ಐಪಿಎಲ್ 2022 ಮೆಗಾ ಹರಾಜು: ಕೊನೆಗೂ ದಿನಾಂಕ, ಸ್ಥಳ ನಿಗದಿ; 1000 ಆಟಗಾರರಲ್ಲಿ ಹರಾಜಾಗುವವರೆಷ್ಟು?

ಮುಂದಿನ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಇನ್ನೂ ತಿಂಗಳುಗಳೇ ಬಾಕಿ ಇದ್ದರೂ ಸಹ ಈಗಾಗಲೇ ಕ್ರಿಕೆಟ್ ಜಗತ್ತಿನಲ್ಲಿ ಅತಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಹೌದು, ಮುಂಬರುವ ವರ್ಷದಲ್ಲಿ ನಡೆಯಲಿರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ತುಂಬಾ ವಿಶೇಷವಾಗಿದ್ದು ಸಾಕಷ್ಟು ವಿಭಿನ್ನತೆಗಳಿಂದ ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಮುಂದಿನ ವರ್ಷ ಲಕ್ನೋ ಮತ್ತು ಅಹ್ಮದಾಬಾದ್ ನೂತನ ಫ್ರಾಂಚೈಸಿಗಳ ಸೇರ್ಪಡೆಯಾಗುತ್ತಿರುವುದರಿಂದ ಟ್ರೋಫಿಗಾಗಿ ಹತ್ತು ತಂಡಗಳ ನಡುವೆ ಸೆಣಸಾಟ ನಡೆಯುವುದು ವಿಶೇಷವಾಗಿರಲಿದೆ.
ಹೀಗೆ ಮುಂದಿನ ವರ್ಷ ನೂತನ ಫ್ರಾಂಚೈಸಿಗಳು ಸೇರ್ಪಡೆಯಾಗುವುದರಿಂದ ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯನ್ನು ನಡೆಸಲೇಬೇಕು. ಹೀಗಾಗಿ ಸದ್ಯ ಅಸ್ತಿತ್ವದಲ್ಲಿರುವ ತಂಡಗಳು ಗರಿಷ್ಠ 4 ಆಟಗಾರರನ್ನು ತಮ್ಮಲ್ಲಿ ಉಳಿಸಿಕೊಂಡು ಇತರೆ ಆಟಗಾರರನ್ನು ಮೆಗಾ ಹರಾಜಿಗೆ ಕಳುಹಿಸಬೇಕಾಗಿತ್ತು. ಅದರಂತೆ ಇತ್ತೀಚೆಗೆ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿರುವ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಇತರೆ ಆಟಗಾರರನ್ನು ಹರಾಜಿಗೆ ಕಳುಹಿಸಿವೆ.
ಹೀಗೆ ರಿಟೆನ್ಷನ್ ಪ್ರಕ್ರಿಯೆ ಮುಗಿದ ನಂತರ ಹಲವಾರು ಘಟಾನುಘಟಿ ಆಟಗಾರರೇ ರಿಟೈನ್ ಆಗದೇ ಉಳಿದಿದ್ದು ಮೆಗಾ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಅದರಲ್ಲಿಯೂ ನಾಯಕತ್ವದ ಗುಣಗಳನ್ನು ಹೊಂದಿರುವ ಕೆಎಲ್ ರಾಹುಲ್, ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್ ಮತ್ತು ಮನೀಷ್ ಪಾಂಡೆ ಮೇಲೆ ಮೆಗಾ ಹರಾಜಿನಲ್ಲಿ ಹಣದ ಹೊಳೆಯೇ ಹರಿಯಲಿದೆ. ಇನ್ನು ಈ ಮೆಗಾ ಹರಾಜು ಪ್ರಕ್ರಿಯೆಯನ್ನು ಹೊರತುಪಡಿಸಿ ನೂತನ ಫ್ರಾಂಚೈಸಿಗಳು ಒಟ್ಟು 3 ಆಟಗಾರರನ್ನು ಹೊರಗಡೆಯಿಂದಲೂ ಕೂಡ ಖರೀದಿಸಬಹುದಾಗಿದ್ದು ಹೆಚ್ಚು ಅನುಕೂಲವನ್ನು ಹೊಂದಿವೆ. ಹೀಗೆ ಮೆಗಾ ಹರಾಜು ಐಪಿಎಲ್ ವೀಕ್ಷಕರಲ್ಲಿ ದೊಡ್ಡ ಕುತೂಹಲವನ್ನು ಹುಟ್ಟಿಸಿದ್ದು ಯಾವಾಗ ಜರುಗಲಿದೆ ಎಂಬ ಪ್ರಶ್ನೆ ಮೂಡಿತ್ತು. ಮೊದಲಿಗೆ ಜನವರಿ ತಿಂಗಳಲ್ಲಿ ನಡೆಯಲಿದೆ ಎನ್ನಲಾಗುತ್ತಿದ್ದ ಮೆಗಾ ಹರಾಜು ಕಾರ್ಯಕ್ರಮ ಇದೀಗ ಮುಂದೂಡಲ್ಪಟ್ಟಿದ್ದು ಯಾವಾಗ ಮತ್ತು ಎಲ್ಲಿ ನಡೆಯಲಿದೆ ಎಂಬುದನ್ನು ಬಿಸಿಸಿಐ ನಿಗದಿಪಡಿಸಿದೆ. ಈ ಕುರಿತಾದ ಮಾಹಿತಿ ಮುಂದೆ ಇದೆ ಓದಿ..

ಮೆಗಾ ಹರಾಜು ನಡೆಯುವ ದಿನಾಂಕ ಮತ್ತು ಸ್ಥಳ
ಬಿಸಿಸಿಐ ಕಳೆದ ಗುರುವಾರ ಎಲ್ಲಾ ಫ್ರಾಂಚೈಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಿದ್ದು ಮೆಗಾ ಹರಾಜಿಗೆ ಸ್ಥಳ ಹಾಗೂ ದಿನಾಂಕವನ್ನು ನಿಗದಿಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಮುಂದಿನ ವರ್ಷದ ಫೆಬ್ರವರಿ 12 ಮತ್ತು 13ರಂದು ಬೆಂಗಳೂರು ನಗರದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎನ್ನಲಾಗುತ್ತಿದೆ. ಹೀಗಾಗಿ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಮಾಲೀಕರಿಗೂ ಫೆಬ್ರವರಿ 11ರಂದೇ ಬೆಂಗಳೂರಿಗೆ ಬರಬೇಕೆಂದು ಸೂಚನೆ ನೀಡಿದೆ.

1000 ಆಟಗಾರರ ಹರಾಜಿನ ನಿರೀಕ್ಷೆಯಲ್ಲಿ ಬಿಸಿಸಿಐ
ಇನ್ನು ಮೆಗಾ ಹರಾಜು ಪ್ರಕ್ರಿಯೆ ದಿನಾಂಕ ಮತ್ತು ಸ್ಥಳವನ್ನು ನಿಗದಿ ಪಡಿಸಿರುವ ಬಿಸಿಸಿಐ ಇತರೆ ಕ್ರಿಕೆಟ್ ಮಂಡಳಿಗಳ ಜೊತೆ ಸಂಪರ್ಕವನ್ನು ಮಾಡಿದ್ದು ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಇಚ್ಛಿಸುವ ಆಟಗಾರರ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಿದೆ. ಹೀಗಾಗಿ ಬಿಸಿಸಿಐ ಪ್ರಕಾರ ಸುಮಾರು 1000ಕ್ಕೂ ಹೆಚ್ಚು ಆಟಗಾರರು ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸುವ ನಿರೀಕ್ಷೆಯಿದ್ದು, ಇದರಲ್ಲಿ ಕೇವಲ 250 ಆಟಗಾರರು ಮಾತ್ರ ಹರಾಜಾಗಲಿದ್ದಾರೆ.

ಮೆಗಾ ಹರಾಜು ದಿನಾಂಕದಲ್ಲಿ ವ್ಯತ್ಯಾಸವಾದರೂ ಆಗಬಹುದು
ಇನ್ನು ಬಿಸಿಸಿಐ ಫೆಬ್ರವರಿ 12 ಮತ್ತು 13ರಂದು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದು, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ತೃತೀಯ ಏಕದಿನ ಪಂದ್ಯ ಕೂಡ ಫೆಬ್ರವರಿ 12ರಂದೇ ನಡೆಯಲಿದೆ. ಇನ್ನು ಮೆಗಾ ಹರಾಜು ಕಾರ್ಯಕ್ರಮ ಮತ್ತು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಈ ಎರಡರ ಪ್ರಸಾರವನ್ನು ಸ್ಟಾರ್‌ಸ್ಪೋರ್ಟ್ ನೆಟ್‌ವರ್ಕ್ ಮಾಡುವುದರಿಂದ ಮೆಗಾ ಹರಾಜು ಕಾರ್ಯಕ್ರಮದ ದಿನಾಂಕ ಬದಲಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications