'ಈ ರೀತಿ ಆಡುವವ ನಾಯಕನೇ ಅಲ್ಲ': ಧೋನಿ ವಿರುದ್ಧ ಖ್ಯಾತ ಮಾಜಿ ಕ್ರಿಕೆಟಿಗನ ಅಸಮಾಧಾನ!

ಚೆನ್ನೈ ಸೂಪರ್ ಕಿಂಗ್ಸ್ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿದ್ದು ತೀವ್ರ ಮುಖಭಂಗಕ್ಕೊಳಗಾಗಿತ್ತು. ಆದರೆ ನಂತರ ನಡೆದ 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇದೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿ ಗೆಲ್ಲುವ ಮೂಲಕ ದೊಡ್ಡ ಕಮ್‌ಬ್ಯಾಕ್ ಮಾಡಿತು. 2020ರಲ್ಲಿ ಲೀಗ್ ಹಂತದಲ್ಲಿಯೇ ತಮ್ಮ ತಂಡ ಟೂರ್ನಿಯಿಂದ ಹೊರಬಿದ್ದಾಗ ಮಾತನಾಡಿದ್ದ ನಾಯಕ ಎಂಎಸ್ ಧೋನಿ ಮುಂಬರುವ ಟೂರ್ನಿಯಲ್ಲಿ ನಾವು ಪುಟಿದೇಳಲಿದ್ದೇವೆ ಎಂಬ ಭರವಸೆಯನ್ನು ನೀಡಿದ್ದರು. ಆ ಮಾತಿನಂತೆ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು ಹಾಗೂ ನಾಲ್ಕನೇ ಬಾರಿಗೆ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಗೆಲುವಿನ ಮೂಲಕ ಎಂಎಸ್ ಧೋನಿ ನಾಯಕತ್ವ ಎಂಥದ್ದು ಎಂಬುದು ಮತ್ತೊಮ್ಮೆ ಸಾಬೀತಾಯಿತು. ಧೋನಿ ಮಾಸ್ಟರ್‌ಮೈಂಡ್ ನಾಯಕತ್ವದ ಕುರಿತು ಸಾಕಷ್ಟು ಪ್ರಶಂಸೆಗಳೂ ಸಹ ವ್ಯಕ್ತವಾದವು.
ಹೀಗೆ ಕಳೆದ ಐಪಿಎಲ್ ಟೂರ್ನಿಯಲ್ಲಿ ಕಪ್ ಗೆದ್ದು ಹಾಲಿ ಚಾಂಪಿಯನ್ಸ್ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಧೋನಿ ನಾಯಕತ್ವದಲ್ಲಿ ಕಣಕ್ಕಿಳಿದು ಮತ್ತೊಂದು ಟ್ರೋಫಿ ಎತ್ತಿಹಿಡಿಯುವತ್ತ ಕಣ್ಣಿಟ್ಟಿದೆ. ಹೀಗೆ ಧೋನಿ ಐಪಿಎಲ್ ಕಂಡ ಯಶಸ್ವಿ ನಾಯಕನಾಗಿದ್ದು, ಧೋನಿ ನಾಯಕತ್ವದ ವಿಧಾನದ ಕುರಿತು ಇದೀಗ ಭಾರತ ಮಾಜಿ ಕ್ರಿಕೆಟಿಗ, ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವಂತ ನಾಯಕ ಗೌತಮ್ ಗಂಭೀರ್ ಮಾತನಾಡಿದ್ದು ಈ ಕೆಳಕಂಡ ಬದಲಾವಣೆಗಳನ್ನು ಧೋನಿ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

ಈ ರೀತಿ ಆಡುವವ ನಾಯಕನೇ ಅಲ್ಲ
ಎಂಎಸ್ ಧೋನಿ ಬ್ಯಾಟಿಂಗ್ ಕ್ರಮಾಂಕದ ಕುರಿತು ಮಾತನಾಡಿರುವ ಗೌತಮ್ ಗಂಭೀರ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರ ನಾಯಕನಾಗಿ ತಂಡವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. "ನಾಯಕನೊಬ್ಬ ಮುಂದಾಳತ್ವ ವಹಿಸಬೇಕಾದ ವಿಷಯದ ಬಗ್ಗೆ ನಾವು ಆಗಾಗ ಪ್ರಸ್ತಾಪಿಸುತ್ತಲೇ ಇರುತ್ತೇವೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರ ತಂಡವನ್ನು ಮುನ್ನಡೆಸಲು ಸಾಧ್ಯವಿಲ್ಲ" ಎಂದು ಗೌತಮ್ ಗಂಭೀರ್ ಸ್ಟಾರ್ ಸ್ಪೋರ್ಟ್ಸ್ ಶೋ ಕ್ರಿಕೆಟ್ ಲೈವ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ಧೋನಿ ಮೇಲಿನ ಕ್ರಮಾಂಕದಲ್ಲಿ ಆಡಬೇಕು
ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವವರು ನಾಯಕನಾಗಲು ಸಾಧ್ಯವಿಲ್ಲ ಎಂದಿರುವ ಗೌತಮ್ ಗಂಭೀರ್ ಎಂಎಸ್ ಧೋನಿ ಮೇಲಿನ ಕ್ರಮಾಂಕದಲ್ಲಿ ಆಡವಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಯಕನಾದವನು ಮುಂದೆ ನಿಂತು ತಂಡವನ್ನು ಮುನ್ನಡೆಸಬೇಕೇ ಹೊರತು ಕೊನೆಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಅಲ್ಲ ಎಂಬರ್ಥದಲ್ಲಿ ಗೌತಮ್ ಗಂಭೀರ್ ಎಂಎಸ್ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಈ ಹಿಂದೆ ಇದ್ದ ಎಂಎಸ್ ಧೋನಿ ಬೇಕಿದೆ
ಇನ್ನೂ ಮುಂದುವರೆದು ಮಾತನಾಡಿರುವ ಗೌತಮ್ ಗಂಭೀರ್ ಈ ಹಿಂದೆ ಇದ್ದ ಎಂಎಸ್ ಧೋನಿ ಈಗಿಲ್ಲ ಎಂದಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಬೇಗನೇ ಕಣಕ್ಕಿಳಿದು ಎದುರಾಳಿ ಬೌಲರ್‌ಗಳ ಮೇಲೆ ಅಬ್ಬರಿಸುತ್ತಿದ್ದ ಎಂ ಎಸ್ ಧೋನಿ ಮತ್ತೆ ಬೇಕು ಎಂದು ಗೌತಮ್ ಹೇಳಿದ್ದಾರೆ. ಎಂಎಸ್ ಧೋನಿ ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ಗೌತಮ್ ಗಂಭೀರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications