IPL 2022: ಟೂರ್ನಿಯ ಮೂರನೇ ವಾರದಲ್ಲಿ ಉತ್ತಮ ಪ್ರದರ್ಶನ ನೀಡಲಾಗದೇ ಫ್ಲಾಪ್ ಆದ 11 ಆಟಗಾರರಿವರು!

ಜಗತ್ತಿನ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್ ಎಂಬ ಬೃಹತ್ ಹೆಸರನ್ನು ಹೊಂದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿ ನಡೆಯುತ್ತಿದ್ದು, ಟೂರ್ನಿಯ ಮೂರನೇ ವಾರ ಮುಕ್ತಾಯವಾಗಿದೆ.
ಈ ಮೂರನೇ ವಾರದಲ್ಲಿ ಟೂರ್ನಿಯಲ್ಲಿ ಈ ಹಿಂದೆ ನೆಲಕಚ್ಚಿದ್ದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ರುಚಿ ಕಂಡಿದ್ದರೆ, ಮುಂಬೈ ಇಂಡಿಯನ್ಸ್ ಮಾತ್ರ ತನ್ನ ಸೋಲಿನ ಸರಪಳಿಯನ್ನು ಮುಂದುವರೆಸಿದೆ. ಅತ್ತ ಟೂರ್ನಿಯ ಆರಂಭದಲ್ಲಿ ಸಾಲು ಸಾಲು ಗೆಲುವು ಕಂಡು ಅಬ್ಬರಿಸಿದ್ದ ಗುಜರಾತ್ ಟೈಟನ್ಸ್ ಮೂರನೇ ವಾರದಲ್ಲಿಯೂ ಕೂಡ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ.
ಹೀಗೆ ಮೂರನೇ ವಾರ ಕೆಲ ತಂಡಗಳಿಗೆ ಸಿಹಿ ನೀಡಿದ್ದರೆ, ಇನ್ನೂ ಕೆಲ ತಂಡಗಳಿಗೆ ಕಹಿ ಅನುಭವವನ್ನು ನೀಡಿದೆ. ಇನ್ನು ಮೂರನೇ ವಾರದಲ್ಲಿ ಆಟಗಾರರ ವೈಯಕ್ತಿಕ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ, ಹಲವು ಆಟಗಾರರು ಉತ್ತಮ ಪ್ರದರ್ಶನ ನೀಡಲಾಗದೇ ನೆಲಕಚ್ಚಿದ್ದಾರೆ. ಹೀಗೆ ಮೂರನೇ ವಾರದಲ್ಲಿ ಫ್ಲಾಪ್ ಆಗಿರುವ ಆಯ್ದ 11 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

1. ರುತುರಾಜ್ ಗಾಯಕ್ವಾಡ್
ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಅಬ್ಬರಿಸಿ ಆರೆಂಜ್ ಕ್ಯಾಪ್ ವಿಜೇತರಾಗಿ ಹೊರಹೊಮ್ಮಿದ ಕಾರಣಕ್ಕಾಗಿ ತಂಡದಲ್ಲಿಯೇ ರಿಟೈನ್ ಆಗಿರುವ ರುತುರಾಜ್ ಗಾಯಕ್ವಾಡ್ ಈ ಬಾರಿಯ ಟೂರ್ನಿಯಲ್ಲಿ ಸಪ್ಪೆಯಾಗಿದ್ದಾರೆ. ಟೂರ್ನಿಯ ಆರಂಭದಿಂದಲೂ ಕಳಪೆ ಪ್ರದರ್ಶನ ನೀಡುತ್ತಿರುವ ರುತುರಾಜ್ ಗಾಯಕ್ವಾಡ್ ಟೂರ್ನಿಯ ಮೂರನೇ ವಾರದಲ್ಲಿಯೂ ಕೂಡ ತಮ್ಮ ಫ್ಲಾಪ್ ಶೋ ಮುಂದುವರೆಸಿದ್ದಾರೆ. ಮೂರನೇ ವಾರದಲ್ಲಿ ಆಡಿದ 2 ಪಂದ್ಯಗಳ ಪೈಕಿ ಕೇವಲ 33 ರನ್ ಕಲೆಹಾಕುವಲ್ಲಿ ಮಾತ್ರ ರುತುರಾಜ್ ಗಾಯಕ್ವಾಡ್ ಯಶಸ್ವಿಯಾಗಿದ್ದಾರೆ.

2. ಫಾಫ್ ಡು ಪ್ಲೆಸಿಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕನಾಗಿರುವ ಫಾಫ್ ಡು ಪ್ಲೆಸಿಸ್ ಟೂರ್ನಿಯ ಆರಂಭದಲ್ಲಿ ಅರ್ಧಶತಕ ಬಾರಿಸುವ ಮೂಲಕ ಮಿಂಚಿದ್ದರು. ಆದರೆ ಮೂರನೇ ವಾರದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 24 ಎಸೆತಗಳಲ್ಲಿ 16 ರನ್ ಕಲೆಹಾಕಿದ ಫಾಫ್ ಡು ಪ್ಲೆಸಿಸ್ ನಂತರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 8 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಹೀಗೆ ಕಳೆದ ವಾರದ 2 ಪಂದ್ಯಗಳಲ್ಲಿ ಕೇವಲ 24 ರನ್ ಗಳಿಸಿರುವ ಫಾಫ್ ಡು ಪ್ಲೆಸಿಸ್ ಫ್ಲಾಪ್ ಆಗಿದ್ದಾರೆ.

3. ಮ್ಯಾಥ್ಯೂ ವೇಡ್
ಗುಜರಾತ್ ಟೈಟನ್ಸ್ ತಂಡವೇನೋ ಮೂರನೇ ವಾರದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ ತಂಡದ ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ ಮಾತ್ರ ಈ ವಾರದಲ್ಲಿ ಉತ್ತಮ ಪ್ರದರ್ಶನ ನೀಡಲಾಗಿದೇ ಫ್ಲಾಪ್ ಆಗಿದ್ದಾರೆ. ಮೂರನೇ ವಾರದಲ್ಲಿ 2 ಪಂದ್ಯಗಳನ್ನಾಡಿದ ಮ್ಯಾಥ್ಯೂ ವೇಡ್ 31 ರನ್‌ಗಳನ್ನು ಮಾತ್ರ ಕಲೆ ಹಾಕಿದ್ದಾರೆ.

4. ಸಂಜು ಸ್ಯಾಮ್ಸನ್
ಕಳೆದ 3 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವುದು ರಾಜಸ್ಥಾನ್ ರಾಯಲ್ಸ್ ತಂಡದ ಮೇಲೆ ಪರಿಣಾಮವನ್ನು ಬೀರಿದೆ. ಇನ್ನು ಟೂರ್ನಿಯ ಮೂರನೇ ವಾರದಲ್ಲಿ 2 ಪಂದ್ಯಗಳನ್ನಾಡಿರುವ ಸಂಜು ಸ್ಯಾಮ್ಸನ್ 24 ರನ್‌ಗಳನ್ನು ಮಾತ್ರ ಗಳಿಸಿದ್ದು ಫ್ಲಾಪ್ ಆಗಿದ್ದಾರೆ.

5. ರಸ್ಸಿ ವಾನ್‌ಡರ್ ಡುಸೆನ್
ಈ ಬಾರಿಯ ಟೂರ್ನಿಯ ಮೂರನೇ ವಾರದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ 2 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ರಸ್ಸಿ ವಾನ್‌ಡರ್ ಡುಸೆನ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 8 ರನ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧ 6 ರನ್ ಗಳಿಸಿ ಫ್ಲಾಪ್ ಶೋ ನೀಡಿದ್ದಾರೆ.

6. ಕೀರನ್ ಪೊಲಾರ್ಡ್
ಮುಂಬೈ ಇಂಡಿಯನ್ಸ್ ತಂಡದ ಸ್ಪೋಟಕ ಆಟಗಾರ ಎನಿಸಿಕೊಂಡಿರುವ ಕೀರನ್ ಪೊಲಾರ್ಡ್ ಟೂರ್ನಿಯ ಮೂರನೇ ವಾರದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಶೂನ್ಯ ಸುತ್ತಿದರೆ, ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 10 ರನ್ ಕಲೆಹಾಕಿ ಫ್ಲಾಪ್ ಆಗಿದ್ದಾರೆ.

7. ರವಿಚಂದ್ರನ್ ಅಶ್ವಿನ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ರವಿಚಂದ್ರನ್ ಅಶ್ವಿನ್ ಮೂರನೇ ವಾರದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 28 ರನ್ ಗಳಿಸಿ ರಿಟೈರ್ ಔಟ್ ಆದರು ಹಾಗೂ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 33 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ನೆಲಕಚ್ಚಿದರು. ಹೀಗೆ ರವಿಚಂದ್ರನ್ ಅಶ್ವಿನ್ ಮೂರನೇ ವಾರದಲ್ಲಿ ಫ್ಲಾಪ್ ಪ್ರದರ್ಶನ ನೀಡಿದ ಆಟಗಾರರ ಪಟ್ಟಿ ಸೇರಿದ್ದಾರೆ.

8. ಪ್ಯಾಟ್ ಕಮಿನ್ಸ್
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 15 ಎಸೆತಗಳಿಗೆ ಅಜೇಯ 56 ರನ್ ಚಚ್ಚಿ ಅಬ್ಬರಿಸಿದ್ದ ಪ್ಯಾಟ್ ಕಮಿನ್ಸ್ ಟೂರ್ನಿಯ ಮೂರನೇ ವಾರದಲ್ಲಿ ಫ್ಲಾಪ್ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ ಪ್ಯಾಟ್ ಕಮಿನ್ಸ್ ಯಾವುದೇ ವಿಕೆಟ್ ಪಡೆಯದೇ 51 ರನ್ ನೀಡಿ ದುಬಾರಿಯಾದರು ಹಾಗೂ ನಂತರ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 3 ರನ್ ಗಳಿಸಿ ಪೆವಿಲಿಯನ್ ಸೇರಿದ ಪ್ಯಾಟ್ ಕಮಿನ್ಸ್ 4 ಓವರ್ ಬೌಲಿಂಗ್ ಮಾಡಿ 40 ರನ್ ನೀಡಿದರು.

9. ಜಸ್ ಪ್ರೀತ್ ಬೂಮ್ರಾ
ಜಸ್ ಪ್ರೀತ್ ಬೂಮ್ರಾ ಅವರನ್ನು ಈ ಪಟ್ಟಿಯಲ್ಲಿ ನೋಡುತ್ತೇವೆಂದು ಬಹುಶಃ ಯಾವ ಕ್ರಿಕೆಟ್ ಪ್ರೇಮಿಯೂ ಕೂಡ ಊಹಿಸಿರಲಿಲ್ಲ. ಆದರೆ ಟೂರ್ನಿಯಲ್ಲಿ ತಮ್ಮ ತಂಡದಂತೆ ಜಸ್ ಪ್ರೀತ್ ಬೂಮ್ರಾ ಕೂಡ ವಿಫಲರಾಗಿದ್ದಾರೆ. ಅದರಲ್ಲಿಯೂ ಮೂರನೇ ವಾರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 31 ರನ್ ನೀಡಿದ ಬುಮ್ರಾ ಯಾವುದೇ ವಿಕೆಟ್ ಪಡೆಯದೇ ಮಂಕಾದರು ಹಾಗೂ ನಂತರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 28 ರನ್ ನೀಡಿದ ಬುಮ್ರಾ 1 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾದರು.

10. ಮೊಹಮ್ಮದ್ ಶಮಿ
ಗುಜರಾತ್ ಟೈಟನ್ಸ್ ತಂಡದ ಮೊಹಮ್ಮದ್ ಶಮಿ ಮೂರನೇ ವಾರದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 32 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ಮಂಕಾದರು ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 39 ರನ್ ನೀಡಿದ ಮೊಹಮ್ಮದ್ ಶಮಿ ಕೇವಲ 1 ವಿಕೆಟ್ ಪಡೆದರು. ಈ ಮೂಲಕ ಮೊಹಮ್ಮದ್ ಶಮಿ ಈ ಬಾರಿಯ ಐಪಿಎಲ್ ಟೂರ್ನಿಯ ಮೂರನೇ ವಾರದಲ್ಲಿ ಫ್ಲಾಪ್ ಆಗಿದ್ದಾರೆ.

11. ಮೊಹಮ್ಮದ್ ಸಿರಾಜ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊಹಮ್ಮದ್ ಸಿರಾಜ್ ಮೂರನೇ ವಾರದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 51 ರನ್ ನೀಡಿದ್ದರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 37 ರನ್ ನೀಡಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿ ಫ್ಲಾಪ್ ಇಲೆವೆನ್ ಪಟ್ಟಿ ಸೇರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications