಯಿಂದ ಮುನ್ನಡೆಯಬೇಕಾದ ಅನಿವಾರ್ಯತೆ ಫ್ರಾಂಚೈಸಿಗಳಿಗಿದೆ.
ಐಪಿಎಲ್ 2022ರ ಮೊದಲ ದಿನದ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಸೇರಿ ಒಟ್ಟು 388.8 ಕೋಟಿ ಖರ್ಚು ಮಾಡಿವೆ. ಎಲ್ಲಾ ತಂಡಗಳು ಕೂಡ ಸೇರಿಕೊಂಡು ಖರೀದಿಸಿದ ಆಟಗಾರರ ಸಂಖ್ಯೆ 74. ಇದರಲ್ಲಿ ಇಶಾನ್ ಕಿಶನ್ 15.25 ಕೋಟಿ ಮೊತ್ತಕ್ಕೆ ಬಿಕರಿಯಾಗುವ ಮೂಲದ ಅತಿ ಹೆಚ್ಚಿನ ಮೊತ್ತ ಪಡೆದ ಆಟಗಾರ ಎನಿಸಿದ್ದಾರೆ.ಇವರನ್ನು ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ತನ್ನ ತಂಡಕ್ಕೆ ಸೇರ್ಪಡೆಗೊಳಿಸಲು ಯಶಸ್ವಿಯಾಗಿದೆ. ಇನ್ನು ಶ್ರೇಯಸ್ ಐಯ್ಯರ್ ಹಾಗೂ ದೀಪಕ್ ಚಾಹರ್ ಈ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ಮತ್ತಿಬ್ಬರು ಆಟಗಾರರಾಗಿದ್ದಾರೆ. ದೀಪಕ್ ಚಾಹರ್ ಅವರನ್ನು 14 ಕೋಟಿ ರೂಪಾಯಿ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿದರೆ, ಶ್ರೇಯಸ್ ಐಯ್ಯರ್ ಅವರನ್ನು ಕೆಕೆಆರ್ 12.25 ಕೋಟಿಗೆ ಖರೀದಿಸಿದೆ.
ಇನ್ನು ಭಾನುವಾರ ನಡೆಯಲಿರುವ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ಮೇಲುಗೈ ಸಾಧಿಸಲಿದೆ. ಇತರ ತಂಡಗಳಿಗೆ ಈ ಫ್ರಾಂಚೈಸಿಗಳು ಹೆಚ್ಚಿನ ಮೊತ್ತವನ್ನು ಪರ್ಸ್‌ನಲ್ಲಿ ಹೊಂದಿದೆ. ಆದರೆ ಆರ್‌ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕಡಿಮೆ ಮೊತ್ತವನ್ನು ಹೊಂದಿದೆ.
ಎಲ್ಲಾ ಫ್ರಾಂಚೈಸಿಗಳು ಹೊಂದಿರುವ ಪರ್ಸ್ ಮೊತ್ತ:
ಚೆನ್ನೈ ಸೂಪರ್ ಕಿಂಗ್ಸ್: 20.45 ಕೋಟಿ
ಡೆಲ್ಲಿ ರಾಜಧಾನಿಗಳು: 16.50 ಕೋಟಿ
ಗುಜರಾತ್ ಟೈಟಾನ್ಸ್: 18.85 ಕೋಟಿ
ಕೋಲ್ಕತ್ತಾ ನೈಟ್ ರೈಡರ್ಸ್: 12.65 ಕೋಟಿ
ಲಕ್ನೋ ಸೂಪರ್ ಜೈಂಟ್ಸ್: 6.90 ಕೋಟಿ
ಮುಂಬೈ ಇಂಡಿಯನ್ಸ್: 27.85 ಕೋಟಿ
ಪಂಜಾಬ್ ಕಿಂಗ್ಸ್: 28.65 ಕೋಟಿ
ರಾಜಸ್ಥಾನ್ ರಾಯಲ್ಸ್: 12.15 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 9.25 ಕೋಟಿ
ಸನ್ ರೈಸರ್ಸ್ ಹೈದರಾಬಾದ್: 20.15 ಕೋಟಿ