ಐಪಿಎಲ್ 2022: ಈ ತಂಡದ ಪಾಲಾಗಲಿದ್ದಾರೆ ಗೌತಮ್ ಗಂಭೀರ್

ಮುಂಬರುವ ಹದಿನೈದನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ಬದಲಾವಣೆಗಳಿಗೆ ಸಾಕ್ಷಿಯಾಗಲಿದ್ದು, ಟೂರ್ನಿ ಮತ್ತಷ್ಟು ದೊಡ್ಡದಾಗಲಿದೆ. ಹೌದು, ಈ ಬಾರಿ ಮುಕ್ತಾಯಗೊಂಡ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ 8 ತಂಡಗಳ ನಡುವೆ ಟ್ರೋಫಿಗಾಗಿ ನಡೆದ ಸೆಣಸಾಟಕ್ಕೆ ಸಾಕ್ಷಿಯಾದ ಅಂತಿಮ ಐಪಿಎಲ್ ಟೂರ್ನಿಯಾಗಿದೆ. ಈ ಮೂಲಕ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳು ನೂತನವಾಗಿ ಸೇರ್ಪಡೆಗೊಳ್ಳುತ್ತಿದ್ದು ಒಟ್ಟು 10 ತಂಡಗಳ ನಡುವೆ ಟ್ರೋಫಿಗಾಗಿ ಸೆಣಸಾಟ ನಡೆಯಲಿದೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗುವ ಮುನ್ನವೇ ಮುಂದಿನ ವರ್ಷದ ಐಪಿಎಲ್ ಟೂರ್ನಿಯಿಂದ 2 ನೂತನ ಫ್ರಾಂಚೈಸಿಗಳು ಸೇರ್ಪಡೆಗೊಳ್ಳಲಿದ್ದು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದೆ ಎಂಬ ವಿಷಯವನ್ನು ಬಿಸಿಸಿಐ ಬಹಿರಂಗಪಡಿಸಿತ್ತು. ನಂತರ ನಡೆದ ಫ್ರಾಂಚೈಸಿಗಳ ಹರಾಜು ಪ್ರಕ್ರಿಯೆಯಲ್ಲಿ ಅಂತಿಮವಾಗಿ ಲಕ್ನೋ ಮತ್ತು ಅಹ್ಮದಾಬಾದ್ ತಂಡಗಳು ಹರಾಜಾಗಿದ್ದು ಸದ್ಯ ತಮ್ಮ ತಂಡಗಳಿಗೆ ಆಟಗಾರರು ಮತ್ತು ಸಿಬ್ಬಂದಿ ವರ್ಗದವರನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಈ ಎರಡೂ ತಂಡಗಳು ನಿರತವಾಗಿವೆ.
ಹೌದು, ಈ ಎರಡೂ ನೂತನ ಫ್ರಾಂಚೈಸಿಗಳು ಮುಂಬರಲಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಮಾತ್ರವಲ್ಲದೇ ತಲಾ 3 ಆಟಗಾರರನ್ನು ಹೊರಗಿನಿಂದ ಖರೀದಿಸಬಹುದಾಗಿದ್ದು, ಈ ಮೂಲಕ ಸದ್ಯ ಅಸ್ತಿತ್ವದಲ್ಲಿರುವ 8 ಐಪಿಎಲ್ ಫ್ರಾಂಚೈಸಿಗಳಿಗಿಂತ ಹೆಚ್ಚು ಅನುಕೂಲಗಳನ್ನು ಪಡೆದುಕೊಂಡಿವೆ. ಹೀಗಾಗಿ ಈ ಎರಡೂ ತಂಡಗಳು ಸದ್ಯ ಯಾವ ಆಟಗಾರರನ್ನು ಖರೀದಿಸಲಿವೆ ಎಂಬ ವರದಿ ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಅದರ ಜತೆಗೆ ಇದೀಗ ಈ ನೂತನ ಐಪಿಎಲ್ ಫ್ರಾಂಚೈಸಿಗಳು ಕೋಚ್ ಮತ್ತು ಮಾರ್ಗದರ್ಶಕರ ಆಯ್ಕೆಯನ್ನೂ ಮಾಡಿರುವುದಾಗಿ ವರದಿ ಬಂದಿದ್ದು ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳ ನಾಯಕನಾಗಿದ್ದ ಗೌತಮ್ ಗಂಭೀರ್ ನೂತನ ಫ್ರಾಂಚೈಸಿಯೊಂದರ ಭಾಗವಾಗುತ್ತಾರೆ ಎನ್ನಲಾಗುತ್ತಿದ್ದು ಅದರ ವಿವರ ಈ ಕೆಳಕಂಡಂತಿದೆ..

ಲಕ್ನೋ ಪಾಲಾಗಲಿದ್ದಾರೆ ಗೌತಮ್ ಗಂಭೀರ್
ಇತ್ತೀಚೆಗಷ್ಟೇ ಹೊರಬಿದ್ದಿರುವ ವರದಿಯೊಂದರ ಪ್ರಕಾರ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಲಕ್ನೋ ತಂಡದ ಪಾಲಾಗಲಿದ್ದಾರೆ ಎನ್ನಲಾಗುತ್ತಿದೆ. ಹೌದು ಗೌತಮ್ ಗಂಭೀರ್ ಅವರನ್ನು ಲಕ್ನೋ ತನ್ನ ತೆಕ್ಕೆಗೆ ಹಾಕಿಕೊಳ್ಳಲಿದ್ದು ಮೆಂಟರ್ ಸ್ನಾನವನ್ನು ನೀಡಲಿದೆ. ಈ ಮೂಲಕ ಈ ಹಿಂದೆ ಆಟಗಾರನಾಗಿ ಪ್ರೇಕ್ಷಕರ ಮನಗೆದ್ದಿದ್ದ ಗೌತಮ್ ಗಂಭೀರ್ ಕ್ರಿಕೆಟ್‍ನಲ್ಲಿ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದು ಮೆಂಟರ್ ಆಗಿ ಮತ್ತೆ ಕ್ರಿಕೆಟ್‍ನತ್ತ ಮುಖ ಮಾಡಲಿದ್ದಾರೆ.

ಲಕ್ನೋ ತಂಡದ ಕೋಚ್, ಮೆಂಟರ್ ಮತ್ತು 3 ಆಟಗಾರರು
ಸದ್ಯ ಗೌತಮ್ ಗಂಭೀರ್ ಅವರು ಲಕ್ನೋ ತಂಡದ ಮೆಂಟರ್ ಆಗಿ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಹೀಗಾಗಿ ಲಕ್ನೋ ಪರ ಮೆಂಟರ್ ಆಗಲಿರುವ ಗೌತಮ್ ಗಂಭೀರ್ ಈಗಾಗಲೇ ಲಕ್ನೋ ತಂಡದ ಕೋಚ್ ಆಗಿ ಆಯ್ಕೆಯಾಗಿರುವ ಆ್ಯಂಡಿ ಫ್ಲವರ್ ಜೊತೆ ಕೆಲಸ ನಿರ್ವಹಿಸಲಿದ್ದಾರೆ. ಇನ್ನು ಲಕ್ನೋ ಫ್ರಾಂಚೈಸಿ ಕೆಎಲ್ ರಾಹುಲ್, ರಶೀದ್ ಖಾನ್ ಮತ್ತು ಇಶಾನ್ ಕಿಶನ್ ಈ ಮೂವರು ಆಟಗಾರರನ್ನು ಖರೀದಿಸಲಿದೆ ಎಂಬ ವರದಿಯು ಕೂಡ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಹಾಗೂ ಲಕ್ನೋ ಫ್ರಾಂಚೈಸಿ ಕೆಎಲ್ ರಾಹುಲ್ ಹೆಗಲಿಗೆ ನಾಯಕತ್ವದ ಜವಾಬ್ದಾರಿಯನ್ನು ಹೊರಿಸಲಿದೆ.

ಅಹ್ಮದಾಬಾದ್ ತಂಡದ ಕಥೆಯೇನು?
ಹೊಸ ಫ್ರಾಂಚೈಸಿಗಳಾಗಿ ಆಯ್ಕೆಯಾಗಿರುವ ಲಕ್ನೋ ಮತ್ತು ಅಹ್ಮದಾಬಾದ್ ಪೈಕಿ ಲಕ್ನೋ ಕೋಚ್, ಮಾರ್ಗದರ್ಶಕ ಮತ್ತು ಆಟಗಾರರ ಆಯ್ಕೆಯನ್ನು ಮುಗಿಸಿದೆ ಎಂದು ವರದಿಯಾಗಿದ್ದು, ಅಹಮದಾಬಾದ್ ಫ್ರಾಂಚೈಸಿ ತನ್ನ ತೆಕ್ಕೆಗೆ ಹಾಕಿಕೊಳ್ಳಲಿರುವ ಆಟಗಾರರ ಪಟ್ಟಿ ಕೂಡ ರಿವೀಲ್ ಆಗಿದೆ. ವರದಿಯ ಪ್ರಕಾರ ಅಹ್ಮದಾಬಾದ್ ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಕ್ವಿಂಟನ್ ಡಿ ಕಾಕ್ / ಡೇವಿಡ್ ವಾರ್ನರ್ ಈ ಮೂವರು ಆಟಗಾರರನ್ನು ಖರೀದಿಸುವುದು ಖಚಿತ ಎನ್ನಲಾಗುತ್ತಿದೆ. ಹಾಗೂ ಅಹಮದಾಬಾದ್ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕನಾಗುವ ಸಾಧ್ಯತೆಗಳು ಹೆಚ್ಚಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications