
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದ ರವಿಶಾಸ್ತ್ರಿ ಯಾವುದೇ ಸಂದರ್ಶನಗಳಲ್ಲಿಯೂ ಕಾಣಿಸಿಕೊಳ್ಳದೇ ತಮ್ಮ ಮುಂದಿನ ನಡೆಯೇನು ಎಂಬುದನ್ನು ತಿಳಿಸದೇ ತಮ್ಮ ಪಾಡಿಗೆ ತಾವು ಇದ್ದರು. ಟೀಮ್ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿದಿರುವ ರವಿಶಾಸ್ತ್ರಿ ಮುಂದಿನ ದಿನಗಳಲ್ಲಿ ಐಪಿಎಲ್ ಟೂರ್ನಿಯ ಯಾವುದಾದರೊಂದು ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ದೊಡ್ಡಮಟ್ಟದಲ್ಲಿಯೇ ಹರಿದಾಡಿತ್ತು.
ಹೌದು, ಮುಂಬರುವ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ನೂತನವಾಗಿ ಸೇರ್ಪಡೆಯಾಗುತ್ತಿರುವ ಅಹಮದಾಬಾದ್ ಫ್ರಾಂಚೈಸಿ ರವಿಶಾಸ್ತ್ರಿ ಅವರನ್ನು ತಮ್ಮ ತಂಡಕ್ಕೆ ಹೆಡ್ ಕೋಚ್ ಆಗಿ ನೇಮಿಸಿಕೊಳ್ಳಲು ಮಾತುಕತೆ ನಡೆಸಿದೆ ಮತ್ತು ಈ ಕುರಿತಾಗಿ ರವಿಶಾಸ್ತ್ರಿ ಅವರು ಕೂಡ ಒಲವನ್ನು ಹೊಂದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಈ ಎಲ್ಲಾ ಸುದ್ದಿಗಳಿಗೂ ಪ್ರತಿಕ್ರಿಯಿಸಿರುವ ರವಿಶಾಸ್ತ್ರಿ ಅವರು ಸದ್ಯಕ್ಕೆ ತಾನು ಯಾವುದೇ ತಂಡಕ್ಕೂ ಕೂಡ ಹೆಡ್ ಕೋಚ್ ಆಗಿ ಕೆಲಸ ನಿರ್ವಹಿಸಲು ಇಚ್ಛಿಸುವುದಿಲ್ಲ ಎಂದು ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
"ನಾನು ಇತ್ತೀಚಿಗಷ್ಟೆ ಬಯೋ ಬಬಲ್ ವ್ಯವಸ್ಥೆಯಿಂದ ಹೊರ ಬಂದಿದ್ದೇನೆ. ಹೀಗಾಗಿ ನನಗೆ ಸದ್ಯ ಸ್ವಚ್ಛಗಾಳಿಯ ಅವಶ್ಯಕತೆಯಿದೆ. ನಾನು ಯಾರೊಬ್ಬರ ಜೊತೆ ಕೂಡಾ ಹೆಡ್ ಕೋಚ್ ಆಗುವ ವಿಷಯದ ಕುರಿತು ಮಾತುಕತೆ ನಡೆಸುತ್ತಿಲ್ಲ. ನಾನು ಯಾವ ತಂಡದ ಜೊತೆ ಕೂಡಾ ಮಾತುಕತೆಯನ್ನು ನಡೆಸುತ್ತಿಲ್ಲ. ಸದ್ಯ ಈಗಿನ ಹಂತದಲ್ಲಿ ನಾನು ವಿಶ್ರಾಂತಿ ತೆಗೆದುಕೊಳ್ಳಲು ಇಚ್ಛಿಸುತ್ತೇನೆ. ಆದರೆ ಮುಂದಿನ ದಿನಗಳಲ್ಲಿ ನಾನು ಅತಿಯಾಗಿ ಪ್ರೀತಿಸುವ ದೂರದರ್ಶನ ಮತ್ತು ಮಾಧ್ಯಮ ಪ್ರಪಂಚಕ್ಕೆ ಮರಳಿ ಬರಲಿದ್ದೇನೆ" ಎಂದು ರವಿ ಶಾಸ್ತ್ರಿ ಹೇಳಿದರು. ಈ ರೀತಿಯ ಹೇಳಿಕೆಯನ್ನು ನೀಡುವುದರ ಮೂಲಕ ರವಿ ಶಾಸ್ತ್ರಿ ತಾನು ಯಾವುದೇ ತಂಡಕ್ಕೂ ಕೂಡ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲು ಇಚ್ಛಿಸುವುದಿಲ್ಲ ಬದಲಾಗಿ ಈ ಹಿಂದಿನಂತೆ ಕಾಮೆಂಟೇಟರ್ ಆಗಿ ಕೆಲಸ ನಿರ್ವಹಿಸುವತ್ತ ಆಸಕ್ತಿ ಹೊಂದಿದ್ದೇನೆ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
ಸದ್ಯ ರವಿಶಾಸ್ತ್ರಿ ಅಹಮದಾಬಾದ್ ಫ್ರಾಂಚೈಸಿಯ ಕೋಚ್ ಆಗುವುದಿಲ್ಲ ಎಂಬ ವಿಷಯ ಹೊರಬೀಳುತ್ತಿದ್ದಂತೆಯೇ ಬೇರೆ ಯಾರು ಅಹಮದಾಬಾದ್ ತಂಡಕ್ಕೆ ಕೋಚ್ ಆಗಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಈ ಕುರಿತಾಗಿ ಹೊರಬಿದ್ದಿರುವ ಮಾಹಿತಿ ಪ್ರಕಾರ ಅಹಮದಾಬಾದ್ ಫ್ರಾಂಚೈಸಿ ಈ ಹಿಂದೆ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿದ್ದ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಗ್ಯಾರಿ ಕ್ರಿಸ್ಟನ್ ಅವರನ್ನು ಅಹಮದಾಬಾದ್ ಹೆಡ್ ಕೋಚ್ ಆಗಿ ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ. ಒಂದುವೇಳೆ ಗ್ಯಾರಿ ಕ್ರಿಸ್ಟನ್ ಅಹ್ಮದಾಬಾದ್ ತೆಕ್ಕೆಗೆ ಬೀಳದಿದ್ದರೆ ಭಾರತದ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಅಹಮದಾಬಾದ್ ಫ್ರಾಂಚೈಸಿಯ ಹೆಡ್ ಕೋಚ್ ಆಗುವ ಸಾಧ್ಯತೆಗಳು ಕೂಡ ಇವೆ.
ಅಹ್ಮದಾಬಾದ್ ಫ್ರಾಂಚೈಸಿ ಪಾಲಾಗಲಿರುವ ಆಟಗಾರರು
ಇನ್ನು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಸೇರ್ಪಡೆಯಾಗಲಿರುವ ಮತ್ತೊಂದು ಹೊಸ ಫ್ರಾಂಚೈಸಿಯಾದ ಅಹ್ಮದಾಬಾದ್ ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಈ ಇಬ್ಬರು ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದ್ದು ಮೂರನೇ ಆಟಗಾರನನ್ನಾಗಿ ಕ್ವಿಂಟನ್ ಡಿಕಾಕ್ ಅಥವಾ ಡೇವಿಡ್ ವಾರ್ನರ್ ಇಬ್ಬರಲ್ಲಿ ಒಬ್ಬರನ್ನು ಖರೀದಿಸುವ ಸಾಧ್ಯತೆ ಇದೆ. ಅಹಮದಾಬಾದ್ ಫ್ರಾಂಚೈಸಿ ಶ್ರೇಯಸ್ ಅಯ್ಯರ್ ಹೆಗಲಿಗೆ ನಾಯಕನ ಜವಾಬ್ದಾರಿಯನ್ನು ಹೊರಿಸುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಆಶಿಶ್ ನೆಹ್ರಾ ಹೆಡ್ ಕೋಚ್ ಆಗಿ ಆಯ್ಕೆಯಾದರೆ ಶ್ರೇಯಸ್ ಐಯ್ಯರ್ ಮತ್ತು ಆಶಿಶ್ ನೆಹ್ರಾ ಜೋಡಿ ಅಹಮದಾಬಾದ್ ತಂಡವನ್ನು ಮುನ್ನಡೆಸಲಿದೆ.