
ಐಪಿಎಲ್ 2022 ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದು ತೀವ್ರ ಪೈಪೋಟಿಯ ಕದನ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ತಂಡ ದೊಡ್ಡ ಮೊತ್ತವನ್ನು ಗಳಿಸಲು ವಿಫಲವಾಗಿದೆ. ಟೂರ್ನಿಯುದ್ದಕ್ಕೂ ಅಬ್ಬರದ ಪ್ರದರ್ಶನ ನೀಡಿರುವ ಜೋಸ್ ಬಟ್ಲರ್ ಈ ಪಂದ್ಯದಲ್ಲಿಯೂ ತಂಡದ ಪರವಾಗಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿದ್ದಾರೆ. ಆದರೆ ಜೋಸ್ ಬಟ್ಲರ್ ಅವರಿಂದ ಸಿಡಿದದ್ದು 35 ಎಸೆತಗಳಲ್ಲಿ 39 ರನ್ ಎಂಬುದು ಗಮನಾರ್ಹ.
ಹಾಗಿದ್ದರೂ ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಪ್ರಮುಖ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್‌ನ ಇತಿಹಾಸದಲ್ಲಿ ಪ್ಲೇಆಫ್‌ನಲ್ಲಿ 200 ರನ್‌ಗಳಿಸಿದ ಮೊದಲ ಆಟಗಾರ ಎನಿಸಿದ್ದಾರೆ ಜೋಸ್ ಬಟ್ಲರ್. ಈ ಮೂಲಕ ಟೂರ್ನಿಯಲ್ಲಿ ದಾಖಲೆ ಮೇಲೆ ದಾಖಲೆ ಬರೆದಿರುವ ಬಟ್ಲರ್ ಈ ವಿಶೇಷ ಸಾಧನೆಯನ್ನು ಕೂಡ ಮಾಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಮತ್ತೊಂದು ದೊಡ್ಡ ದಾಖಲೆ ಮೈಲಿಗಲ್ಲು ಸಾಧಿಸಿದ್ದಾರೆ. ಐಪಿಎಲ್‌ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಡೇವಿಡ್ ವಾರ್ನರ್ ಅವರನ್ನು ಬಟ್ಲರ್ ಹಿಂದಿಕ್ಕಿದ್ದಾರೆ. 2016ರ ಐಪಿಎಲ್ ಆವೃತ್ತಿಯಲ್ಲಿ ವಾರ್ನರ್ 848 ರನ್‌ಗಳಿಸಿದ್ದರು. ಇದನ್ನು ಹಿಂದಿಕ್ಕಿರುವ ಜೋಸ್ ಬಟ್ಲರ್ 863 ರನ್‌ಗಳನ್ನು ಈ ಆವೃತ್ತಿಯಲ್ಲಿ ಗಳಿಸಿದ್ದಾರೆ. ಈ ಮೂಲಕ ಐಪಿಎಲ್‌ನ ಅವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್‌ಗಳಿಸಿದ್ದ ಬ್ಯಾಟರ್‌ಗಳ ಪಟ್ಟಿಯಲ್ಲಿ ಬಟ್ಲರ್ 2ನೇ ಸ್ಥಾನಕ್ಕೇರಿದ್ದಾರೆ.
ಇನ್ನು ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಬೌಲರ್‌ಗಳು ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಾಸ್ ಸೋತು ಮೊದಲಿಗೆ ಬೌಲಿಂಗ್ ನಡೆಸಿದ ಗುಜರಾತ್ ಟೈಟನ್ಸ್ ತಂಡ ಆರ್‌ಆರ್ ದಾಂಡಿಗರ ಮೇಲೆ ಸವಾರಿ ಮಾಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪ್ರಮುಖ ದಾಂಡಿಗರೆಲ್ಲರೂ ಕನಿಷ್ಠ ಮೊತ್ತಕ್ಕೆ ವಿಕೆಟ್ ಕಳೆದುಕೊಂಡಿದ್ದಾರೆ. ಜೋಸ್ ಬಟ್ಲರ್ 39 ರನ್‌ಗಳಿಸಿದರೆ ಯಶಸ್ವಿ ಜೈಸ್ವಾಲ್ 22 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಉಳಿದಂತೆ ನಾಯಕ ಸಂಜು ಸ್ಯಾಮ್ಸನ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೇಟ್ಮೇಯರ್ ಈ ಪಂದ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ ತಂಡ 130/9 ರನ್‌ಗಳಿಸಿ ಸುಲಭ ಸವಾಲು ಗುಜರಾತ್ ಟೈಟನ್ಸ್ ಮುಂದಿಟ್ಟಿದೆ.
ಇತ್ತಂಡಗಳ ಆಡುವ ಬಳಗ:
ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿ ಶ್ರೀನಿವಾಸನ್ ಸಾಯಿ ಕಿಶೋರ್, ಲಾಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಶಮಿ
ಬೆಂಚ್: ಪ್ರದೀಪ್ ಸಾಂಗ್ವಾನ್, ವರುಣ್ ಆರೋನ್, ಜಯಂತ್ ಯಾದವ್, ವಿಜಯ್ ಶಂಕರ್, ಗುರುಕೀರತ್ ಸಿಂಗ್ ಮಾನ್, ಅಭಿನವ್ ಮನೋಹರ್, ದರ್ಶನ್ ನಲ್ಕಂಡೆ, ರಹಮಾನುಲ್ಲಾ ಗುರ್ಬಾಜ್, ಡೊಮಿನಿಕ್ ಡ್ರೇಕ್ಸ್, ಸಾಯಿ ಸುದರ್ಶನ್, ನೂರ್ ಅಹ್ಮದ್, ಅಲ್ಜಾರಿ ಜೋಸೆಫ್
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್/ ನಾಯಕ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಓಬೇದ್ ಮೆಕಾಯ್, ಯುಜ್ವೇಂದ್ರ ಚಾಹಲ್
ಬೆಂಚ್: ಕರುಣ್ ನಾಯರ್, ಜೇಮ್ಸ್ ನೀಶಮ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕಾರ್ಬಿನ್ ಬಾಷ್, ನವದೀಪ್ ಸೈನಿ, ಕೆಸಿ ಕಾರಿಯಪ್ಪ, ಡೇರಿಲ್ ಮಿಚೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಅನುನಯ್ ಸಿಂಗ್, ಕುಲದೀಪ್ ಸೇನ್, ಧ್ರುವ್ ಜುರೆಲ್, ಶುಭಂ ಗರ್ವಾಲ್