
ಐಪಿಎಲ್ 15ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಮಾಂಚನಕಾರಿ ಗೆಲುವು ಸಾಧಿಸಿದೆ. 178 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಪ್ರಮುಖ ಆಟಗಾರರು ನಿರೀಕ್ಷಿದ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಆದರೆ ಲಲಿತ್ ಯಾದವ್ ಹಾಗೂ ಅಕ್ಷರ್ ಪಟೇಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಇನ್ನೂ 10 ಎಸೆತಗಳು ಬಾಕಿಯಿರುವಂತೆಯೇ ಗೆಲುವು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಗ್ ನಡೆಸಿದ ರೋಹಿತ್ ಪಡೆ 178 ರನ್‌ಗಳ ಸವಾಲಿನ ಗುರಿ ನೀಡಿತ್ತು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಮಿಂಚಿದರೆ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಬೌಲಿಂಗ್‌ನಲ್ಲಿ ಕುಲ್‌ದೀಪ್ ಯಾದವ್ ಅದ್ಭುತ ದಾಳಿ ನಡೆಸಿದರು.
ಆರಂಭದಲ್ಲೇ ಆಘಾತ ಅನುಭವಿಸಿದ ಡೆಲ್ಲಿ: ಇನ್ನು 179 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಕುಸಿತ ಕಂಡಿತು. ಎರಡು ರನ್‌ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಳ್ಳುವ ಮೂಲಕ ತಂಡ ಭಾರೀ ಹಿನ್ನಡೆಯನ್ನು ಅನುಭವಿಸಿತು. ಉತ್ತಮ ಬ್ಯಾಟಿಂಗ್ ನಡೆಸುವ ಮುನ್ಸೂಚನೆ ನೀಡಿದ್ದ ಪೃಥ್ವಿ ಶಾ ಕೂಡ 38 ರನ್‌ಗಳಿಗೆ ಔಟ್ ಆಗುವ ಮೂಲಕ ಆಘಾತ ಅನುಭವಿಸಿತು. ಮಂದೀಪ್ ಸಿಂಗ್ ಒಂದೂ ರನ್ ಗಳಿಸದೆ ಔಟಾದರೆ ನಾಯಕ ರಿಷಬ್ ಪಂತ್ ಒಂದು ರನ್‌ಗಳಿಸಿ ಫೆವಿಲಿಯನ್ ಸೇರಿದರು. ರೋವ್ಮನ್ ಪೋವೆಲ್ ಕೂಡ ಶೂನ್ಯ ಸುತ್ತಿದಾಗ ಡೆಲ್ಲಿ ತಂಡ 72 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಶಾರ್ದೂಲ್, ಲಲಿತ್, ಅಕ್ಷರ್ ಆರ್ಭಟ: ಕನಿಷ್ಠ ಮೊತ್ತಕ್ಕೆ ಡೆಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಾಗ ಮುಂಬೈ ಇಂಡಿಯನ್ಸ್‌ಗೆ ಸುಲಭ ಆಹಾರವಾಗಲಿದೆ ಎಂದು ಎಲ್ಲರು ಭಾವಿಸಿದ್ದರು. ಆದರೆ ನಂತರ ಡೆಲ್ಲಿ ತಿರುಗಿ ಬೀಳುವಲ್ಲಿ ಯಶಸ್ವಿಯಾಯಿತು. ಮೊದಲಿಗೆ ಶಾರ್ದೂಲ್ ರನ್‌ವೇಗಕ್ಕೆ ಚುರುಕು ಮುಟ್ಟಿಸಿದರೆ ನಂತರ ಅಕ್ಷರ್ ಪಟೇಲ್ ಹಾಗೂ ಲಲಿತ್ ಯಾದವ್ ಇನ್ನಿಂಗ್ಸ್ ಬೆಳೆಸುತ್ತಾ ಅಂತಿಮ ಹಂತದಲ್ಲಿ ಆರ್ಭಟಿಸಿದರು, ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ 10 ಎಸೆತಗಳು ಬಾಕಿಯಿರುವಂತೆಯೇ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಮುಂಬೈ ಇಂಡಿಯನ್ಸ್, ಪ್ಲೇಯಿಂಗ್ XI: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ, ಅನ್ಮೋಲ್ಪ್ರೀತ್ ಸಿಂಗ್, ಕೀರಾನ್ ಪೊಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸಾಮ್ಸ್, ಮುರುಗನ್ ಅಶ್ವಿನ್, ಟೈಮಲ್ ಮಿಲ್ಸ್, ಜಸ್ಪ್ರೀತ್ ಬುಮ್ರಾ, ಬೆಸಿಲ್ ಥಂಪಿ
ಬೆಂಚ್: ಆರ್ಯನ್ ಜುಯಲ್, ಡೆವಾಲ್ಡ್ ಬ್ರೆವಿಸ್, ಸಂಜಯ್ ಯಾದವ್, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ರಿಲೆ ಮೆರೆಡಿತ್, ಫ್ಯಾಬಿಯನ್ ಅಲೆನ್, ರಮಣದೀಪ್ ಸಿಂಗ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ರಾಹುಲ್ ಬುದ್ಧಿ, ಅರ್ಷದ್ ಖಾನ್
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI: ಪೃಥ್ವಿ ಶಾ, ಟಿಮ್ ಸೀಫರ್ಟ್, ಮನ್‌ದೀಪ್ ಸಿಂಗ್, ರಿಷಬ್ ಪಂತ್(ವಿಕೆಟ್ ಕೀಪರ್/ನಾಯಕ), ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್, ಕಮಲೇಶ್ ನಾಗರಕೋಟಿ
ಬೆಂಚ್: ಶ್ರೀಕರ್ ಭರತ್, ಸರ್ಫರಾಜ್ ಖಾನ್, ಚೇತನ್ ಸಕರಿಯಾ, ಅಶ್ವಿನ್ ಹೆಬ್ಬಾರ್, ಪ್ರವೀಣ್ ದುಬೆ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ತ್ವಾಲ್