ಐಪಿಎಲ್: ಮುಂಬೈ ಇಂಡಿಯನ್ಸ್‌ಗೆ ಮಾತ್ರ ಲಾಭ ನಮಗೆಲ್ಲಾ ಸಂಕಷ್ಟ ಎಂದು ಕಿಡಿಕಾರಿದ ಉಳಿದ ಫ್ರಾಂಚೈಸಿಗಳು

ಮುಂಬರುವ ಮಾರ್ಚ್ ತಿಂಗಳಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕುರಿತು ದಿನದಿಂದ ದಿನಕ್ಕೆ ಪ್ರೇಕ್ಷಕರಲ್ಲಿ ಕುತೂಹಲಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಇದೇ ತಿಂಗಳ ಫೆಬ್ರವರಿ 12 ಹಾಗೂ ಫೆಬ್ರವರಿ 13ರಂದು ಬೆಂಗಳೂರಿನಲ್ಲಿ ನಡೆದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಟೂರ್ನಿಯ ಕುರಿತು ಪ್ರೇಕ್ಷಕರಲ್ಲಿ ಇದ್ದ ಕುತೂಹಲ ಹಾಗೂ ನಿರೀಕ್ಷೆಯನ್ನು ದುಪ್ಪಟ್ಟಾಗುವಂತೆ ಮಾಡಿತು. ಹೌದು, ಮೆಗಾ ಹರಾಜು ಪ್ರಕ್ರಿಯೆ ನಡೆಯುವುದಕ್ಕೂ ಮುನ್ನ ಪ್ರೇಕ್ಷಕರಲ್ಲಿದ್ದ ಕುತೂಹಲ ಆಟಗಾರರು ಬಿಕರಿಯಾದ ನಂತರ ಯಾವ ತಂಡ ಬಲಿಷ್ಠವಾಗಿದೆ, ಯಾವ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಎತ್ತಿ ಹಿಡಿಯಬಹುದು ಎಂಬ ಅಂಶಗಳಿಂದ ದುಪ್ಪಟ್ಟಾಯಿತು.
ಇನ್ನು ಮೆಗಾ ಹರಾಜಿನ ನಂತರ ತಂಡಗಳ ಕುರಿತು ಚರ್ಚೆಗಳು ನಡೆಯುವುದರ ಜತೆಗೆ ಈ ಬಾರಿಯ ಐಪಿಎಲ್ ಟೂರ್ನಿ ಯಾವ ನಗರಗಳಲ್ಲಿ ನಡೆಯಲಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಹೌದು, ಬಿಸಿಸಿಐ ಈ ಹಿಂದೆ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಂಪೂರ್ಣವಾಗಿ ಭಾರತ ನೆಲದಲ್ಲಿಯೇ ನಡೆಯಲಿದ್ದು, ಯಾವ ನಗರಗಳಲ್ಲಿ ಯಾವ ಯಾವ ಪಂದ್ಯಗಳು ಆಯೋಜನೆಯಾಗಿವೆ ಎಂಬುದರ ಕುರಿತಾದ ಚರ್ಚೆಗಳು ಆರಂಭವಾಗಿದ್ದವು. ಇನ್ನು ಬಿಸಿಸಿಐನ ಅಧಿಕಾರಿಯೋರ್ವರು ತಿಳಿಸಿರುವ ಪ್ರಕಾರ ಈ ಬಾರಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಕೂಡ ಒಂದೇ ನಗರದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದ್ದು, ಪ್ಲೇ ಆಫ್ ಸುತ್ತಿನ ಪಂದ್ಯಗಳನ್ನು ಮತ್ತೊಂದು ಕ್ರೀಡಾಂಗಣದಲ್ಲಿ ಆಯೋಜಿಸಲು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ ಎನ್ನಲಾಗಿದೆ.
ಬಿಸಿಸಿಐ ಈ ರೀತಿಯ ನಿರ್ಧಾರ ಕೈಗೊಳ್ಳಲು ಕಾರಣ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿ. ಹೌದು, ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಭಾರತ ನೆಲದಲ್ಲಿ ವಿವಿಧ ಕ್ರೀಡಾಂಗಣಗಳಲ್ಲಿ ಆಯೋಜಿಸಿದ್ದರಿಂದ ಕ್ರೀಡಾಂಗಣದಿಂದ ಕ್ರೀಡಾಂಗಣಕ್ಕೆ ಆಟಗಾರರು ಪ್ರಯಾಣಿಸಬೇಕಾದ ಅಗತ್ಯತೆ ಇತ್ತು. ಹೀಗೆ ನಗರದಿಂದ ನಗರಕ್ಕೆ ಆಟಗಾರರು ಪ್ರಯಾಣ ಮಾಡುತ್ತಿದ್ದ ಕಾರಣ ಬಯೋ ಬಬಲ್ ವ್ಯವಸ್ಥೆಗೆ ಕುತ್ತು ಬಂದು ಕೊರೋನಾವೈರಸ್ ಕೆಲ ಆಟಗಾರರಿಗೆ ತಗುಲಿತ್ತು. ಹೀಗಾಗಿ ಈ ಬಾರಿ ಮುಂಜಾಗ್ರತೆ ವಹಿಸಿರುವ ಐಪಿಎಲ್ ಆಡಳಿತ ಮಂಡಳಿ ಒಂದೇ ನಗರದಲ್ಲಿ ಐಪಿಎಲ್ ಲೀಗ್ ಹಂತದ ಪಂದ್ಯಗಳನ್ನು ಆಯೋಜಿಸಲು ಮುಂದಾಗಿದ್ದು, ಸದ್ಯ ಇದು ಮುಂಬೈ ಇಂಡಿಯನ್ಸ್ ಹೊರತುಪಡಿಸಿ ಉಳಿದ ಫ್ರಾಂಚೈಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ.

ಒಂದೇ ನಗರದಲ್ಲಿ 55 ಪಂದ್ಯ, ಮುಂಬೈ ಇಂಡಿಯನ್ಸ್‌ಗೆ ಅನುಕೂಲ
ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ತಿಳಿಸಿರುವ ಪ್ರಕಾರ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ ಲೀಗ್ ಹಂತದ ಒಟ್ಟು 55 ಪಂದ್ಯಗಳು ಮುಂಬೈ ನಗರದ 3 ಕ್ರೀಡಾಂಗಣಗಳಲ್ಲಿ ಹಾಗೂ 15 ಪಂದ್ಯಗಳನ್ನು ಪುಣೆ ನಗರದ ಎಂಸಿಎ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಕೊರೋನಾವೈರಸ್ ಭೀತಿಯಿಂದ ಆಟಗಾರರು ಹೆಚ್ಚಿಗೆ ಪ್ರಯಾಣ ಮಾಡಬಾರದು ಎಂಬ ನಿಟ್ಟಿನಲ್ಲಿ ಮುಂಬೈ ಹಾಗೂ ಪುಣೆ ನಗರಗಳು ಸಮೀಪವಿರುವ ಕಾರಣ ಈ ರೀತಿಯ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ರೀತಿಯ ಸುದ್ದಿ ಹೊರಬೀಳುತ್ತಿದ್ದಂತೆ ಉಳಿದ 9 ಫ್ರಾಂಚೈಸಿಗಳು ಈ ನಿರ್ಧಾರದ ವಿರುದ್ಧ ಬೇಸರ ಹೊರ ಹಾಕಿವೆ ಎಂದು ವರದಿಯೊಂದು ತಿಳಿಸಿದೆ.

ಮುಂಬೈ ನಗರದಲ್ಲಿ ಎಲ್ಲಾ ಪಂದ್ಯಗಳನ್ನು ನಡೆಸಲಿ, ಆದರೆ ಆ ಒಂದು ಕ್ರೀಡಾಂಗಣದಲ್ಲಿ ಬೇಡ
ಇನ್ನು ವರದಿಯೊಂದು ತಿಳಿಸಿರುವ ಪ್ರಕಾರ ಉಳಿದ ಫ್ರಾಂಚೈಸಿಗಳು ಮುಂಬೈ ನಗರದಲ್ಲಿ ಬೇಕಿದ್ದರೆ ಎಲ್ಲಾ ಪಂದ್ಯಗಳನ್ನು ಆಯೋಜಿಸಲಿ, ಆದರೆ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಪಂದ್ಯಗಳನ್ನು ಆಯೋಜಿಸಬಾರದು ಎಂದು ಬೇಡಿಕೆಯನ್ನು ಇಟ್ಟಿವೆ. ಸದ್ಯ ಬಿಸಿಸಿಐ ತೆಗೆದುಕೊಳ್ಳಲು ಮುಂದಾಗಿರುವ ಈ ನಿರ್ಧಾರದಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ತವರು ನೆಲದ ಅನುಕೂಲ ಸಿಗಲಿದ್ದು ಉಳಿದ ಯಾವುದೇ ತಂಡಗಳಿಗೂ ಕೂಡ ಈ ಅನುಕೂಲ ಸಿಗುವುದಿಲ್ಲ. ಹೀಗಾಗಿಯೇ ಉಳಿದ ಫ್ರಾಂಚೈಸಿಗಳು ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳಬಾರದು ಬೇಕಿದ್ದರೆ ಮುಂಬೈ ನಗರದಲ್ಲಿರುವ ಉಳಿದ ಡಿವೈ ಪಾಟೀಲ್ ಮತ್ತು ಬ್ರಬೌರ್ನ್ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ಆಯೋಜಿಸಲಿ ನಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಬೇಡಿಕೆ ಇಟ್ಟಿವೆ ಎಂದು ವರದಿ ಹೇಳಿದೆ.

ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆಯಾಗಲಿದೆ ಈ ವಿವಾದ
ಇನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ಆಯೋಜಿಸಬಾರದು ಎಂದು ಫ್ರಾಂಚೈಸಿಗಳು ಇಟ್ಟಿರುವ ಬೇಡಿಕೆಯ ಕುರಿತು ಬ್ರಿಜೇಶ್ ಪಟೇಲ್ ನೇತೃತ್ವದ ಐಪಿಎಲ್ ಆಡಳಿತ ಮಂಡಳಿ ವಿಶೇಷ ಸಭೆಯಲ್ಲಿ ಚರ್ಚಿಸಲಿದೆ. ಹೌದು, ಇಂದು ( ಫೆಬ್ರವರಿ 24 ) ಐಪಿಎಲ್ ಆಡಳಿತ ಮಂಡಳಿಯ ವಿಶೇಷ ಸಭೆ ನಡೆಯಲಿದ್ದು, ಈ ವಿವಾದದ ಕುರಿತು ಚರ್ಚಿಸಿ ಮಂಡಳಿ ಯಾವ ರೀತಿಯ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications