ಐಪಿಎಲ್ 2022: ಮೆಗಾ ಆಕ್ಷನ್ ದಿನಾಂಕ, ಸಮಯ, ಆಟಗಾರರ ಪಟ್ಟಿ ಹಾಗೂ ಇತ್ತೀಚಿನ ಮಾಹಿತಿಗಳು

ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಆವೃತ್ತಿಗೆ ಮುನ್ನ ಮೆಗಾ ಆಕ್ಷನ್ ಪ್ರಕ್ರಿಯೆ ನಡೆಯಲಿದೆ. ಈ ಮೆಗಾ ಆಕ್ಷನ್‌ಗೂ ಮುನ್ನ ಈಗಾಗಲೇ ಅಸ್ತಿತ್ವದಲ್ಲಿರುವ 8 ತಂಡಗಳು ಈ ಹಿಂದಿನ ಆವೃತ್ತಿಯಲ್ಲಿದ್ದ ಆಟಗಾರರಲ್ಲಿ ಗರಿಷ್ಠ ನಾಲ್ಕು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಈ ರೀಟೆನ್ಶನ್ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದ್ದು ಕೆಲ ತಂಡಗಳು ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಂಡಿದ್ದರೆ ಕೆಲ ತಂಡಗಳು ಮೂರು ಹಾಗೂ ಪಂಜಾಬ್ ಕಿಂಗ್ಸ್ ತಂಡ ಇಬ್ಬರು ಆಟಗಾರರನ್ನು ಮಾತ್ರವೇ ರೀಟೆನ್ಶನ್ ಮಾಡಿಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮೂವರು ಆಟಗಾರರನ್ನು ತಮ್ಮ ತಂಡದಲ್ಲಿಯೇ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ಪಂಜಾಬ್ ಕಿಂಗ್ಸ್ ತಂಡ ಮಾತ್ರ ಇಬ್ಬರು ಆಟಗಾರರನ್ನು ಮಾತ್ರವೇ ರೀಟೈನ್ ಮಾಡಿಕೊಂಡಿದೆ. ಈ ಮೂಲಕ ಮುಂದಿನ ಹರಾಜಿನಲ್ಲಿ ಹೆಚ್ಚಿನ ಮೊತ್ತದೊಂದಿಗೆ ಹರಾಜು ಪ್ರಕ್ರಿಯೆಗೆ ಕಣಕ್ಕಿಳಿಯುತ್ತಿದೆ ಪಂಜಾಬ್ ಕಿಂಗ್ಸ್. ಕನ್ನಡಿಗ ಮಯಾಂಕ್ ಅಗರ್ವಾಲ್ ಹೆಚ್ಚಿನ ಮೊತ್ತವನ್ನು ಪಡೆದು ಪಂಜಾಬ್ ಕಿಂಗ್ಸ್ ತಂಡದಲ್ಲಿ ಮುಂದುವರಿದಿದ್ದಾರೆ.
ಇನ್ನು ಈಗಾಗಲೇ ಇರುವ 8 ತಂಡಗಳನ್ನು ಹೊರತು ಪಡಿಸಿ ಎರಡು ಹೊಸ ತಂಡಗಳಿಗೆ ವಿಶೇಷ ಅವಕಾಶವೊಂದನ್ನು ನೀಡಲಾಗಿದ್ದು ಹರಾಜು ಪ್ರಕ್ರಿಯೆಗೂ ಮುನ್ನ ಈ ತಂಡಗಳು ಹರಾಜು ಪಟ್ಟಿಯಲ್ಲಿರುವ ಆಟಗಾರರ ಪೈಕಿ ಗರಿಷ್ಠ ಮೂವರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸುವ ಅವಕಾಶವಿದೆ. ಆ ಆಟಗಾರರು ಯಾರು ಎಂಬುದನ್ನು ಕೆಲ ದಿನಗಳಲ್ಲಿಯೇ ಫ್ರಾಂಚೈಸಿಗಳು ನಿರ್ಧಾರ ಮಾಡಲಿದ್ದು ಬಳಿಕ ಇದು ಬಹಿರಂಗವಾಗಲಿದೆ.
ಇನ್ನು ಈ ಬಾರಿಯ ಹರಾಜು ಪಟ್ಟಿಗೆ ಕೆಲ ಪ್ರಮುಖ ಆಟಗಾರರ ಹೆಸರು ಕೂಡ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ. ಕೆಎಲ್ ರಾಹುಲ್, ಡೇವಿಡ್ ವಾರ್ನರ್, ಶ್ರೇಯಸ್ ಐಯ್ಯರ್, ರಶೀದ್ ಖಾನ್, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಯುಜುವೇಂದ್ರ ಚಾಹಲ್ ಅವರಂತಾ ಆಟಗಾರರು ಹರಾಜು ಪಟ್ಟಿಗೆ ಬಿಡುಗಡೆಯಾಗಿದ್ದಾರೆ. ಇವರಲ್ಲಿ ಕೆಲ ಆಟಗಾರರು ಹೊಸ ತಂಡಗಳಾದ ಅಹ್ಮದಾಬಾದ್ ಮತ್ತು ಲಕ್ನೋ ಪಾಲಾಗಲಿದ್ದು ಆ ಆಟಗಾರರು ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ.
ಐಪಿಎಲ್ 2022 ಹರಾಜು ದಿನಾಂಕ ಮತ್ತು ಸಮಯ: ಐಪಿಎಲ್ ಮಹಾ ಹರಾಜಿನ ದಿನಾಂಕ ಹಾಗೂ ಸಮಯವನ್ನು ಬಿಸಿಸಿಐ ಈವರೆಗೂ ಅಧಿಕೃತವಾಗಿ ತಿಳಿಸಿಲ್ಲ.ಆದರೆ ಮೂಲಗಳ ಮಾಹಿತಿಯ ಪ್ರಕಾರ 2022ರ ಜನವರಿ ಮೊದಲ ವಾರದಲ್ಲಿ ನಡೆಯಲಿದೆ ಎನ್ನಲಾಗಿದೆ. ಈಗಾಗಲೇ ರೀಟೆನ್ಶನ್‌ನ್ಲಲಿ ತಂಡಗಳು ಖರ್ಚು ಮಾಡಿರುವ ಮೊತ್ತವನ್ನು ಕಳೆದು ಸ್ಯಾಲರಿ ಪರ್ಸ್‌ನಲ್ಲಿ ಉಳಿದಿರುವ ಮೊತ್ತದಲ್ಲಿ ಫ್ರಾಂಚೈಸಿಗಳು ಉಳಿದ ಆಟಗಾರರನ್ನು ಭರ್ತಿ ಮಾಡಬೇಕಿದೆ. ಹೀಗಾಗಿ ಯಾವ್ಯಾವ ಆಟಗಾರರು ಯಾವ ಫ್ರಾಂಚೈಸಿ ಪಾಲಾಗಲಿದ್ದಾರೆ ಎಂಬ ಕುತೂಹಲದ ಜೊತೆಗೆ ಅವರು ಪಡೆಯುವ ಸಂಬಳ ಎಷ್ಟು ಎಂಬುದು ಕೂಡ ಹರಾಜು ಪ್ರಕ್ರಿಯೆಯ ಕುತೂಹಲಕಾರಿ ಅಂಶವಾಗಲಿದೆ
ಐಪಿಎಲ್ ತಂಡಗಳ ಸ್ಯಾಲರಿ ಪರ್ಸ್: ಇಇನ್ನು ಐಪಿಎಲ್ 2022ರ ಹರಾಜಿಗಾಗಿ ಬಿಸಿಸಿಐ ತಂಡಗಳ ಸ್ಯಾಲರಿ ಪರ್ಸ್‌ಅನ್ನು 85ರಿಂದ 90 ಕೋಟಿಗೆ ಹೆಚ್ಚಳಗೊಳಿಸಿದೆ. ಅಂದರೆ ಈ ಹಿಂದಿನ ಮಿನಿ ಹರಾಜಿನಲ್ಲಿ ತಂಡಗಳ ಪರ್ಸ್‌ಅನ್ನು 85 ಕೋಟಿ ನಿಗದಿ ಪಡಿಸಲಾಗಿತ್ತು. ಅದರಲ್ಲಿ ಐದು ಕೋಟಿ ಏರಿಕೆ ಮಾಡಲಾಗಿದೆ. ಈ ಆಟಗಾರರಲ್ಲಿ ತಂಡಗಳು ಮೊದಲಿಗೆ ಗರಿಷ್ಠ ನಾಲ್ಕು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು ಈ ಪ್ರಕ್ರಿಯೆ ಈಗಾಗಲೇ ಅಂತ್ಯವಾಗಿದೆ.
ರೀಟೈನ್ ಮಾಡಿಕೊಂಡಿರುವ ಆಟಗಾರರು
ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ (16 ಕೋಟಿ), ಎಂಎಸ್ ಧೋನಿ (12 ಕೋಟಿ), ಮೊಯಿನ್ ಅಲಿ (8 ಕೋಟಿ), ಋತುರಾಜ್ ಗಾಯಕ್ವಾಡ್ (6 ಕೋಟಿ)
ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್ (16 ಕೋಟಿ), ಅಕ್ಷರ್ ಪಟೇಲ್ (9 ಕೋಟಿ), ಪೃಥ್ವಿ ಶಾ (7.5 ಕೋಟಿ), ಮತ್ತು ಅನ್ರಿಚ್ ನಾರ್ಟ್ಜೆ (6.5 ಕೋಟಿ)
ಕೋಲ್ಕತ್ತಾ ನೈಟ್ ರೈಡರ್ಸ್: ಆಂಡ್ರೆ ರಸೆಲ್ (12 ಕೋಟಿ), ವೆಂಕಟೇಶ್ ಅಯ್ಯರ್ (8 ಕೋಟಿ), ವರುಣ್ ಚಕ್ರವರ್ತಿ (8 ಕೋಟಿ), ಮತ್ತು ಸುನಿಲ್ ನರೈನ್ (6 ಕೋಟಿ)
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (16 ಕೋಟಿ), ಜಸ್ಪ್ರೀತ್ ಬುಮ್ರಾ (12 ಕೋಟಿ), ಸೂರ್ಯಕುಮಾರ್ ಯಾದವ್ (8 ಕೋಟಿ), ಮತ್ತು ಕೀರಾನ್ ಪೊಲಾರ್ಡ್ (6 ಕೋಟಿ)
ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (14 ಕೋಟಿ), ಮತ್ತು ಅರ್ಷದೀಪ್ ಸಿಂಗ್ (4 ಕೋಟಿ)
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (14 ಕೋಟಿ), ಜೋಸ್ ಬಟ್ಲರ್ (10 ಕೋಟಿ), ಮತ್ತು ಯಶಸ್ವಿ ಜೈಸ್ವಾಲ್ (4 ಕೋಟಿ)
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ), ಮತ್ತು ಮೊಹಮ್ಮದ್ ಸಿರಾಜ್ (7 ಕೋಟಿ)
ಸನ್ ರೈಸರ್ಸ್ ಹೈದರಾಬಾದ್: ಕೇನ್ ವಿಲಿಯಮ್ಸನ್ (14 ಕೋಟಿ), ಉಮ್ರಾನ್ ಮಲಿಕ್ (4 ಕೋಟಿ) ಮತ್ತು ಅಬ್ದುಲ್ ಸಮದ್ (4 ಕೋಟಿ)
ಫ್ರಾಂಚೈಸಿಗಳ ಪರ್ಸ್‌ನಲ್ಲಿ ಉಳಿದುಕೊಂಡಿರುವ ಮೊತ್ತ
ಪಂಜಾಬ್ ಕಿಂಗ್ಸ್: 72 ಕೋಟಿ
ಸನ್ ರೈಸರ್ಸ್ ಹೈದರಾಬಾದ್ : 68 ಕೋಟಿ
ರಾಜಸ್ಥಾನ್ ರಾಯಲ್ಸ್: 62 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 57 ಕೋಟಿ
ಮುಂಬೈ ಇಂಡಿಯನ್ಸ್: 48 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್: 48 ಕೋಟಿ
ಕೋಲ್ಕತ್ತಾ ನೈಟ್ ರೈಡರ್ಸ್: 48 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್: 47.5 ಕೋಟಿ
ಲಕ್ನೋ - 90 ಕೋಟಿ
ಅಹಮದಾಬಾದ್ - 90 ಕೋಟಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications