ಐಪಿಎಲ್ 2022: ಕೆಎಲ್ ರಾಹುಲ್ ನೇತೃತ್ವದ ಲಕ್ನೋ ತಂಡಕ್ಕೆ ಹಿನ್ನಡೆ: ಸ್ಟಾರ್ ಆಟಗಾರ ಸಂಪೂರ್ಣ ಟೂರ್ನಿಗೆ ಅಲಭ್ಯ

ಐಪಿಎಲ್ ಟೂರ್ನಿಗೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿರುವ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳ ಆಟಗಾರರು ತಮ್ಮ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಕ್ವಾರಂಟೈನ್ ಪೂರೈಸಿ ತಮ್ಮ ತಮ್ಮ ತಂಡಗಳ ಬಯೋಬಬಲ್‌ಗೆ ಪ್ರವೇಶಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲ ತಂಡಗಳಿಗೆ ಆಟಗಾರರ ಗಾಯದ ಸಮಸ್ಯೆ ಕಾಡುತ್ತಿದ್ದು ಕೆಲ ಆಟಗಾರರು ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯವಾಗುತ್ತಿದ್ದರೆ ಇನ್ನೂ ಕೆಲವರು ಸಂಪೂರ್ಣ ಟೂರ್ನಿಯಿಂದ ಹೊರಗುಳಿಯುವ ಮಾಹಿತಿಗಳು ಲಭ್ಯವಾಗುತ್ತಿದೆ. ಇದೀಗ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ರಮುಖ ಆಟಗಾರ ಈ ಬಾರಿಯ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಅಧಿಕೃತವಾಗಿದೆ.
ಐಪಿಎಲ್ 15ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಬಾರಿಯ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ವೇಗದ ಬೌಲರ್ ಮಾರ್ಕ್ ವುಡ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ ವೇಳೆ ಮಾರ್ಕ್ ವುಡ್ ಮೊಣಕೈ ಗಾಯಕ್ಕೆ ತುತ್ತಾಗಿದ್ದು ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಮಾತ್ರವಲ್ಲ ಈ ಬಾರಿಯ ಐಪಿಎಲ್ ಟೂರ್ನಿಯಿಂದಲೂ ಹೊರಗುಳಿಯುವಂತಾಗಿದೆ.
ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿಯ ಪ್ರಕಾರ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮಾರ್ಕ್ ವುಡ್ ಅವರ ವೈದ್ಯಕೀಯ ವರದಿಯನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಕಳುಹಿಸಿದೆ ಎನ್ನಲಾಗಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಮಾರ್ಕ್ ವುಡ್ ಅವರನ್ನು 7.5 ಕೋಟಿ ನೀಡಿ ತಂಡಕ್ಕೆ ಸೇರ್ಪಡೆಗೊಳಿಸಿತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಆ್ಯಾಂಟಿಗುವಾದ ನಾರ್ಥ್‌ಸೌಂಡ್‌ನಲ್ಲಿನ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದಾಗ ಮೊದಲ ಇನ್ನಿಂಗ್ಸ್‌ನಲ್ಲಿ ಮಾರ್ಕ್ ವುಡ್ 17 ಓವರ್‌ಗಳನ್ನು ಸಂಪೂರ್ಣಗೊಳಿಸಿದ ನಂತರ ಮೊಣಕೈ ನೋವಿಗೆ ತುತ್ತಾದರು. ನಂತರ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಆಡುವ ಬಳಗದಿಂದಲೂ ಮಾರ್ಕ್‌ವುಡ್ ಹೊರಗುಳಿದರು. ಮಾರ್ಕ್ ವುಡ್ ಬದಲಿಗೆ ಸಾಕಿಬ್ ಮಹಮೂದ್ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಆಡುವ ಅವಕಾಶವನ್ನು ಗಳಿಸಿಕೊಂಡಿದ್ದಾರೆ.
ಐಪಿಎಲ್‌ನಿಂದ ಹೊರಗುಳಿಯುತ್ತಿರುವ ಮೂರನೇ ಇಂಗ್ಲೀಷ್ ಆಟಗಾರ: ಈ ಬಾರಿಯ ಐಪಿಎಲ್‌ನಲ್ಲಿ ಹರಾಜಾದ ಬಳಿಕ ಟೂರ್ನಿಯಿಂದ ಹಿಂದಕ್ಕೆ ಸರಿಯುತ್ತಿರುವ ಮೂರನೇ ಇಂಗ್ಲೆಂಡ್ ಆಟಗಾರ ಮಾರ್ಕ್ ವುಡ್. ಇದಕ್ಕೂ ಮುನ್ನ ಜೇಸನ್ ರಾಯ್ ಹಾಗೂ ಅಲೆಕ್ಸ್ ಹೇಲ್ಸ್ ಕೂಡ ಐಪಿಎಲ್ ಟೂರ್ನಿಯಿಂದ ಹಿಂದಕ್ಕೆ ಸರಿಯುವ ನಿರ್ಧಾರ ಪ್ರಕಟಿಸಿದ್ದರು. ಜೇಸನ್ ರಾಯ್ ಅವರನ್ನು ಗುಜರಾತ್ ಟೈಟನ್ಸ್ ಫ್ರಾಂಚೈಸಿ ಮೂಲ ಬೆಲೆ 2 ಕೋಟಿ ನೀಡಿ ಖರೀದಿಸಿದ್ದರೆ ಅಲೆಕ್ಸ್ ಹೇಲ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿದ್ದರು. ಈ ಇಬ್ಬರು ಆಟಗಾರರು ಕೂಡ ಬಯೋಬಬಲ್ ಕಾರಣಕ್ಕಾಗಿ ಟೂರ್ನಿಯೀಮದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದ್ದರೆ ಮಾರ್ಕ್‌ವುಡ್ ಗಾಯದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications