
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೇ 1ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 13 ರನ್‌ಗಳ ಗೆಲುವು ಸಾಧಿಸಿದ್ದು, ಟೂರ್ನಿಯಲ್ಲಿ ಮೂರನೇ ಗೆಲುವನ್ನು ಕಂಡಿದೆ. ಹೌದು, ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿ ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 203 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿ ಸೋಲನ್ನು ಅನುಭವಿಸಿತು.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲ ದಿನಗಳು ಬಾಕಿ ಇರುವಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಎಂಎಸ್ ಧೋನಿ ರವೀಂದ್ರ ಜಡೇಜಾಗೆ ಹಸ್ತಾಂತರಿಸಿದ್ದರು. ಆದರೆ, ಒತ್ತಡ ನಿರ್ವಹಿಸಲಾಗದೇ ಜಡೇಜಾ ಮರಳಿ ಎಂಎಸ್ ಧೋನಿಗೆ ನಾಯಕತ್ವವನ್ನು ಹಸ್ತಾಂತರಿಸಿದ್ದು, ಧೋನಿ ನಾಯಕತ್ವದಲ್ಲಿ ಆಡಿದ ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಬೀಗಿದೆ.
ಇನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ನಾಯಕ ಎಂಎಸ್ ಧೋನಿ ತಮ್ಮ ತಂಡದ ಯುವ ಆಟಗಾರ ಮುಖೇಶ್ ಚೌಧರಿ ವಿರುದ್ಧ ಮೈದಾನದಲ್ಲೇ ಕಿಡಿಕಾರಿದ ಘಟನೆ ನಡೆದಿದ್ದು, ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂದ್ಯದ ಅಂತಿಮ ಓವರ್ ಬೌಲಿಂಗ್ ಮಾಡಿದ ಮುಖೇಶ್ ಚೌಧರಿ ಓವರ್‌ನ ನಾಲ್ಕನೇ ಎಸೆತವನ್ನು ವೈಡ್ ಎಸೆದರು. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಧೋನಿ ಬೌಲರ್ ಮೇಲೆ ಮೈದಾನದಲ್ಲಿಯೇ ಕೂಗಾಡಿದ್ದಾರೆ.
4 ವಿಕೆಟ್ ಪಡೆದು ಮಿಂಚಿದ ಮುಖೇಶ್ ಚೌಧರಿ
ಈ ಪಂದ್ಯದಲ್ಲಿ ತನ್ನ ಪಾಲಿನ ಎಲ್ಲಾ ಓವರ್‌ಗಳನ್ನೂ ಮಾಡಿದ ಮುಖೇಶ್ ಚೌಧರಿ 4 ವಿಕೆಟ್‌ಗಳನ್ನು ಪಡೆದರು. ಎದುರಾಳಿ ತಂಡದ ಪರ ರನ್ ಗಳಿಸಬಹುದಾದ ಆಟಗಾರರಾದ ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಶಶಾಂಕ್ ಸಿಂಗ್ ಮತ್ತು ವಾಷಿಂಗ್ಟನ್ ಸುಂದರ್ ಅವರ ವಿಕೆಟ್‌ಗಳನ್ನು ಮುಖೇಶ್ ಚೌಧರಿ ಕಬಳಿಸಿದರು. ಇನ್ನು ಮುಖೇಶ್ ಚೌಧರಿ 4 ವಿಕೆಟ್ ಪಡೆದು ಗಮನ ಸೆಳೆದರೂ ಸಹ 4 ಓವರ್‌ಗಳಲ್ಲಿ 46 ರನ್ ನೀಡಿ ದುಬಾರಿಯೂ ಸಹ ಆಗಿದ್ದಾರೆ.
ಕಮ್‌ಬ್ಯಾಕ್ ಮಾಡಿದ ರುತುರಾಜ್ ಗಾಯಕ್ವಾಡ್
ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ವಿಜೇತನಾಗಿ ಹೊರಹೊಮ್ಮಿದ್ದ ರುತುರಾಜ್ ಗಾಯಕ್ವಾಡ್ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲಾಗದೇ ನೆಲಕಚ್ಚಿದ್ದರು. ಆದರೆ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿರುವ ರುತುರಾಜ್ ಗಾಯಕ್ವಾಡ್ 57 ಎಸೆತಗಳಲ್ಲಿ 99 ರನ್ ಬಾರಿಸಿದ್ದಾರೆ. 6 ಬೌಂಡರಿ ಮತ್ತು 6 ಸಿಕ್ಸರ್ ಸಿಡಿಸಿದ ರುತುರಾಜ್ ಗಾಯಕ್ವಾಡ್ ಒಂದು ರನ್‌ನಿಂದ ಶತಕ ವಂಚಿತರಾದರು ಹಾಗೂ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.