IPL 2022: ಚೆನ್ನಾಗಿ ಆಡಬಲ್ಲ ಸಾಮರ್ಥ್ಯವಿದ್ದರೂ ನಾಲ್ಕನೇ ವಾರ ಅವಕಾಶ ಸಿಗದೇ ಬೆಂಚ್ ಕಾದ ಆಟಗಾರರಿವರು!

ಕ್ರಿಕೆಟ್ ಜಗತ್ತಿನ ಅತಿದೊಡ್ಡ ಹಾಗೂ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿ ಕಳೆದ ಮಾರ್ಚ್ 26ರಂದು ಆರಂಭಗೊಂಡಿದ್ದು ಇದೀಗ ಲೀಗ್ ಹಂತದ ಮೊದಲಾರ್ಧ ಮುಕ್ತಾಯಗೊಂಡಿದೆ.
ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 36 ಪಂದ್ಯಗಳು ಮುಕ್ತಾಯವಾಗಿದ್ದು, ಈ ಸಮಯಕ್ಕೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ದ್ವಿತೀಯ ಸ್ಥಾನ, ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ತಾನ್ ರಾಯಲ್ಸ್ ತೃತೀಯ ಸ್ಥಾನ ಹಾಗೂ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಮುಗ್ಗರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಪೈಕಿ ನಾಲ್ಕನೇ ವಾರ ಚೆನ್ನೈ ಸೂಪರ್ ಕಿಂಗ್ಸ್ ಸುಧಾರಿಸಿಕೊಂಡಿದ್ದರೆ, ಮುಂಬೈ ಇಂಡಿಯನ್ಸ್ ಮಾತ್ರ ನಾಲ್ಕನೇ ವಾರವೂ ಸಹ ಮಕಾಡೆ ಮಲಗಿದೆ.
ಹೀಗೆ ಟೂರ್ನಿ ನಾಲ್ಕನೇ ವಾರ ( ಏಪ್ರಿಲ್ 16ರ ಶನಿವಾರದಿಂದ ಏಪ್ರಿಲ್ 22ರ ಶುಕ್ರವಾರದವರೆಗೆ ) ಪೂರೈಸಿದ್ದು, ಈ ವಾರದಲ್ಲಿ ಕಣಕ್ಕಿಳಿಯುವ ಅವಕಾಶ ಸಿಗದೇ ವಾರಪೂರ್ತಿ ಬೆಂಚ್ ಕಾದ 11 ಉತ್ತಮ ಪ್ರದರ್ಶನ ನೀಡಬಲ್ಲಂತಹ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

1. ಎವಿನ್ ಲೆವಿಸ್
ಈ ಬಾರಿಯ ಟೂರ್ನಿಯ ಎರಡನೇ ವಾರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೃಹತ್ ಮೊತ್ತ ಚೇಸ್ ಮಾಡುವಾಗ ಭರ್ಜರಿ ಅರ್ಧಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ಎವಿನ್ ಲೆವಿಸ್ ನಾಲ್ಕನೇ ವಾರದಲ್ಲಿ ಕಣಕ್ಕಿಳಿಯುವ ಅವಕಾಶ ಪಡೆಯದೇ ಬೆಂಚ್ ಕಾದಿದ್ದಾರೆ. ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಬಲ್ಲ ಎವಿನ್ ಲೆವಿಸ್ ಮುಂದಿನ ವಾರದಲ್ಲಿ ಅವಕಾಶ ಪಡೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

2. ಬಾಬಾ ಇಂದ್ರಜಿತ್
2016ರಿಂದ ಒಟ್ಟು 33 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ತಮಿಳುನಾಡು ಮೂಲದ ಬಾಬಾ ಇಂದ್ರಜಿತ್ 66.10ರ ಸರಾಸರಿಯಲ್ಲಿ 2512 ರನ್ ಕಲೆಹಾಕಿ ಅಬ್ಬರಿಸಿದ್ದಾರೆ. ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡು ತಂಡಕ್ಕೆ ಉತ್ತಮ ಕೊಡುಗೆ ನೀಡಿರುವ ವಿಕೆಟ್ ಕೀಪರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಬಾಬಾ ಇಂದ್ರಜಿತ್ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಶೆಲ್ಡನ್ ಜಾಕ್ಸನ್ ನಂತರ ಇರುವ ಎರಡನೇ ವಿಕೆಟ್ ಕೀಪರ್ ಆಯ್ಕೆ. ಆದರೆ, ಬಾಬಾ ಇಂದ್ರಜಿತ್ ಅವರಿಗೆ ಕೋಲ್ಕತಾ ನೈಟ್ ರೈಡರ್ಸ್ ಆಡುವ ಅವಕಾಶ ನೀಡದೇ ಬೆಂಚ್ ಕಾಯುವಂತೆ ಮಾಡಿದೆ.

3. ಯಶ್ ಧುಲ್
ಅಂಡರ್ 19 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ಭಾರತ ಅಂಡರ್ 19 ತಂಡದ ನಾಯಕ ಯಶ್ ಧುಲ್ ನಂತರ ವಿಜಯ್ ಹಜಾರೆ ಟ್ರೋಫಿ ಹಾಗೂ ಸಯ್ಯದ್ ಮುಶ್ತಾಕ್ ಅಲಿ ಟ್ರೋಫಿಗಳಲ್ಲಿ ಆಡಿದ ಮೊದಲನೇ ಇನ್ನಿಂಗ್ಸ್‌ನಲ್ಲಿಯೇ ಶತಕ ಸಿಡಿಸಿ ಅಬ್ಬರಿಸಿದರು. ಹೀಗೆ ವಿವಿಧ ಟೂರ್ನಿಗಳಲ್ಲಿ ಅಬ್ಬರಿಸಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿರುವ ಯಶ್ ಧುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಹರಾಜಿನಲ್ಲಿ ಖರೀದಿಸಿದ್ದು, ಇನ್ನೂ ಸಹ ಅವಕಾಶ ನೀಡದೇ ಬೆಂಚ್ ಕಾಯುವಂತೆ ಮಾಡಿದೆ.

4. ಗುರುಕೀರತ್ ಮಾನ್ ಸಿಂಗ್
ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಪರ ಹಲವಾರು ಉತ್ತಮ ಪ್ರದರ್ಶನಗಳನ್ನು ನೀಡಿ ಹೆಸರು ಮಾಡಿರುವ ಗುರುಕೀರತ್ ಮಾನ್ ಸಿಂಗ್ ಈ ಬಾರಿ ಗುಜರಾತ್ ಟೈಟನ್ಸ್ ತಂಡ ಸೇರಿದ್ದು, ಅವಕಾಶ ಸಿಗದೇ ಬೆಂಚ್ ಕಾದಿದ್ದಾರೆ. ತಂಡದ ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ ಮತ್ತು ವಿಜಯಶಂಕರ್ ಫಾರ್ಮ್ ಕಳೆದುಕೊಂಡಿದ್ದು, ಗುರುಕೀರತ್ ಅವರಿಗೆ ಕಣಕ್ಕಿಳಿಯುವ ಅವಕಾಶ ನೀಡಿದರೆ ತಂಡ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎನ್ನಬಹುದು.

5. ಮಹಿಪಾಲ್ ಲೊಮ್ರಾರ್
2016ರಲ್ಲಿ ಭಾರತ ಅಂಡರ್ 19 ತಂಡದ ಸದಸ್ಯನಾಗಿದ್ದ ಮಹಿಪಾಲ್ ಲೊಮ್ರಾರ್ ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿದು ಕೆಲವೊಂದು ಗಮನಾರ್ಹ ಪ್ರದರ್ಶನವನ್ನು ನೀಡಿದ್ದರು. ದೊಡ್ಡ ಹೊಡೆತಗಳನ್ನು ಬಾರಿಸಬಲ್ಲಂತಹ ಬ್ಯಾಟ್ಸ್‌ಮನ್ ಆಗಿರುವ ಮಹಿಪಾಲ್ ಲೊಮ್ರಾರ್ ಸ್ಪಿನ್ ಬೌಲಿಂಗ್ ಕೂಡ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ. ಆದರೆ ಇಲ್ಲಿಯವರೆಗೂ ಆಡುವ ಅವಕಾಶ ಸಿಗದ ಮಹಿಪಾಲ್ ಲೊಮ್ರಾರ್ ಅವರನ್ನು ಮುಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಸಿಕೊಂಡರೆ ತಂಡದ ಮಧ್ಯಮ ಕ್ರಮಾಂಕ ಮತ್ತಷ್ಟು ಸುಧಾರಿಸಲಿದೆ.

6. ಟಿಮ್ ಡೇವಿಡ್
ಈ ಬಾರಿಯ ಹರಾಜಿನಲ್ಲಿ ಆಲ್ ರೌಂಡರ್ ಟಿಮ್ ಡೇವಿಡ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 8.25 ಕೋಟಿಗೆ ಖರೀದಿಸಿದೆ. ಟಿ ಟ್ವೆಂಟಿ ಪಂದ್ಯಗಳಲ್ಲಿ 158.6 ಸ್ಟ್ರೈಕ್ ರೇಟ್ ಹೊಂದಿ ಬ್ಯಾಟ್ ಬೀಸಿರುವ ಟಿಮ್ ಡೇವಿಡ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ಕೇವಲ 14 ರನ್ ಗಳಿಸಿದ್ದಾರೆ. ಇನ್ನು ಈಗಾಗಲೇ ಟೂರ್ನಿಯ ಎಲ್ಲಾ 7 ಪಂದ್ಯಗಳಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ಟಿಮ್ ಡೇವಿಡ್ ಅವರಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ನೀಡಿದರೆ ಡೇವಿಡ್ ಕಮ್ ಬ್ಯಾಕ್ ಮಾಡುವ ಸಾಧ್ಯತೆಗಳು ಹೆಚ್ಚಿವೆ.

7. ಸ್ಯಾಮ್ ಬಿಲ್ಲಿಂಗ್ಸ್
ಜಗತ್ತಿನ ಹಲವಾರು ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳಲ್ಲಿ ಕಣಕ್ಕಿಳಿದು ಅಬ್ಬರಿಸಿ ಉತ್ತಮ ಅನುಭವವನ್ನು ಹೊಂದಿರುವ ಸ್ಯಾಮ್ ಬಿಲ್ಲಿಂಗ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸೇರಿದ್ದು, ನಾಲ್ಕನೇ ವಾರದಲ್ಲಿಯೂ ಅವಕಾಶ ಸಿಗದೇ ಬೆಂಚ್ ಕಾದಿದ್ದಾರೆ.

8. ಚೇತನ್ ಸಕಾರಿಯಾ
ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿದು 14 ವಿಕೆಟ್ ಪಡೆದಿದ್ದ ಚೇತನ್ ಸಕಾರಿಯಾ ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಪ್ರತಿನಿಧಿಸಿದ್ದರು. ತನ್ನ ಉತ್ತಮ ಬೌಲಿಂಗ್ ಶೈಲಿಯಿಂದ ಹಲವಾರು ದಿಗ್ಗಜ ಕ್ರಿಕೆಟಿಗರಿಂದ ಮೆಚ್ಚುಗೆಯನ್ನೂ ಪಡೆದುಕೊಂಡಿರುವ ಚೇತನ್ ಸಕಾರಿಯಾ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೇರಿದ್ದು ಇನ್ನೂ ಕಣಕ್ಕಿಳಿಯುವ ಅವಕಾಶ ಸಿಗದೇ ಬೆಂಚ್ ಕಾಯುತ್ತಿದ್ದಾರೆ.

9. ಸಂದೀಪ್ ಶರ್ಮಾ
ಕಳೆದ ಹಲವು ಆವೃತ್ತಿಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಆಗಿದ್ದ ಸಂದೀಪ್ ಶರ್ಮಾ ಈ ಬಾರಿ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದು, ಇನ್ನೂ ಸಹ ಆಡುವ ಅವಕಾಶ ಸಿಗದೇ ಬೆಂಚ್ ಕಾದಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಬೌಲಿಂಗ್ ವಿಭಾಗ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದು ನಾಯಕ ಮಯಾಂಕ್ ಅಗರ್ವಾಲ್ ಸಂದೀಪ್ ಶರ್ಮಾ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳುವತ್ತ ಯೋಚಿಸಬೇಕಿದೆ.

10. ಮಯಾಂಕ್ ಮಾರ್ಕಂಡೆ
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ 7 ಪಂದ್ಯಗಳಲ್ಲಿ ಸೋತು ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯಗಳಲ್ಲಿ ಗೆಲ್ಲಬೇಕೆಂದರೆ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಬೇಕಿದ್ದು ಮಯಾಂಕ್ ಮಾರ್ಕಂಡೆ ಅವರಿಗೆ ಸ್ಥಾನ ನೀಡಬೇಕಾಗಿದೆ. 2018ರ ಐಪಿಎಲ್ ಟೂರ್ನಿಯಲ್ಲಿಯೂ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಮಯಾಂಕ್ ಮಾರ್ಕಂಡೆ ಆ ಆವೃತ್ತಿಯಲ್ಲಿ 3 ವಿಕೆಟ್ ಪಡೆದು ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಒಟ್ಟಾರೆ 18 ಪಂದ್ಯಗಳನ್ನಾಡಿ 16 ವಿಕೆಟ್ ಪಡೆದಿರುವ ಮಯಾಂಕ್ ಮಾರ್ಕಂಡೆಗೆ ಮುಂಬೈ ಇಂಡಿಯನ್ಸ್ ಕಣಕ್ಕಿಳಿಯುವ ಅವಕಾಶ ನೀಡಬೇಕಿದೆ.

11. ಟಿಮ್ ಸೌಥಿ
ನ್ಯೂಜಿಲೆಂಡ್ ಮೂಲದ ವೇಗಿ ಟಿಮ್ ಸೌಥಿ ಪ್ರದರ್ಶನ ಹಾಗೂ ಬೌಲಿಂಗ್ ಅಂಕಿ ಅಂಶಗಳ ಕುರಿತು ಬಿಡಿಸಿ ವಿವರಿಸಬೇಕಾದ ಅಗತ್ಯವೇ ಇಲ್ಲ. ಉತ್ತಮ ಬೌಲಿಂಗ್ ದಾಳಿ ನಡೆಸಬಲ್ಲ ಸಾಮರ್ಥ್ಯವಿರುವ ಟಿಮ್ ಸೌಥಿ ಈ ಬಾರಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಸೇರಿದ್ದು, ನಾಲ್ಕನೇ ವಾರದಲ್ಲಿ ನಡೆದ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗದೇ ಬೆಂಚ್ ಕಾದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications