
ಐಪಿಎಲ್ 15ನೇ ಆವೃತ್ತಿಯ ಸಮಾರೋಪ ಸಮಾರಂಭ ಅಹ್ಮದಾಬಾದ್‌ನ ನರೇಂದ್ರ ಮೊದಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವದೊಂದಿಗೆ ಕ್ರಿಕೆಟ್ ಪ್ರೇಮಿಗಳು ಅದ್ಭುತ ಮನರಂಜನೆಯನ್ನು ಸವಿದಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ಕ್ರಿಕೆಟ್ ಅಭಿಮಾನಿಗಳಿಗೆ ಭಾರತೀಯ ಕ್ರಿಕೆಟ್‌ನ ಸ್ಮರಣೀಯ ಕ್ಷಣಗಳ ದೃಶ್ಯ ವೈಭವನ್ನು ಪ್ರಸ್ತುತ ಪಡಿಸಿದೆ.
ಕೊರೊನಾವೈರಸ್ ಕಾರಣದಿಂದಾಗಿ ಕಳೆದ ಎರಡು ಆವೃತ್ತಿಗಳಲ್ಲಿ ಸಮಾರೋಪ ಸಮಾರಂಭವನ್ನು ಬಿಸಿಸಿಐ ಆಯೋಜಿಸಿರಲಿಲ್ಲ. ಆದರೆ ಈ ಬಾರಿ ಐಪಿಎಲ್ 15ನೇ ಆವೃತ್ತಿಯನ್ನು ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅದ್ದೂರಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ನಡೆದು ಬಂದ ಹಾದಿಯ ವಿಶೇಷ ಕ್ಷಣಗಳನ್ನು ಪ್ರಸ್ತುತಡಿಸಲಾಗಿದೆ. ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ತಂಡ ಈ ಸಂದರ್ಭದಲ್ಲಿ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.
ಇನ್ನು ಇದಕ್ಕೂ ಮುನ್ನ ಬಾಲಿವುಡ್ ನಟ ರಣ್ವೀರ್ ಸಿಂಗ್ ಭಾರತೀಯ ಚಿಂತ್ರರಂಗದ ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಕನ್ನಡದ ಕೆಜಿಎಫ್ 2 ಹಾಡಿಗೂ ರಣ್ವೀರ್ ಸಿಂಗ್ ನೃತ್ಯ ಮಾಡುವ ಮೂಲಕ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದಾರೆ. ಸುಮಾರು 30 ನಿಮಿಷಗಳ ಕಾಲ ನಡೆದ ಈ ಸಮಾರೋಪ ಸಮಾರಂಭಕ್ಕೆ ಭಾರತೀಯ ಕ್ರಿಕೆಟ್‌ನ ದಿಗ್ಗಜರು ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರು ಸೇರಿದ್ದಾರೆ. ಸುಮಾರು 1.30 ಲಕ್ಷ ಪ್ರೇಕ್ಷಕರು ಈ ಫೈನಲ್ ಪಂದ್ಯವನ್ನು ಕಣ್ತಿಂಬಿಕೊಳ್ಳಲು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೇರಿಕೊಂಡಿದ್ದಾರೆ.
ಇನ್ನು ಈ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಒಂದು ಪಂದ್ಯವನ್ನು ಈ ಮೈದಾನದಲ್ಲಿ ಆಡಿರುವ ರಾಜಸ್ಥಾನ್ ರಾಯಲ್ಸ್ ಪಿಚ್‌ನ ಲಾಭವನ್ನು ಪಡೆಯಲು ಯೋಜನೆ ರೂಪಿಸಿದೆ. ಹೀಗಾಗಿ ಗುಜರಾತ್ ಟೈಟನ್ಸ್ ತಂಡ ಮೊದಲಿಗೆ ಬೌಲಿಂಗ್ ದಾಳಿ ನಡೆಸಬೇಕಿದೆ.
ಇತ್ತಂಡಗಳ ಆಡುವ ಬಳಗ:
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿ ಶ್ರೀನಿವಾಸನ್ ಸಾಯಿ ಕಿಶೋರ್, ಲಾಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಶಮಿ
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್/ ನಾಯಕ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಓಬೇದ್ ಮೆಕಾಯ್, ಯುಜ್ವೇಂದ್ರ ಚಾಹಲ್