
8. ಬಾಂಗ್ಲಾದೇಶ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಬಾಂಗ್ಲಾದೇಶದ ಆಟಗಾರರಿಗೆ ಫ್ರಾಂಚೈಸಿಗಳು ಹೆಚ್ಚು ಮಣೆ ಹಾಕಲಿಲ್ಲ. ಓರ್ವ ಆಟಗಾರನನ್ನು ಹೊರತುಪಡಿಸಿದರೆ ಉಳಿದ ಯಾವುದೇ ಬಾಂಗ್ಲಾ ಆಟಗಾರನನ್ನು ಖರೀದಿಸಲು ಫ್ರಾಂಚೈಸಿಗಳು ಮುಂದಾಗಲಿಲ್ಲ. ಹೌದು, ಈ ಬಾರಿಯ ಮೆಗಾ ಹರಾಜಿನಲ್ಲಿ ಬಾಂಗ್ಲಾದೇಶದ ಪ್ರಮುಖ ಆಟಗಾರ ಶಕೀಬ್ ಅಲ್ ಹಸನ್ ಬಿಕರಿಯಾಗದೆ ಉಳಿದರು. ಇನ್ನು ಮೆಗಾ ಹರಾಜಿನಲ್ಲಿ ಬಿಕರಿಯಾದ ಬಾಂಗ್ಲಾ ದೇಶದ ಏಕೈಕ ಆಟಗಾರನೆಂದರೆ ಅದು ಮುಸ್ತಫಿಜರ್ ರೆಹಮಾನ್. ಹೌದು, ಮುಸ್ತಫಿಜರ್ ರೆಹಮಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಆತನ ಮೂಲಬೆಲೆಯಾದ 2 ಕೋಟಿಗೆ ಖರೀದಿಸಿತು.

7. ಶ್ರೀಲಂಕಾ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಹರಾಜಾದ ಶ್ರೀಲಂಕಾ ಆಟಗಾರರು ಪಡೆದುಕೊಂಡಿರುವ ಒಟ್ಟು ಮೊತ್ತ 14.45 ಕೋಟಿ. ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದ ವನಿಂದು ಹಸರಂಗ ಒಬ್ಬರೇ ಬರೋಬ್ಬರಿ 10.75 ಕೋಟಿಯನ್ನು ಹೊಂದಿದ್ದಾರೆ. ವನಿಂದು ಹಸರಂಗ ಹೊರತುಪಡಿಸಿದರೆ ಈ ಬಾರಿಯ ಮೆಗಾ ಹರಾಜಿನಲ್ಲಿ ಬಿಕರಿಯಾದ ಇತರೆ ಶ್ರೀಲಂಕಾ ಆಟಗಾರರೆಂದರೆ ಮಹೀಶ್ ತೀಕ್ಷಣ ( ಚೆನ್ನೈ ಸೂಪರ್ ಕಿಂಗ್ಸ್ ) ಹಾಗೂ ದುಷ್ಮಂತ ಚಮೀರ ( ಲಕ್ನೋ ಸೂಪರ್ ಜೈಂಟ್ಸ್ )

6. ನ್ಯೂಜಿಲೆಂಡ್
ಕ್ರಿಕೆಟ್ ಜಗತ್ತಿನಲ್ಲಿ ಅತಿ ಬೇಡಿಕೆಯ ಕ್ರಿಕೆಟಿಗರನ್ನು ಹೊಂದಿರುವ ದೇಶಗಳ ಪೈಕಿ ನ್ಯೂಜಿಲೆಂಡ್ ಕೂಡ ಒಂದು. ಇತ್ತೀಚಿಗಷ್ಟೆ ವಿಶ್ವ ಟೆಸ್ಟ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ನ್ಯೂಜಿಲೆಂಡ್ ಕಳೆದೆರಡು ವಿಶ್ವಕಪ್ ಟೂರ್ನಿಗಳಲ್ಲಿ ಫೈನಲ್ ಹಂತವನ್ನು ಯಶಸ್ವಿಯಾಗಿ ತಲುಪಿತ್ತು. ಹೀಗೆ ನ್ಯೂಜಿಲೆಂಡ್ ಆಟಗಾರರು ಉತ್ತಮ ಪ್ರದರ್ಶನವನ್ನು ನೀಡಿದ್ದು ಈ ಬಾರಿಯ ಮೆಗಾ ಹರಾಜಿನಲ್ಲಿ ಬೇಡಿಕೆಯನ್ನು ಹೊಂದಿದ್ದರು. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ರಿಟೈನ್ ಆಗಿದ್ದ ಕಾರಣ ಎಲ್ಲರ ಚಿತ್ತ ಜಿಮ್ಮಿ ನೀಶಮ್ ಮತ್ತು ಡೆರಿಲ್ ಮಿಚೆಲ್ ಕಡೆ ಇತ್ತು. ಹೀಗೆ ಮೆಗಾ ಹರಾಜಿನಲ್ಲಿ ಬೇಡಿಕೆಯೊಂದಿಗೆ ಬಿಕರಿಯಾದ ನ್ಯೂಜಿಲೆಂಡ್ ತಂಡದ ಆಟಗಾರರು ಒಟ್ಟು ಪಡೆದ ಮೊತ್ತ 43.35 ಕೋಟಿ.

5. ದಕ್ಷಿಣ ಆಫ್ರಿಕಾ
2010ರ ಐಪಿಎಲ್ ಸಮಯದಲ್ಲಿ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್, ಫಾಫ್ ಡು ಪ್ಲೆಸಿಸ್ ಮತ್ತು ಎಬಿ ಡಿವಿಲಿಯರ್ಸ್ ರೀತಿಯ ಆಟಗಾರರಿಗೆ ದೊಡ್ಡ ಮಟ್ಟದ ಬೇಡಿಕೆ ಇತ್ತು. ಆದರೆ ಸಮಯ ಕಳೆದಂತೆ ಹರಿಣಗಳು ತುಸು ಬೇಡಿಕೆ ಕಳೆದುಕೊಂಡರು. ಸದ್ಯ ಈ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್ ಉತ್ತಮ ಮೊತ್ತಕ್ಕೆ ಬಿಕರಿಯಾಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ಸೇರಿದ ಕ್ವಿಂಟನ್ ಡಿ ಕಾಕ್ ಸಹ ಒಳ್ಳೆಯ ಮೊತ್ತ ಪಡೆದರು. ಈ ಮೂಲಕ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು ಪಡೆದ ಒಟ್ಟು ಹಣ 44.30 ಕೋಟಿ

4. ವೆಸ್ಟ್ ಇಂಡೀಸ್
ಹೊಡಿಬಡಿ ಆಟಕ್ಕೆ ಹೆಸರುವಾಸಿಯಾಗಿರುವ ವೆಸ್ಟ್ ಇಂಡೀಸ್ ಆಟಗಾರರು ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಸಾಮಾನ್ಯ ಪ್ರದರ್ಶನವನ್ನು ನೀಡಿದರೂ ಸಹ ಐಪಿಎಲ್ ಮೆಗಾ ಹರಾಜಿನಲ್ಲಿ ಉತ್ತಮ ಮೊತ್ತವನ್ನೇ ಪಡೆದುಕೊಂಡಿದ್ದಾರೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಶಿಮ್ರಾನ್ ಹೆಟ್ಮಾಯೆರ್, ಡ್ವೇನ್ ಬ್ರಾವೊ ಹಾಗೂ ನಿಕೊಲಸ್ ಪೂರನ್ ಸೇರಿದಂತೆ ಒಟ್ಟು 12 ಕೆರಿಬಿಯನ್ನರು ಒಟ್ಟು 56.20 ಕೋಟಿ ಪಡೆದಿದ್ದಾರೆ.

3. ಆಸ್ಟ್ರೇಲಿಯಾ
ಹಾಲಿ ಟಿ ಟ್ವೆಂಟಿ ವಿಶ್ವಕಪ್ ಚಾಂಪಿಯನ್ಸ್ ಎನಿಸಿಕೊಂಡಿರುವ ಆಸ್ಟ್ರೇಲಿಯನ್ನರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಹೆಚ್ಚಾಗಿಯೇ ಬಿಕರಿಯಾದರು. ಡೇವಿಡ್ ವಾರ್ನರ್, ಮ್ಯಾಥ್ಯೂ ವೇಡ್ ಸೇರಿದಂತೆ ಇನ್ನೂ ಮುಂತಾದ ಆಸ್ಟ್ರೇಲಿಯನ್ನರು ಬಿಕರಿಯಾದರೆ, ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಬಿಕರಿಯಾಗದೆಯೇ ಉಳಿದದ್ದು ಆಶ್ಚರ್ಯಕರವಾಗಿತ್ತು. ಹೀಗೆ ಈ ಬಾರಿಯ ಹರಾಜಿನಲ್ಲಿ ಬಿಕರಿಯಾದ ಆಸ್ಟ್ರೇಲಿಯನ್ನರು ಒಟ್ಟು ಗಳಿಸಿದ ಮೊತ್ತ 58.90 ಕೋಟಿ. ಈ ಮೂಲಕ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ದೇಶಗಳ ಪೈಕಿ ಆಸ್ಟ್ರೇಲಿಯಾ ತೃತೀಯ ಸ್ಥಾನದಲ್ಲಿದೆ.

2. ಇಂಗ್ಲೆಂಡ್
ಸೀಮಿತ ಓವರ್ ಕ್ರಿಕೆಟ್‍ನಲ್ಲಿ ತನ್ನದೇ ಆದ ಪಾರುಪತ್ಯವನ್ನು ಹೊಂದಿರುವ ಇಂಗ್ಲೆಂಡ್ ಆಟಗಾರರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಮೆಗಾ ಹರಾಜಿನಲ್ಲಿ ಹಾಲಿ ಟಿ ಟ್ವೆಂಟಿ ಚಾಂಪಿಯನ್ಸ್ ಆಸ್ಟ್ರೇಲಿಯಾ ಮತ್ತು ಟಿ ಟ್ವೆಂಟಿ ಸ್ಪೆಷಲಿಸ್ಟ್ಸ್ ವೆಸ್ಟ್ ಇಂಡೀಸ್ ಆಟಗಾರರನ್ನೇ ಹಿಂದಿಕ್ಕಿರುವ ಇಂಗ್ಲೆಂಡ್ ಕ್ರಿಕೆಟಿಗರು ಒಟ್ಟು 64.85 ಕೋಟಿ ಪಡೆದಿದ್ದಾರೆ.

1. ಭಾರತ
ಪ್ರತಿ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಂತೆ ಈ ಬಾರಿಯ ಹರಾಜಿನಲ್ಲಿಯೂ ಕೂಡ ಭಾರತೀಯರೇ ಸಿಂಹ ಪಾಲನ್ನು ಹೊಂದಿದ್ದಾರೆ. ಇಶಾನ್ ಕಿಶನ್ 15.25 ಕೋಟಿಗೆ ಬಿಕರಿಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಇನ್ನುಳಿದಂತೆ ದೀಪಕ್ ಚಹರ್, ಶ್ರೇಯಸ್ ಅಯ್ಯರ್, ಹರ್ಷಲ್ ಪಟೇಲ್ ಮತ್ತು ಅವೇಶ್ ಖಾನ್ ಕೂಡ ಭರ್ಜರಿ ಮೊತ್ತಕ್ಕೆ ಬಿಕರಿಯಾದರು. ಹೀಗೆ ಭಾರತದ ಕ್ರಿಕೆಟಿಗರು ಉತ್ತಮ ಮೊತ್ತಕ್ಕೆ ಹರಾಜಾಗುವುದರ ಮೂಲಕ ಒಟ್ಟು 267.65 ಕೋಟಿಯನ್ನು ಗಳಿಸಿದ್ದಾರೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭಾರತದ ಯುವ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸಿಕೊಡುವ ವೇದಿಕೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.


Click it and Unblock the Notifications
