
ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಆವೃತ್ತಿ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುವ ಮೂಲಕ ಚಾಲನೆ ಪಡೆಯಲಿದೆ. 10 ತಂಡಗಳು ಈ ಬಾರಿ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣೆಸಾಡಲು ಸಜ್ಜಾಗಿದೆ. ಈ ಟೂರ್ನಿಯಲ್ಲುಯೂ ಸಾಕಷ್ಟು ದಾಖಲೆಗಳು ಮುರಿಯುವ ಸಾಧ್ಯತೆಯಿದ್ದು ಒಂದು ಪ್ರಮುಖ ದಾಖಲೆಯ ಮೇಲೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರ ಡ್ವೇಯ್ನ್ ಬ್ರಾವೋ ಸಜ್ಜಾಗಿದ್ದಾರೆ.
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಮಾಜಿ ವೇಗಿ ಲಸಿತ್ ಮಲಿಂಗ ಹೆಸರಿನಲ್ಲಿದೆ. 170 ವಿಕೆಟ್ ಕಬಳಿಸಿರುವ ಲಸಿತ್ ಮಲಿಂಗಾ ದಾಖಲೆಯ ಮೇಲೆ ಡ್ವೇಯ್ನ್ ಬ್ರಾವೋ ಕಣ್ಣಿಟ್ಟಿದ್ದು ಈ ದಾಖಲೆಯನ್ನು ತನ್ನ ಹೆಸರಿಗೆ ಬರೆಯಲು ಸಜ್ಜಾಗಿದ್ದಾರೆ. ಡ್ವೇಯ್ನ್ ಬ್ರಾವೋ ಈ ದಾಖಲೆಗಾಗಿ ಕೇವಲ 3 ವಿಕೆಟ್‌ಗಳಷ್ಟು ಹಿಂದಿದ್ದಾರೆ.
ಲಸಿತ್ ಮಲಿಂಗಾ ಐಪಿಎಲ್‌ಗೆ ಕೂಡ ಈಗಾಗಲೇ ನಿವೃತ್ತಿಯನ್ನು ಘೋಷಿಸಿದ್ದು ಈ ಬಾರಿಯ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತ 38ರ ಹರೆಯದ ಡ್ವೇಯ್ನ್ ಬ್ರಾವೋ ಟೂರ್ನಿಯಲ್ಲಿ ಇನ್ನೂ ಮಿಂಚುತ್ತಿದ್ದು ಈ ಬಾರಿ 4 ಕೋಟಿ ಮೊತ್ತದ ಕಾಂಟ್ರಾಕ್ಟ್ ಹೊಂದಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಬ್ರಾವೋ 167 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಡ್ವೇಯ್ನ್ ಬ್ರಾವೋ ಹೆಸರಿನಲ್ಲಿಯೇ ಇದ್ದು 522 ಪಂದ್ಯಗಳಲ್ಲಿ 571 ವಿಕೆಟ್ ಸಂಪಾದಿಸಿ ಈ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಇಮ್ರಾನ್ ತಾಹಿರ್‌ಗಿಂತ 120 ವಿಕೆಟ್ ಹೆಚ್ಚು ಪಡೆದಿದ್ದಾರೆ ಬ್ರಾವೋ.
ಇನ್ನು ಐಪಿಎಲ್‌ನಲ್ಲಿನ ಈ ದಾಖಲೆಯನ್ನು ಹಿಂದಿಕ್ಕುವ ಅವಕಾಶ ಭಾರತೀಯ ಸ್ಪಿನ್ನರ್‌ಗಳಾದ ಅಮಿತ್ ಮಿಶ್ರಾ ಹಾಗೂ ಪಿಯೂಷ್ ಚಾವ್ಲಾ ಅವರಿಗಿತ್ತು. ಆದರೆ 2021ರ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶಗಳು ಈ ಆಟಗಾರರಿಗೆ ದೊರೆಯದ ಕಾರಣ ಈ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. 2021ರ ಆವೃತ್ತಿಯಲ್ಲಿ ಡೆಲ್ಲಿ ತಂಡದ ಪರವಾಗಿ ಆಡಿದ್ದ ಅಮಿತ್ ಮಿಶ್ರಾ 5 ಪಂದ್ಯಗಳನ್ನು ಆಡಿದ್ದು 6 ವಿಕೆಟ್ ಸಂಪಾದಿಸಿದ್ದರು. ಈ ಮೂಲಕ ಐಪಿಎಲ್‌ನಲ್ಲಿ ಅವರು 166 ವಿಕೆಟ್ ಸಂಪಾದಿಸಿದ್ದಾರೆ. ಆದರೆ ಈ ಬಾರಿಯ ಆವೃತ್ತಿಗೆ ಹರಾಜಾಗದೆ ಉಳಿದುಕೊಂಡಿದ್ದಾರೆ.
ಇನ್ನು ಪಿಯೂಷ್ ಚಾವ್ಲಾ ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಕೇವಲ ಒಂದೇ ಪಂದ್ಯದಲ್ಲಿ ಕಣಕ್ಕಿಳಿದಿದ್ದು ಈ ಬಾರಿ ಯಾವುದೇ ತಂಡವೂ ಖರೀದಿಸದ ಕಾರಣ ಹರಾಜಾಗದೆ ಉಳಿಸುಕೊಂಡಿದ್ದಾರೆ. ಪಿಯೂಷ್ ಚಾವ್ಲ 157 ವಿಕೆಟ್‌ಗಳನ್ನು ಐಪಿಎಲ್ ಟೂರ್ನಿಯಲ್ಲಿ ಕಬಳಿಸಿದ್ದಾರೆ.