ಐಪಿಎಲ್ 2022: ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರವಾಗಲಿವೆ ಟೂರ್ನಿಯ ಈ ಪ್ರಮುಖ ಅಂಶಗಳು

ಮುಂಬರುವ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತು ಕಳೆದ ವರ್ಷಗಳಿಂದಲೇ ಚಟುವಟಿಕೆಗಳು ಆರಂಭವಾಗಿದ್ದು ಕುತೂಹಲಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಇದೇ ತಿಂಗಳ 12 ಹಾಗೂ 13ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಈ ಬಾರಿಯ ಟೂರ್ನಿಯ ಮೇಲಿನ ನಿರೀಕ್ಷೆ ಹಾಗೂ ಕುತೂಹಲವನ್ನು ದುಪ್ಪಟ್ಟು ಮಾಡಿತು. ಹಾಗೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿಗಾಗಿ ಹತ್ತು ತಂಡಗಳು ಸೆಣಸಾಟ ನಡೆಸಲಿರುವುದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಬೇರೆ ದೇಶಗಳಲ್ಲಿ ಆಯೋಜಿಸದೆ ಸಂಪೂರ್ಣವಾಗಿ ಭಾರತ ನೆಲದಲ್ಲಿಯೇ ಆಯೋಜಿಸಬೇಕೆಂಬ ಉದ್ದೇಶವನ್ನು ಬಿಸಿಸಿಐ ಹೊಂದಿದ್ದು, ಕಳೆದ ಬಾರಿ ಇದೇ ರೀತಿಯ ಆಲೋಚನೆಯಿಂದ ಟೂರ್ನಿಯನ್ನು ಭಾರತ ನೆಲದಲ್ಲಿ ಆಯೋಜಿಸಿ ಕೈ ಸುಟ್ಟಿಕೊಂಡಿದ್ದು ಸದ್ಯ ಬಿಸಿಸಿಐನ್ನು ಚಿಂತೆಗೀಡಾಗುವಂತೆ ಮಾಡಿದೆ. ಹೌದು, ಬಿಸಿಸಿಐ ಕಳೆದ ವರ್ಷ ನಡೆದಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಮೊದಲಿಗೆ ಭಾರತದ ನೆಲದಲ್ಲಿಯೇ ಆಯೋಜನೆ ಮಾಡಿತ್ತು. ದೇಶದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿದ್ದ ಕಾರಣದಿಂದ ಬಯೋ ಬಬಲ್ ವ್ಯವಸ್ಥೆಯೊಂದಿಗೆ ಈ ಟೂರ್ನಿಯನ್ನು ಆಯೋಜಿಸಿದ್ದರೂ ಸಹ ಲೀಗ್ ಹಂತದ ಸುಮಾರು 29 ಪಂದ್ಯಗಳು ಮುಗಿದ ನಂತರ ವಿವಿಧ ತಂಡಗಳ ಕೆಲ ಆಟಗಾರರಲ್ಲಿ ಮತ್ತು ಸಿಬ್ಬಂದಿ ವರ್ಗದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.
ಹೀಗೆ ಭಾರತದ ನೆಲದಲ್ಲಿ ಟೂರ್ನಿಯನ್ನು ಆಯೋಜಿಸಿದ್ದರೂ ಸಹ ಸಂಪೂರ್ಣವಾಗಿ ನಡೆಸುವಲ್ಲಿ ವಿಫಲವಾದ ಬಿಸಿಸಿಐ ಸಾಕಷ್ಟು ನಷ್ಟವನ್ನು ಕೂಡ ಅನುಭವಿಸಿತ್ತು. ಹೀಗೆ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಕಳೆದ ಬಾರಿಯ ಐಪಿಎಲ್ ಟೂರ್ನಿಯನ್ನು ನಂತರದ ದಿನಗಳಲ್ಲಿ ಯುಎಇಗೆ ಸ್ಥಳಾಂತರಿಸಿ ಮುಂದುವರೆಸಿ ಯಶಸ್ವಿಯಾಗಿ ಮುಕ್ತಾಯಗೊಳಿಸಲಾಗಿತ್ತು. ಹೀಗೆ ಕಳೆದ ಬಾರಿ ಭಾರತದಲ್ಲಿ ಐಪಿಎಲ್ ಆಯೋಜಿಸಲು ಮುಂದಾಗಿ ಕೈ ಸುಟ್ಟುಕೊಂಡಿರುವ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಈ ಬಾರಿ ಆ ರೀತಿಯ ಅಚಾತುರ್ಯಗಳು ನಡೆಯಬಾರದು ಎಂಬ ಮುಂದಾಲೋಚನೆಯಿಂದ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿದೆ. ಹೌದು, ಬ್ರಿಜೇಶ್ ಪಟೇಲ್ ನೇತೃತ್ವದ ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿಯು ಇಂದು ( ಫೆಬ್ರವರಿ 24 ) ವಿಶೇಷ ಸಭೆಯನ್ನು ನಡೆಸುತ್ತಿದ್ದು, ಈ ಕೆಳಕಂಡ ಅಂಶಗಳ ಕುರಿತು ಚರ್ಚೆಯನ್ನು ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದೆ.
• ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಇಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ನಿಗದಿಪಡಿಸಲಾಗುತ್ತದೆ.
• ಇನ್ನು ಕಳೆದ ಬಾರಿಯ ಐಪಿಎಲ್ ಆವೃತ್ತಿಯನ್ನು ವಿವಿಧ ನಗರಗಳಲ್ಲಿ ಆಯೋಜಿಸಿ ಕೈಸುಟ್ಟುಕೊಂಡಿದ್ದರಿಂದ ಈ ಬಾರಿಯ ಐಪಿಎಲ್ ಆವೃತ್ತಿಯ ಪಂದ್ಯಗಳನ್ನು ಆದಷ್ಟು ಒಂದೇ ನಗರದಲ್ಲಿ ಹಾಗೂ ತುಂಬಾ ಹತ್ತಿರವಿರುವ ನಗರಗಳಲ್ಲಿ ಆಯೋಜಿಸುವ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಸದ್ಯ ಮುಂಬೈ ಹಾಗೂ ಪುಣೆ ನಗರಗಳಲ್ಲಿ ಲೀಗ್ ಹಂತದ ಪಂದ್ಯಗಳನ್ನು ನಡೆಸಲು ಚಿಂತನೆ ನಡೆಸುತ್ತಿದ್ದು, ಪ್ಲೇ ಆಫ್ ಸುತ್ತಿನ ಪಂದ್ಯಗಳನ್ನು ಯಾವ ತಾಣದಲ್ಲಿ ನಡೆಸಬೇಕು ಎಂಬುದರ ಕುರಿತು ಕೂಡ ಚರ್ಚೆ ನಡೆಯಲಿದೆ.
• ಇಂದಿನ ಸಭೆಯಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಯಾವ ದಿನದಂದು ಆರಂಭಿಸಬೇಕು ಎಂಬುದರ ಕುರಿತು ಅಂತಿಮ ತೀರ್ಮಾನವನ್ನು ಬಿಸಿಸಿಐ ಕೈಗೊಳ್ಳಲಿದೆ. ಮಾರ್ಚ್ 27ರಂದು ಟೂರ್ನಿ ಆರಂಭವಾಗಲಿದೆ ಎಂದು ಈ ಹಿಂದೆ ಸುದ್ದಿಯಾಗಿತ್ತು ಆದರೆ ಸ್ಟಾರ್ ಸ್ಪೋರ್ಟ್ ನೆಟ್‌ವರ್ಕ್ ಮಾರ್ಚ್ 26ರಂದೇ ಟೂರ್ನಿಯನ್ನು ಆಯೋಜಿಸಬೇಕೆಂದು ಮನವಿ ಮಾಡಿಕೊಂಡಿರುವುದರಿಂದ ಈ ಕುರಿತಾಗಿಯೂ ಕೂಡ ಚರ್ಚೆಗಳು ನಡೆಯಲಿವೆ.
• ಹಾಗೂ ಈ ವಿಷಯಗಳನ್ನು ಹೊರತುಪಡಿಸಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಯೋಜನೆಗೆ ಸಂಬಂಧಿಸಿದ ಇತರೆ ಅಂಶಗಳ ಕುರಿತು ಕೂಡ ಈ ಸಭೆಯಲ್ಲಿ ಚರ್ಚೆಗಳನ್ನು ನಡೆಸಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications