ಐಪಿಎಲ್ ಇತಿಹಾಸದಲ್ಲಿ 99 ರನ್‌ಗಳಿಗೆ ಔಟ್ ಆಗಿ ನಿರಾಸೆಗೊಳಗಾದ ಎಲ್ಲಾ ಆಟಗಾರರ ಪಟ್ಟಿ

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಮಾರ್ಚ್ 26ರಿಂದ ಆರಂಭಗೊಳ್ಳುತ್ತಿದ್ದು, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿವೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಮೀಪಿಸುತ್ತಿದ್ದಂತೆ ಐಪಿಎಲ್ ಇತಿಹಾಸದಲ್ಲಿ ಆಟಗಾರರು ನಿರ್ಮಿಸಿರುವ ಹಲವಾರು ದಾಖಲೆಗಳು, ಮೈಲಿಗಲ್ಲುಗಳು ಹಾಗೂ ಕೆಟ್ಟ ದಾಖಲೆಗಳ ಕುರಿತ ಚರ್ಚೆಗಳು ಆರಂಭವಾಗಿದ್ದು, ಕ್ರಿಕೆಟ್ ಪ್ರಿಯರು ಐಪಿಎಲ್ ಇತಿಹಾಸದ ಕೆಲ ವಿಶೇಷ ಹಾಗೂ ಅಪರೂಪವೆನಿಸುವ ಸಂಗತಿಗಳ ಕುರಿತು ಮಾತನಾಡಲಾರಂಭಿಸಿದ್ದಾರೆ. ಹೀಗೆ ನಡೆಯುತ್ತಿರುವ ಅಂಕಿಅಂಶಗಳ ಚರ್ಚೆಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 99 ರನ್ ಗಳಿಸಿ ಔಟ್ ಆಗಿ ಶತಕ ವಂಚಿತರಾದ ಆಟಗಾರರ ವಿಷಯ ಕೂಡ ಒಂದು. ಹೌದು, ಐಪಿಎಲ್ ಇತಿಹಾಸದಲ್ಲಿಯೂ ಕೂಡ ಇದುವರೆಗೂ ಒಟ್ಟು ನಾಲ್ವರು ಆಟಗಾರರು ಶತಕ ನಿರ್ಮಿಸುವ ಸನಿಹಕ್ಕೆ ಬಂದು ಔಟ್ ಆಗಿದ್ದು, ಆ ನಾಲ್ವರು ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

4. ಕ್ರಿಸ್ ಗೇಲ್
ಯೂನಿವರ್ಸಲ್ ಬಾಸ್ ಎಂದೇ ಖ್ಯಾತಿಯನ್ನು ಹೊಂದಿರುವ ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳ ಪಂದ್ಯಗಳಲ್ಲಿ ಅಬ್ಬರಿಸಿದ್ದು ಐಪಿಎಲ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಇನ್ನು ಈ ದೊಡ್ಡ ರನ್ ದಾಖಲೆ ಹೊಂದಿರುವ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ 99 ರನ್ ಗಳಿಸಿ ನಿರಾಸೆಗೊಳಗಾಗಿದ್ದ ಅನುಭವವನ್ನೂ ಕೂಡ ಹೊಂದಿದ್ದಾರೆ. ಹೌದು, 2020ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದು ಕ್ರಿಸ್ ಗೇಲ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವೊಂದರಲ್ಲಿ ಕೆಎಲ್ ರಾಹುಲ್ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಈ ಜೋಡಿ ಆರಂಭದಿಂದಲೇ ಅಬ್ಬರಿಸಿತ್ತು. ಇನ್ನು ಈ ಜೋಡಿ 120 ರನ್‌ಗಳ ಜತೆಯಾಟವಾಡಿದ್ದಾಗ ಕೆಎಲ್ ರಾಹುಲ್ ಔಟ್ ಆದರೆ ನೆಲಕಚ್ಚಿ ನಿಂತಿದ್ದ ಗೇಲ್ ತಮ್ಮ ಅಬ್ಬರವನ್ನು ಮುಂದುವರೆಸಿದ್ದರು. ಹೀಗೆ ಈ ಪಂದ್ಯದಲ್ಲಿ ಅಬ್ಬರಿಸಿದ ಗೇಲ್ 63 ಎಸೆತಗಳಲ್ಲಿ 99 ರನ್ ಬಾರಿಸಿ ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ 185 ರನ್‌ಗಳ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ಸುಲಭವಾಗಿ ಬೆನ್ನಟ್ಟಿದ ಕಾರಣ ಗೇಲ್ ಅಬ್ಬರದ ಆಟ ವ್ಯರ್ಥವಾಗಿತ್ತು.

3. ಇಶಾನ್ ಕಿಶನ್
2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಬ್ಬರು ಆಟಗಾರರು 99 ರನ್‌ಗಳಿಗೆ ಔಟ್ ಆಗಿ ನಿರಾಸೆಗೊಳಗಾದ ಉದಾಹರಣೆಯಿದ್ದು ಓರ್ವ ಆಟಗಾರ ಕ್ರಿಸ್ ಗೇಲ್ ಆದರೆ, ಮತ್ತೋರ್ವ ಆಟಗಾರ ಇಶಾನ್ ಕಿಶನ್. ಹೌದು, ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಇಶನ್ ಕಿಶನ್ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 99 ರನ್‌ಗಳಿಗೆ ಔಟ್ ಆಗಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಮುಂಬೈ ತಂಡಕ್ಕೆ ಬೃಹತ್ ಗುರಿಯನ್ನು ನೀಡಿತ್ತು. ಹಾಗೂ ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 16 ರನ್‌ಗಳಿಗೆ ತನ್ನ ಮೊದಲ 2 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ 57 ಎಸೆತಗಳಲ್ಲಿ 99 ರನ್ ಗಳಿಸಿ ಇಸುರು ಉದಾನಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಈ ಪಂದ್ಯದಲ್ಲಿ ಅಂತಿಮವಾಗಿ ಕೀರನ್ ಪೊಲಾರ್ಡ್ ಅಬ್ಬರಿಸಿದರೂ ಸಹ ಪಂದ್ಯ ಟೈ ಆಗಿತ್ತು. ಹಾಗೂ ನಂತರ ನಡೆದ ಸೂಪರ್ ಓವರ್‌ನಲ್ಲಿ ಆರ್‌ಸಿಬಿ ಪಂದ್ಯವನ್ನು ಗೆದ್ದು ಬೀಗಿತ್ತು.

2. ಪೃಥ್ವಿ ಶಾ
ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಪೋಟಕ ಆಟಗಾರ ಪೃಥ್ವಿ ಶಾ ಐಪಿಎಲ್ ಇತಿಹಾಸದಲ್ಲಿ 99 ರನ್‌ಗಳಿಗೆ ಔಟ್ ಆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2019ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಪೃಥ್ವಿ ಶಾ 54 ಎಸೆತಗಳಲ್ಲಿ 99 ರನ್ ಬಾರಿಸಿ ಔಟ್ ಆಗಿದ್ದರು. ಹಾಗೂ ಈ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯಗೊಂಡು ನಂತರ ನಡೆದ ಸೂಪರ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜಯದ ನಗೆ ಬೀರಿತು.

1. ವಿರಾಟ್ ಕೊಹ್ಲಿ
ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 99 ರನ್‌ಗಳಿಗೆ ಔಟ್ ಆದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 2019ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 99 ರನ್‌ಗಳಿಗೆ ಔಟ್ ಆಗಿದ್ದರು. ಹಾಗೂ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯ ಸಾಧಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications