ಐಪಿಎಲ್ 2022: ಕೊಹ್ಲಿ ನಂತರ ಆರ್‌ಸಿಬಿ ನಾಯಕನ ಪಟ್ಟ ಬೇರೆ ಯಾರಿಗೂ ಅಲ್ಲ, ಈ ಕನ್ನಡಿಗನಿಗೆ!

ಮುಂದಿನ ವರ್ಷ ನಡೆಯಲಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಖನೌ ಮತ್ತು ಅಹಮದಾಬಾದ್ ಈ 2 ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗುತ್ತಿರುವುದರಿಂದ ಟ್ರೋಫಿಗಾಗಿ ಒಟ್ಟು 10 ತಂಡಗಳು ಸೆಣಸಾಟ ನಡೆಸಲಿವೆ. ಹೀಗಾಗಿ ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಕಾರಣದಿಂದ ಪ್ರಸ್ತುತ ಅಸ್ತಿತ್ವದಲ್ಲಿರುವ ತಂಡಗಳು ಗರಿಷ್ಠ 4 ಆಟಗಾರರನ್ನು ರಿಟೈನ್ ಮಾಡಿಕೊಂಡು ಉಳಿದ ಆಟಗಾರರನ್ನು ಮೆಗಾ ಹರಾಜಿಗೆ ಕಳುಹಿಸಿವೆ. ಹೀಗೆ ಕೆಎಲ್ ರಾಹುಲ್, ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್ ಮತ್ತು ಮನೀಷ್ ಪಾಂಡೆ ರೀತಿಯ ನಾಯಕತ್ವದ ಅನುಭವವುಳ್ಳ ಆಟಗಾರರೇ ರಿಟೈನ್ ಆಗದೇ ತಂಡಗಳಿಂದ ಹೊರಬಿದ್ದಿದ್ದು ಉಳಿದ ತಂಡಗಳು ಈ ಆಟಗಾರರ ಮೇಲೆ ಕಣ್ಣಿಟ್ಟಿವೆ. ಅದರಲ್ಲಿಯೂ ನಾಯಕನ ಹುಡುಕಾಟದಲ್ಲಿರುವ ನೂತನ ಫ್ರಾಂಚೈಸಿಗಳು ಮತ್ತು ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು ಈ ಆಟಗಾರರನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ತವಕದಲ್ಲಿವೆ.
ಇನ್ನು ನಾಯಕರ ಹುಡುಕಾಟದಲ್ಲಿರುವ ಫ್ರಾಂಚೈಸಿಗಳ ಸಾಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ಸೇರಿದೆ. ಹೌದು, ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಯುಎಇಯಲ್ಲಿ ಪುನಾರಂಭವಾಗುವ ಕೆಲ ದಿನಗಳ ಮುನ್ನ ಅಧಿಕೃತವಾಗಿ ವಿಡಿಯೋ ಮುಖಾಂತರ ದಿಢೀರ್ ಘೋಷಣೆಯೊಂದನ್ನು ಹೊರಡಿಸಿದ ವಿರಾಟ್ ಕೊಹ್ಲಿ ತಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಾಯಕತ್ವವನ್ನು ತ್ಯಜಿಸಲಿದ್ದು, ಮುಂದಿನ ವರ್ಷ ಓರ್ವ ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದೇನೆ ಎಂದು ಹೇಳಿಕೆಯನ್ನು ನೀಡಿದರು.
ಹೀಗೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ತ್ಯಜಿಸಿದ ನಂತರ ಆ ಸ್ಥಾನಕ್ಕೆ ಯಾವ ಆಟಗಾರ ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಮತ್ತು ಪ್ರಶ್ನೆ ದೊಡ್ಡಮಟ್ಟದಲ್ಲಿಯೇ ಮೂಡಿದೆ. ಈ ಹಿಂದೆ ಈ ವಿಚಾರವಾಗಿ ಡೇವಿಡ್ ವಾರ್ನರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಡೇವಿಡ್ ವಾರ್ನರ್ ನೂತನವಾಗಿ ಸೇರ್ಪಡೆಗೊಳ್ಳಲಿರುವ ಅಹ್ಮದಾಬಾದ್ ಫ್ರಾಂಚೈಸಿಯ ಪಾಲಾಗಲಿದ್ದಾರೆ ಎನ್ನಲಾಗುತ್ತಿದ್ದು, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನಕ್ಕೆ ನೂತನವಾಗಿ ಹೆಸರು ಕೇಳಿಬಂದಿದೆ. ಮುಂದೆ ಓದಿ..

ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವಕ್ಕೆ ಕೇಳಿಬಂತು ಕನ್ನಡಿಗನ ಹೆಸರು
ಈ ಹಿಂದೆ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕನ್ನಡಿಗ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಲಿದ್ದಾರೆ ಎಂಬ ಸುದ್ದಿ ತಿಳಿದ ಕನ್ನಡಿಗರು ಖುಷಿಪಟ್ಟಿದ್ದರು. ಆದರೆ ಕೆಎಲ್ ರಾಹುಲ್ ಹೊಸದಾಗಿ ಘೋಷಣೆಯಾಗಿರುವ ಲಕ್ನೋ ಫ್ರಾಂಚೈಸಿ ನಾಯಕನಾಗಲಿದ್ದು, ಅಭಿಮಾನಿಗಳಲ್ಲಿ ಇದ್ದ ನಂಬಿಕೆ ಹುಸಿಯಾಯಿತು. ಆದರೆ ಇದೀಗ ಅದೇ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗನ ಹೆಸರು ಕೇಳಿಬರುತ್ತಿದ್ದು ಮನೀಷ್ ಪಾಂಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕನಾಗುವುದು ಖಚಿತ ಎನ್ನಲಾಗುತ್ತಿದೆ. ಮುಂಬರಲಿರುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮನೀಷ್ ಪಾಂಡೆ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ.

ಮನೀಷ್ ಪಾಂಡೆಗಿದೆ ನಾಯಕತ್ವದ ಉತ್ತಮ ಅನುಭವ
ಇನ್ನು ಮನೀಷ್ ಪಾಂಡೆ ನಾಯಕತ್ವವನ್ನು ವಹಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕರ್ನಾಟಕ ತಂಡವನ್ನು ರಣಜಿ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿ ನಾಯಕನಾಗಿ ಮುನ್ನಡೆಸಿರುವ ಅನುಭವ ಹೊಂದಿರುವ ಮನೀಷ್ ಪಾಂಡೆ ಟಿ ಟ್ವೆಂಟಿ ಕ್ರಿಕೆಟ್ ನಾಯಕತ್ವವನ್ನು ಜಾಣ್ಮೆಯಿಂದ ನಿರ್ವಹಿಸುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಮನೀಷ್ ಪಾಂಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾರಥ್ಯ ವಹಿಸಿಕೊಳ್ಳಲು ಸರಿಯಾದ ಅಭ್ಯರ್ಥಿ ಎಂದರೆ ತಪ್ಪಾಗಲಾರದು.

ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು ಮನೀಷ್ ಪಾಂಡೆ
ಇನ್ನು ಮನೀಷ್ ಪಾಂಡೆ 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಇನ್ನು ಚೊಚ್ಚಲ ಐಪಿಎಲ್ ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿರುವ ಮನೀಷ್ ಪಾಂಡೆ ಕೋಲ್ಕತಾ ನೈಟ್ ರೈಡರ್ಸ್, ಪುಣೆ ವಾರಿಯರ್ಸ್ ಇಂಡಿಯಾ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿರುವ ಅನುಭವವನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications