ಐಪಿಎಲ್ 2022: ಕ್ಯುರೇಟರ್ ಹಾಗೂ ಮೈದಾನ ಸಿಬ್ಬಂದಿಗಳಿಗೆ ಭಾರೀ ನಗದು ಬಹುಮಾನ ಘೋಷಿಸಿದ ಬಿಸಿಸಿಐ

ಐಪಿಎಲ್ 15ನೇ ಆವೃತ್ತಿ ಯಶಸ್ವಿಯಾಗಿ ಸಂಪೂರ್ಣಗೊಂಡಿದ್ದು ಈ ಮೆಗಾ ಟೂರ್ನಿಗೆ ಪಿಚ್ ಸಿದ್ಧಪಡಿಸಿದ ಕ್ಯೂರೇಟರ್‌ಗಳು ಹಾಗೂ ಮೈದಾನದ ಸಿಬ್ಬಂದಿಗಳ ಕಾರ್ಯಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಐಪಿಎಲ್ ಒಟ್ಟು ಆರು ತಾಣಗಳಲ್ಲಿ ಆಯೋಜನೆಯಾಗಿದ್ದು ಎಲ್ಲಾ ಮೈದಾನದ ಕ್ಯುರೇಟರ್ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಜಯ್ ಶಾ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಆವೃತ್ತಿಯ ಯಶಸ್ಸಿನಲ್ಲಿ ಇವರ ಪಾತ್ರ ಅತಿ ದೊಡ್ಡದು ಎಂದು ಶಾ ಮೆಚ್ಚುಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯ ಪಂದ್ಯಗಳು ಆಯೋಜನೆಯಾದ ಎಲ್ಲಾ ಆರು ತಾಣಗಳ ಕ್ಯುರೇಟರ್ ಹಾಗೂ ಸಿಬ್ಬಂದಿಗಳಿಗೆ ಒಟ್ಟು 1.25 ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಲೀಗ್ ಹಂತದ ಪಂದ್ಯಗಳನ್ನು ಆಯೋಜನೆ ಮಾಡಿರುವ ವಾಂಖೆಡೆ ಸ್ಟೇಡಿಯಂ, ಬ್ರೆಬೋರ್ನ್ ಸ್ಟೇಡಿಯಂ, ಡಿವೈ ಪಾಟೀಲ್ ಸ್ಟೇಡಿಯಂ ಹಾಗೂ ಪುಣೆಯ ಎಂಸಿಎ ಕ್ರೀಡಾಂಗಣಗಳಿಗೆ ತಲಾ 25 ಲಕ್ಷ ರೂಪಾಯಿ ಘೋಷಣೆ ಮಾಡಿದ್ದರೆ ಕೊಲ್ಕತ್ತಾದ ಈಡನ್ ಗಾರ್ಡನ್ ಹಾಗೂ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ 12.5 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ.
"ನಾವು ಅತ್ಯಂತ ರೋಚಕತೆಯ ಪಂದ್ಯಗಳಿಗೆ ಸಾಕ್ಷಿಯಾಗಿದ್ದೇವೆ. ಈ ಸಂದರ್ಭದಲ್ಲಿ ಪಿಚ್ ಸಿದ್ಧಪಡಿಸಿದ ಪ್ರತಿಯೊಬ್ಬರಿಗೆ ನಾನು ಧನ್ಯವಾದವನ್ನು ತಿಳಿಸುತ್ತಿದ್ದೇನೆ. ಅವರ ಪರಿಶ್ರಮವನ್ನು ನಾವು ಗುರುತಿಸುತ್ತಿದ್ದೇವೆ" ಎಂದಿದ್ದಾರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ.
ಬಿಸಿಸಿಐ ಈ ಬಾರಿ ಕೊರೊನಾವೈರಸ್‌ನ ಕಾರಣದಿಂದಾಗಿ ಲೀಗ್ ಹಂತದ ಎಲ್ಲಾ 70 ಪಂದ್ಯಗಳಲ್ಲಿ ಮಹಾರಾಷ್ಟ್ರದ ನಾಲ್ಕು ತಾಣಗಳಲ್ಲಿ ಆಯೋಜನೆ ಮಾಡಿತ್ತು. ಮುಂಬೈನ ಮೂರು ತಾಣಗಳು ಹಾಗೂ ಮುಣೆಯ ಒಂದು ಕ್ರೀಡಾಂಗಣದಲ್ಲಿ ಸಂಪೂರ್ಣ ಲೀಗ್ ಪಂದ್ಯಗಳು ಆಯೋಜನೆಯಾಗಿತ್ತು. ಪ್ಲೇಆಫ್‌ನ ಪಂದ್ಯಗಳ ಪೈಕಿ ಕ್ವಾಲಿಫೈಯರ್ 1 ಹಾಗೂ ಎಲಿಮಿನೇಟರ್ ಪಂದ್ಯ ಕೊಲ್ಕತ್ತಾದಲ್ಲಿ ಆಯೋಜನೆಯಾಗಿದ್ದರೆ ಕ್ವಾಲಿಫೈಯರ್ 2 ಹಾಗೂ ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ಆಯೋಜನೆಯಾಗಿತ್ತು.
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ ತಂಡ ಚಾಂಪಿಯನ್ ಆಗಿ ಮೆರೆದಿದೆ. ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎನಿಸಿರುವ ಅಹ್ಮದಾಬಾದ್‌ನ ಸ್ಟೇಡಿಯಂನಲ್ಲಿ ಕಿಕ್ಕಿರುವ ಸೇರಿದ್ದ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಭುತ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ ತಂಡ ಚೊಚ್ಚಲ ಆವೃತ್ತಿಯಲ್ಲಿಯೇ ಚಾಂಪಿಯನ್ ಪಟ್ಟಕ್ಕೇರಿದೆ. 7 ವಿಕೆಟ್‌ಗಳ ಅಂತರದಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಈ ಆವೃತ್ತಿಯ ಲೀಗ್ ಹಂತದ 70 ಪಂದ್ಯಗಳು ಕೇವಲ 4 ಮೈದಾನಗಳಲ್ಲಿ ಆಯೋಜನೆಯಾಗಿದ್ದರೂ ಈ ಪಿಚ್‌ಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಕ್ಕೂ ಸಮಾನಾಗಿ ಬೆಂಬಲ ನೀಡಿತ್ತು. ಅನೇಕ ಪಂದ್ಯಗಳೂ ಸಾಕಷ್ಟು ಪೈಪೋಟಿಯೊಂದಿಗೆ ಕೊನೆಗೊಳ್ಳುವ ಮೂಲಕ ಅಭಿಮಾನಿಗಳಿಗೆ ರಸದೌತಣ ದೊರೆತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications