
ಈ ಬಾರಿಯ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನೀಡುತ್ತಿರುವ ಪ್ರದರ್ಶನ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸಂತಸ ತಂದಿದೆ. ನಾಯಕನಾಗಿ ಜವಾಬ್ಧಾರಿ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಜೊತೆಗೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದಿಂದಲೂ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಬ್ಯಾಟಿಂಗ್‌ನಲ್ಲಿ ಅಗ್ರ ಕ್ರಮಾಂಕಕ್ಕೆ ಭಡ್ತಿ ಪಡೆದುಕೊಂಡು ಕಣಕ್ಕಿಳಿಯುತ್ತಿರುವ ಹಾರ್ದಿಕ್ ಅಮೋಘ ಆಟ ತಂಡದ ಪ್ರದರ್ಶನದ ಮೇಲೆ ನೇರ ಪರಿಣಾಮ ಬೀರುತ್ತಿದೆ. ತಂಡದ ಯಶಸ್ಸಿನಲ್ಲಿಯೂ ಇದು ಮಹತ್ತರ ಪಾತ್ರವಹಿಸುತ್ತಿದೆ.
ಹಾರ್ದಿಕ್ ಪಾಂಡ್ಯ ಅವರ ಈ ಪ್ರದರ್ಶನದಿಂದ ಕೇವಲ ಅಭಿಮಾನಿಗಳು ಮಾತ್ರವಲ್ಲ ಭಾರತೀಯ ಕ್ರಿಕೆಟ್ ತಂಡದ ಆಯ್ಕೆಗಾರರು ಕೂಡ ಹರ್ಷಗೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ 87 ರನ್‌ಗಳಿಸಿ ಅಜೇಯವಾಗುಳಿದಿದ್ದರು. ಈ ಪಂದ್ಯದ ನಂತರ ಇನ್‌ಸೈಡ್‌ಸ್ಪೋರ್ಟ್ ಟೀಮ್ ಇಂಡಿಯಾ ಆಯ್ಕೆ ಮಂಡಳಿಯ ಸದಸ್ಯರ ಅಭಿಪ್ರಾಯ ಪಡೆದು ವರದಿ ಮಾಡಿದೆ.
"ಹಾರ್ದಿಕ್ ಪಾಂಡ್ಯ ಪ್ರದರ್ಶನ ನಮ್ಮೆಲ್ಲರ ಮನಗೆದ್ದಿದೆ. ಅವರು ಇದೇ ಪ್ರದರ್ಶನವನ್ನು ಈ ಬಾರಿಯ ಟೂರ್ನಿಯಲ್ಲಿ ಮುಂದುವರಿಸುತ್ತಾ ತಮ್ಮ ಫಿಟ್‌ನೆಸ್ ಬಗ್ಗೆ ಗಮನ ನೀಡಿದರೆ ಅವರು ಖಂಡಿತವಾಗಿಯೂ ಭಾರತೀಯ ಕ್ರಿಕೆಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಲಿದ್ದಾರೆ" ಎಂದು ಹೆಸರು ಹೇಳಲು ಇಚ್ಚಿಸದ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಪಾಂಡ್ಯ ಆಯ್ಕೆ?: ಈ ಬಾರಿಯ ಐಪಿಎಲ್ ಟೂರ್ನಿಯ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಗೆ ಹಾರ್ದಿಕ್ ಪಾಂಡ್ಯ ಆಯ್ಕೆಯಾಗುವ ಸಾಧ್ಯತೆಯಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ವಿಚಾರ ಸಾಕಷ್ಟು ಚರ್ಚೆಗೆ ಬಂದ ಬಳಿಕ ವಿಶ್ವಕಪ್ ನಂತರದ ಸರಣಿಗಳಿಂದ ಹಾರ್ದಿಕ್ ಪಾಂಡ್ಯ ಅವರನ್ನು ಹೊರಗಿಡಲಾಗಿತ್ತು. ಫಿಟ್‌ನೆಸ್ ಸಂಪೂರ್ಣವಾಗಿ ಗಳಿಸಿದ ನಂತರ ತಂಡಕ್ಕೆ ಸೇರ್ಪಡೆಗೊಳಿಸುವ ಸೂಚನೆ ನೀಡಲಾಗಿತ್ತು.
ಯಾವಾಗ ನಡೆಯಲಿದೆ ಆಯ್ಕೆ ಪ್ರಕ್ರಿಯೆ: ದಕ್ಷಿಣ ಆಪ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾದ ಆಯ್ಕೆ ಯಾವಾಗ ನಡೆಯಲಿದೆ ಎಂಬ ಕುತೂಹಲವಿದೆ. ಈ ಬಗ್ಗೆ ಆಯ್ಕೆ ಸಮಿತಿಯ ಸದಸ್ಯರಿಗೆ ಪ್ರಶ್ನೆ ಕೇಳಲಾಯಿತು. ಆದರೆ ಈ ಹಂತದಲ್ಲಿ ಈ ವಿಚಾರವಾಗಿ ತನಗೆ ಮಾಹಿತಿಯಿಲ್ಲ ಹಾಗೂ ಆಯ್ಕೆ ವಿಚಾರವಾಗಿ ಹೆಚ್ಚು ಹೇಳುವಂತಿಲ್ಲ. ಎಂದಿನಂತೆಯೇ ನಾವು ಐಪಿಎಲ್‌ನಲ್ಲಿನ ಪ್ರದರ್ಶನದ ಮೇಲೆ ಗಮನಹರಿಸಿದ್ದೇವೆ. ಕೆಲ ಯುವ ಆಟಗಾರರ ಪ್ರದರ್ಶನ ಅಮೋಘವಾಗಿದೆ" ಎಂದಿದ್ದಾರೆ.
ಹಾರ್ದಿಕ್ ಆಯ್ಕೆಗಾರರ ಮನಗೆಲ್ಲಲು ಕಾರಣ: ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದ ನಾಯಕತ್ವದ ಹೊಣೆಗಾರಿಕೆ ಹಾರ್ದಿಕ್ ಮೇಲಿದೆ. ಯಶಸ್ವಿಯಾಗಿ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಪಡೆ ಐದು ಪಂದ್ಯಗಳ ಮುಕ್ತಾಯದ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಾಯಕತ್ವದ ಒತ್ತಡದಲ್ಲಿಯೂ ಹಾರ್ದಿಕ್ ಪ್ರದರ್ಶನ ಆಯ್ಕೆಗಾರರಿಂದ ಮೆಚ್ಚುಗೆ ಪಡೆದಿದೆ.
ಅದ್ಭುತ ಬ್ಯಾಟಿಂಗ್ ಪ್ರದರ್ಶನ: ಆಗಾಗ ಗಾಯದ ಸಮಸ್ಯೆಗೆ ಒಳಗಾಗುತ್ತಿರುವ ಹಾರ್ದಿಕ್ ಪಾಂಡ್ಯ ಈ ಬಾರಿಯ ಟೂರ್ನಿಯಲ್ಲಿ ಅದ್ಭುತವಾದ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಟರ್ ಆಗಿ ಐದು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಹಾರ್ದಿಕ್ ಪಾಂಡ್ಯ ಎರಡು ಅರ್ಧ ಶತಕ ಸಿಡಿಸಿದ್ದಾರೆ. 75ರ ಸರಾಸರಿಯ್ಲಲಿ ಹಾರ್ದಿಕ್ ಪಾಂಡ್ಯ 228 ರನ್‌ಗಳಿಸಿರುವುದು ಅವರ ಫಾರ್ಮ್‌ಗೆ ಸಾಕ್ಷಿಯಾಗಿದೆ.
ಇನ್ನು ಬ್ಯಾಟಿಂಗ್ ಮಾತ್ರವಲ್ಲದೆ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿಯೂ ಸಮರ್ಥವಾಗಿರುವುದು ಸ್ಪಷ್ಟವಾಗಿದೆ. ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಸಾಮರ್ಥ್ಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳೂ ಈಗ ಅಪ್ರಸ್ತುತವೆನಿಸಿದೆ. 18.2 ಓವರ್‌ಗಳ ಬೌಲಿಂಗ್ ಮಾಡಿರುವ ಹಾರ್ದಿಕ್ 4 ವಿಕೆಟ್ ಪಡೆದಿದ್ದಾರೆ. 7.5ಕ್ಕೂ ಕಡಿಮೆ ಎಕಾನಮಿಯಲ್ಲಿ ಬೌಲಿಂಗ್ ನಡೆಸಿರುವುದು ಗಮನಾರ್ಹ. ಅಲ್ಲದೆ ಬೌಲಿಂಗ್‌ನಲ್ಲಿ ಹಾರ್ದಿಕ್ ಹಿಂದಿನ ವೇಗವನ್ನು ಪಡೆದುಕೊಂಡಿರುವುದು ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.