ಕೆಎಲ್ ರಾಹುಲ್‌ಗೆ ಇರುವ ದೊಡ್ಡ ಒತ್ತಡ ದುಡ್ಡಿನದ್ದಲ್ಲ, ಆ ಜನರದ್ದು ಎಂದ ಗೌತಮ್ ಗಂಭೀರ್

ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದ್ದು, ಹಲವಾರು ಕಾರಣಗಳಿಂದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ವಿಶೇಷವಾಗಿರಲಿದೆ. ಹೌದು, ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಗಾಗಿ ಒಟ್ಟು ಹತ್ತು ತಂಡಗಳ ನಡುವೆ ಸೆಣಸಾಟ ನಡೆಯಲಿದ್ದು ಅಹ್ಮದಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ನೂತನ ತಂಡಗಳಾಗಿ ಸೇರ್ಪಡೆಗೊಂಡಿವೆ.
ಹೀಗೆ ಈ 2 ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗಿರುವುದರಿಂದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು ಇದಕ್ಕೂ ಮುನ್ನ ಆಟಗಾರರ ರಿಟೆನ್ಷನ್ ಪ್ರಕ್ರಿಯೆಯನ್ನು ಬಿಸಿಸಿಐ ನಡೆಸಿತು. ಹೀಗೆ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರಿಟೈನ್ ಮಾಡಿಕೊಂಡು ಉಳಿದ ಆಟಗಾರರನ್ನು ತಂಡದಿಂದ ಕೈಬಿಟ್ಟಿವೆ. ಹೀಗೆ ರಿಟೈನ್ ಆಗದೆ ಹೊರಬಿದ್ದ ಹಲವಾರು ಆಟಗಾರರ ಪೈಕಿ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಬಲ್ಲಂತಹ ಸಾಮರ್ಥ್ಯವಿರುವ ಆಟಗಾರರು ಕೂಡ ಇದ್ದರು. ಅದರಲ್ಲಿ ಪ್ರಮುಖವಾಗಿ ಕನ್ನಡಿಗ ಕೆಎಲ್ ರಾಹುಲ್ ಕೂಡ ಓರ್ವರು. ಕಳೆದೆರಡು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲು ಒಪ್ಪದೇ ತಂಡದಿಂದ ಹೊರಬಿದ್ದಿದ್ದರು. ಹೀಗೆ ತಂಡದಿಂದ ಹೊರಬಿದ್ದ ಕೆಎಲ್ ರಾಹುಲ್ ಅವರನ್ನು ವಿವಿಧ ಫ್ರಾಂಚೈಸಿಗಳು ಮೆಗಾ ಹರಾಜಿನಲ್ಲಿ ಖರೀದಿಸಲು ಯತ್ನಿಸಲಿದ್ದು ಅತಿ ದೊಡ್ಡ ಮಟ್ಟದ ಹರಾಜು ಇದಾಗಲಿದೆ ಎಂಬ ಅಭಿಪ್ರಾಯಗಳಿದ್ದವು.
ಆದರೆ ನೂತನ ಫ್ರಾಂಚೈಸಿಗಳಾದ ಆಗಿ ಆಯ್ಕೆಯಾಗಿರುವ ಲಕ್ನೋ ಮತ್ತು ಅಹ್ಮದಾಬಾದ್ ಫ್ರಾಂಚೈಸಿಗಳಿಗೆ ಮೆಗಾ ಹರಾಜು ಹೊರತುಪಡಿಸಿ ಹೊರಗಡೆಯಿಂದ ಕೂಡ ಮೂವರು ಆಟಗಾರರನ್ನು ಖರೀದಿಸಬಹುದಾದ ಆಯ್ಕೆ ಇದ್ದುದರಿಂದ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಕೆ ಎಲ್ ರಾಹುಲ್ ಅವರನ್ನು ಮೆಗಾ ಹರಾಜಿಗೂ ಮುನ್ನವೇ 17 ಕೋಟಿ ರೂಪಾಯಿಗಳಿಗೆ ತನ್ನ ತೆಕ್ಕೆಗೆ ಹಾಕಿಕೊಂಡು ನಾಯಕತ್ವದ ಜವಾಬ್ದಾರಿಯನ್ನು ನೀಡಿದೆ. ಹೀಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿರುವ ಕೆಎಲ್ ರಾಹುಲ್ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಇತ್ತೀಚಿಗಷ್ಟೆ ನಾಯಕನಾಗಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಕೆಎಲ್ ರಾಹುಲ್ ವಿಫಲರಾಗಿರುವುದರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಈ ಕುರಿತು ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮೆಂಟರ್ ಆಗಿ ಆಯ್ಕೆಯಾಗಿರುವ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮಾತನಾಡಿದ್ದು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಕೆಎಲ್ ರಾಹುಲ್‌ಗೆ ಅತಿ ದೊಡ್ಡ ಮೊತ್ತ ನೀಡಿದ್ದಾರೆ ಎಂಬ ಒತ್ತಡವಿಲ್ಲ
ಇನ್ನು 17 ಕೋಟಿ ರೂಪಾಯಿಗಳ ದಾಖಲೆಯ ಮೊತ್ತಕ್ಕೆ ಲಕ್ನೋ ಫ್ರಾಂಚೈಸಿ ಪಾಲಾಗಿರುವ ಕೆಎಲ್ ರಾಹುಲ್ ಇಷ್ಟು ದೊಡ್ಡ ಮೊತ್ತವನ್ನು ಪಡೆದಿದ್ದು ಯಾವ ರೀತಿಯ ಪ್ರದರ್ಶನವನ್ನು ನೀಡಲಿದ್ದಾರೆ ನೋಡೋಣ, ಇಷ್ಟು ದೊಡ್ಡ ಮೊತ್ತ ಪಡೆದಿರುವುದರಿಂದ ಕೆಎಲ್ ರಾಹುಲ್ ಒತ್ತಡಕ್ಕೆ ಒಳಗಾಗಲಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಗೌತಮ್ ಗಂಭೀರ್ ಕೆಎಲ್ ರಾಹುಲ್ ತನಗೆ ದೊಡ್ಡ ಮೊತ್ತ ನೀಡಿದ್ದಾರೆ ಎಂಬ ಕಾರಣಕ್ಕೆ ಒತ್ತಡಕ್ಕೊಳಗಾಗುವುದಿಲ್ಲ ಆದರೆ, ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಹೊರೆಯೇ ಆತನನ್ನು ಒತ್ತಡಕ್ಕೆ ಸಿಲುಕಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ.

ತಂಡದ ಸಿಬ್ಬಂದಿ ವರ್ಗ ಆತನ ಮೇಲೆ ಹೊರೆ ಹಾಕಬಾರದು
ಇನ್ನೂ ಮುಂದುವರೆದು ಮಾತನಾಡಿರುವ ಗೌತಮ್ ಗಂಭೀರ್ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರನಾಗಿದ್ದು ಆತನಿಗೆ ಉತ್ತಮ ಪ್ರದರ್ಶನ ನೀಡಲೇಬೇಕು ಎಂದು ಫ್ರಾಂಚೈಸಿಯ ಸಿಬ್ಬಂದಿ ವರ್ಗದವರು ಹೆಚ್ಚಿನ ಹೊರೆ ಹೇರಬಾರದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಆಟಗಾರನ ಮೇಲೆ ನಿರಂತರವಾಗಿ ಈ ರೀತಿಯ ಹೊರೆಗಳನ್ನು ಹಾಕಿದರೆ ಆತ ಒತ್ತಡದೊಂದಿಗೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲನಾಗುತ್ತಾನೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ತಂಡಕ್ಕೆ ನಿಷ್ಠಾವಂತ ಆಟಗಾರರು ಬೇಕು
ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಯಾವ ರೀತಿಯ ಆಟಗಾರರ ಅವಶ್ಯಕತೆ ಇದೆ ಎಂಬುದರ ಕುರಿತು ಮಾತನಾಡಿರುವ ಗೌತಮ್ ಗಂಭೀರ್ ನಮಗೆ ಪ್ರಾಮಾಣಿಕರಾಗಿರುವ, ಫ್ರಾಂಚೈಸಿಗಾಗಿ ಆಡಲು ಬಯಸುವ ಮತ್ತು ಆ ಎರಡು ತಿಂಗಳಲ್ಲಿ ಭಾರತಕ್ಕಾಗಿ ಆಡುವ ಬಗ್ಗೆ ಯೋಚಿಸದ ಆಟಗಾರರು ಬೇಕು ಎಂದು ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications