
ಐಪಿಎಲ್ 15ನೇ ಆವೃತ್ತಿಯ ಅದ್ಭುತ ಆರಂಭವನ್ನು ಪಡೆದಿದ್ದು ನಿರೀಕ್ಷೆಯಂತೆಯೇ ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಸ್ಪಂದನೆ ದೊರೆತಿದೆ. ಈ ಬಾರಿ ಕೂಡ ಪಂದ್ಯಗಳು ಸಾಕಷ್ಟು ರೋಚಕ ಅನುಭವಗಳನ್ನು ನೀಡುತ್ತಿದ್ದು ಅಭಿಮಾನಿಗಳು ಪಂದ್ಯಗಳನ್ನು ಆನಂದಿಸುತ್ತಿದ್ದಾರೆ. ಈ ಮಧ್ಯೆ ಕೊರೊನಾವೈರಸ್‌ನ ಕಾರಣದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿಯ ಟೂರ್ನಿಯ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಕೂಡ ಮುಂಬೈ ಹಾಗೂ ಪುಣೆಯ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗುತ್ತಿದೆ.
ಆದರೆ ಪ್ಲೇ ಆಫ್ ಪಂದ್ಯಗಳ ತಾಣಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಹೀಗಾಗಿ ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳು ಎಲ್ಲಿ ನಡೆಯಬಹುದು ಎಂಬುದು ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಕೊರೊನಾವೈರಸ್‌ನ ಭೀತಿ ಭಾರತದಲ್ಲಿ ಕಡಿಮೆಯಾಗಿರುವ ಕಾರಣ ಬಿಸಿಸಿಐ ಈ ಬಾರಿಯ ಭಿನ್ನ ತಾಣಗಳಲ್ಲಿ ಪ್ಲೇಆಫ್ ಹಾಗೂ ಫೈನಲ್ ಪಂದ್ಯಗಳನ್ನು ಆಯೋಜನೆ ಮಾಡುವ ನಿರ್ಧಾರ ಮಾಡಿದೆ. ಎಲ್ಲವೂ ಯೋಜನೆಯ ಪ್ರಕಾರವೇ ನಡೆದರೆ ಅಹಮದಾಬಾದ್‌ನಲ್ಲಿ ಈ ಬಾರಿಯ ಐಪಿಎಲ್‌ನ ಫೈನಲ್ ಪಂದ್ಯ ಆಯೋಜನೆಯಾಗಲಿದೆ.
ಪ್ಲೇಆಫ್‌ನ ತಾಣಗಳ ಬಗ್ಗೆ ಬಿಸಿಸಿಐನ ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿರುವುದನ್ನು ಇನ್‌ಸೈಡ್ ಸ್ಪೋರ್ಟ್ ಉಲ್ಲೇಖಿಸಿ ವರದಿ ಮಾಡಿದೆ. "ನಾವು ಇನ್ನಷ್ಟೇ ಪ್ಲೇಆಫ್‌ನ ತಾಣಗಳ ಬಗ್ಗೆ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಆದರೆ ಬೇರೆ ಬೇರೆ ತಾಣಗಳಲ್ಲಿ ಆಯೋಜನೆ ಮಾಡುವ ಯೋಚನೆ ಖಂಡಿತವಾಗಿಯೂ ಇದೆ. ಕೊರೊನಾವೈರಸ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಬಯೋಬಬಲ್‌ನ ಒಳಗೆ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಇದು ಸಕಾರಾತ್ಮಕ ಅಂಶವಾಗಿದ್ದು ಮುಂದಿನ ವಾರದಲ್ಲಿ ನಾವು ಪ್ಲೇಆಫ್ ತಾಣಗಳನ್ನು ಅಂತಿಮಗೊಳಿಸಲಿದ್ದೇವೆ" ಎಂದಿದ್ದಾರೆ ಬಿಸಿಸಿಐನ ಹಿರಿಯ ಅಧಿಕಾರಿ.
ಇನ್ನು ಬಿಸಿಸಿಐ ಪ್ರಸ್ತುತ ಲೀಗ್ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರವೇ ಬಿಡುಗಡೆಗೊಳಿಸಿದೆ. ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಬೇಕಿದೆ. ದೇಶದಲ್ಲಿನ ಕೊರೊನಾವೈರಸ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆಯಿಡಲು ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದ್ದು ಇದಕ್ಕೆ ಮೂಲ ಕಾರಣ. ಈಗ ಲೀಗ್ ಹಂತದ ಪಂದ್ಯಗಳು ಯಶಸ್ವಿಯಾಗಿ ನಡೆಯುತ್ತಿದ್ದು ದೇಶದಲ್ಲಿ ಕೊರೊನಾವೈರಸ್ ಪರಿಸ್ಥಿತಿ ಬಹುತೇಕ ನಿಯಂತ್ರಣದಲ್ಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಮುಂದಿನ ಹಂತದ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಜ್ಜಾಗುತ್ತಿದೆ.
ಪ್ರೇಕ್ಷಕರ ಸಂಖ್ಯೆಯಲ್ಲೂ ಹೆಚ್ಚಳ: ಮಹಾರಾಷ್ಟ್ರದಲ್ಲಿ ಎಲ್ಲಾ ಲೀಗ್ ಪಂದ್ಯಗಳು ನಡೆಯುವ ಕಾರಣ ಆರಂಭದಲ್ಲಿ ಟೂರ್ನಿ ನಡೆಯುವ ಮೈದಾನಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು 25 ಶೇಕಡಾಗೆ ನಿಗದಿಗೊಳಿಸಲಾಗಿತ್ತು. ಬಳಿಕ ಅದನ್ನು 50 ಶೇಕಡಾ ಪ್ರೇಕ್ಷಕರಿಗೆ ಅವಕಾಶ ನೀಡಲು ನಿರ್ಧಾರ ತೆಗೆದುಕೊಳ್ಳಲಾಯಿತು. ಇನ್ನು ಫೈನಲ್ ಪಂದ್ಯ ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯುವುದು ಖಚಿತವಾದರೆ ಶೇಕಡಾ 75ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಮಂಡಳಿ ಈಗಾಗಲೇ ಗುಜರಾತ್ ಸರ್ಕಾರದ ಜೊತೆಗೆ ಶೇಕಡಾ 75ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಅನುಮತಿಗೆ ಪ್ರಯತ್ನ ನಡೆಸುತ್ತಿದೆ ಎಂಬ ಮಾಹಿತಿಗಳು ಕೂಡ ಲಭ್ಯವಾಗಿದೆ