
ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಇನ್ನು 11 ದಿನಗಳು ಮಾತ್ರವೇ ಬಾಕಿಯಿದೆ. ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಕೂಡ ಟೂರ್ನಿಗೆ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದೆ. ವಿದೇಶಿ ಆಟಗಾರರು ಕೂಡ ಭಾರತಕ್ಕೆ ಆಗಮಿಸುತ್ತಿದ್ದು ಕ್ವಾರಂಟೈನ್ ಪೂರೈಸುತ್ತಿದ್ದಾರೆ. ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವಾಟ್ಸನ್ ಸಹಾಯಕ ಕೋಚ್ ಆಗಿ ಸೇರ್ಪಡೆಯಾಗುತ್ತಿರುವುದನ್ನು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಐಪಿಎಲ್‌ನಲ್ಲಿ ಹಲವು ಆವೃತ್ತಿಗಳಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ಶೇನ್ ವಾಟ್ಸನ್ ಪ್ರಸ್ತುತ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಆದರೆ ಈ ಬಾರಿಯ ಆವೃತ್ತಿಯಲ್ಲಿ ಕೋಚಿಂಗ್ ಸಿಬ್ಬಂದಿಯಾಗಿ ಐಪಿಎಲ್‌ನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಶೇನ್ ವಾಟ್ಸನ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳಲು ಭಾರತಕ್ಕೆ ತೆರಳುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದವರೇ ಆದ ರಿಕಿ ಪಾಂಟಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಾಂಟಿಂಗ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಶೇನ್ ವಾಟ್ಸನ್ ಕೂಡ ಡೆಲ್ಲಿ ತಂಡಕ್ಕೆ ಸೇರ್ಪಡೆಯಾಗುತ್ತಿರುವುದು ಕುತೂಹಲ ಮೂಡಿಸಿದೆ. ಇನ್ನು ಈ ಬಗ್ಗೆ ವಾಟ್ಸನ್ ವಿಡಿಯೋ ಸಂದೇಶವನ್ನು ನೀಡಿದ್ದು ಪಾಂಟಿಂಗ್ ಜೊತೆಗೆ ಸಹಾಯಕ ಕೋಚ್ ಆಗಿ ಹೊಸ ಅಧ್ಯಾಯ ಆರಂಭಿಸುತ್ತಿರುವು ಉತ್ಸುಕತೆಯನ್ನು ಹೆಚ್ಚಿಸಿದೆ ಎಂದಿದ್ದಾರೆ. ರಿಕಿ ಪಾಂಟಿಂಗ್ ಅವರಿಂದ ಕಲಿತುಕೊಳ್ಳಲು ಇದಕ್ಕಿಂತ ಉತ್ತಮ ಅವಕಾಶ ದೊರೆಯಲಾರದು ಎಂದು ವಾಟ್ಸನ್ ಹೇಳಿಕೊಂಡಿದ್ದಾರೆ.
"ಐಪಿಎಲ್ ವಿಶ್ವದ ಅತ್ಯುತ್ತಮ ಕ್ರಿಕೆಟ್ ಲೀಗ್ ಆಗಿದೆ. ಆಟಗಾರನಾಗಿ ನನ್ನಲ್ಲಿ ಸಾಕಷ್ಟು ಅತ್ಯುತ್ತಮ ನೆನಪುಗಳಿವೆ. ಈಗ ನಾನು ಕೋಚಿಂಗ್ ಜವಾಬ್ಧಾರಿ ಹೊತ್ತು ಆಗಮಿಸುತ್ತಿದ್ದೇನೆ. ದಿಗ್ಗಜ ರಿಕಿ ಪಾಂಟಿಂಗ್ ಅವರೊಂದಿಗೆ ಕರ್ತವ್ಯ ನಿರ್ವಹಿಸುವ ಅವಕಾಶ ನನಗೆ ದೊರೆತಿದೆ. ಆತನೋರ್ವ ಅದ್ಭುತ ನಾಯಕ. ಈಗ ಅವರು ವಿಶ್ವದ ಅತ್ಯುತ್ತಮ ಕೋಚ್‌ಗಳಲ್ಲಿ ಒಬ್ಬರು. ನನಗೆ ಇದು ರಿಕಿ ಪಾಂಟಿಂಗ್ ಅವರಿಂದ ಕಲಿತುಕೊಳ್ಳಲು ದೊರೆತ ಅದ್ಭುತವಾದ ಅವಕಾಶ. ನಾನಿ ನಿಜಕ್ಕೂ ಸಾಕಷ್ಟು ಉತ್ಸುಕನಾಗಿದ್ದೇನೆ" ಎಂದಿದ್ದಾರೆ ಶೇನ್ ವಾಟ್ಸನ್.
ಐಪಿಎಲ್‌ನಲ್ಲಿ 13 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಶೇನ್ ವಾಟ್ಸನ್ 145 ಪಂದ್ಯಗಳನ್ನು ಆಡಿದ್ದು 3874 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಸೇರಿದೆ. ಅಲ್ಲದೆ ಬೌಲಿಂಗ್‌ನಲ್ಲಿಯೂ ವಾಟ್ಸನ್ 92 ವಿಕೆಟ್ ಪಡೆದಿದ್ದು ಐಪಿಎಲ್‌ನಲ್ಲಿ ಆಡಿರುವ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ ಶೇನ್ ವಾಟ್ಸನ್.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್‌ನಲ್ಲಿ ಈವರೆಗೂ ಟ್ರೋಫಿ ಗೆಲ್ಲು ವಿಫಲವಾಗಿದ್ದರೂ 2020 ರ ಆವೃತ್ತಿಯಲ್ಲಿ ಫೈನಲ್ ಹಂತಕ್ಕೆ ತಲುಪಿತ್ತು. ಕಳೆದ ಆವೃತ್ತಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಹಂತಕ್ಕೆ ತಲುಪಿವಲ್ಲಿ ಯಶಸ್ವಿಯಾಗಿತ್ತು. ಈ ಬಾರಿಯ ಆವೃತ್ತಿಯಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಿರುದ್ಧ ಮಾರ್ಚ್ 27ರಂದು ಟೂರ್ನಿಯ ಅಭಿಯಾನ ಆರಂಭಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ಸ್ಕ್ವಾಡ್ ಹೀಗಿದೆ: ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ರಿಷಭ್ ಪಂತ್ (ನಾಯಕ), ಅಕ್ಷರ್ ಪಟೇಲ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾರ್ದೂಲ್ ಠಾಕೂರ್, ಮುಸ್ತಾಫಿಜುರ್ ರೆಹಮಾನ್, ಕುಲದೀಪ್ ಯಾದವ್, ಅಶ್ವಿನ್ ಹೆಬ್ಬಾರ್, ಸರ್ಫರಾಜ್ ಖಾನ್, ಕಮಲೇಶ್ ನಾಗರಕೋಟಿ, ಕೆಎಸ್ ಭರತ್, ಮನದೀಪ್ ಸಿಂಗ್, ಖಲೀಲ್ ಅಹ್ಮದ್, ಚೇತನ್ ಸಕರಿಯಾ, ಲಲಿತ್ ಯಾದವ್, ರಿಪಾಲ್ ಪಟೇಲ್, ಯಶ್ ಧುಲ್, ರೋವ್ಮನ್ ಪೊವೆಲ್, ಪ್ರವೀಣ್ ದುಬೆ, ಲುಂಗಿ ಎನ್ಗಿಡಿ, ಟಿಮ್ ಸೀಫರ್ಟ್, ವಿಕ್ಕಿ ಓಸ್ತ್ವಾಲ್