
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದೆ. ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದ್ದು ಪಂದ್ಯ ಕುತೂಹಲ ಮೂಡಿಸಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ನಾಯಕನಾಗಿ ಐಪಿಎಲ್ ಟೂರ್ನಿಯಲ್ಲಿ ತಂಡವೊಂದನ್ನು ಮುನ್ನಡೆಸಿದ ಕ್ರಿಕೆಟಿಗರ ಪಟ್ಟಿಯತಲ್ಲಿ ರೋಹಿತ್ ಶರ್ಮಾ ಗೌತಮ್ ಗಂಭೀರ್ ಅವರನ್ನು ಹಿಂದಿಕ್ಕಿದ್ದಾರೆ.
ಐಪಿಎಲ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೇರಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರೋಹಿತ್ ಶರ್ಮಾ ನಾಯಕನಾಗಿ ಕಣಕ್ಕಿಳಿಯುವ ಮೂಲಕ 130ನೇ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿದಂತಾಗಿದೆ. 129 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಗೌತಮ್ ಗಂಭೀರ್ ಈಗ ನಾಲ್ಕನೇ ಸ್ಥಾನಕ್ಕಿಳಿದಿದ್ದಾರೆ.
ರೋಹಿತ್ ಶರ್ಮಾ 2013ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಮೊದಲಿಗೆ ಜವಾಬ್ಧಾರಿ ವಹಿಸಿಕೊಂಡಿದ್ದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಈವರೆಗೆ ಒಟ್ಟು ಐದು ಬಾರಿ ಐಪಿಎಲ್‌ನ ಚಾಂಪಿಯನ್ ಪಟ್ಟಕ್ಕೇರಿದೆ. 2013ರ ಆವೃತ್ತಿಯ ಮಧ್ಯದಲ್ಲಿ ರಿಕಿ ಪಾಂಟಿಂಗ್ ಅವರಿಂದ ರೋಹಿತ್ ನಾಯಕತ್ವ ವಹಿಸಿಕೊಂಡಿದ್ದರು. ಆ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅದಾದ ಬಳಿಕ 2015, 2017 2019 ಹಾಗೂ 2020ರಲ್ಲಿ ಈ ಸಾಧನೆಯನ್ನು ಪುನರಾವರ್ತಿಸುವಲ್ಲಿ ಯಶಸ್ವಿಯಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ 75 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 50 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಇನ್ನು ನಾಯಕನಾಗಿ ಅತಿ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಆಟಗಾರರ ಪಟ್ಟಿಯಲ್ಲಿ ಎಂಎಸ್ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. 2008ರಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಧೋನಿ 204 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. 2008ರಿಂದ 2021ರ ಆವೃತ್ತಿಯವರೆಗೆ ಸಿಎಸ್‌ಕೆ ತಂಡವನ್ನು ಮುನ್ನಡೆಸಿದ್ದ ಧೋನಿ 2016ರ ಆವೃತ್ತಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಧೋನಿ ನಂತರದ ಸ್ಥಾನದಲ್ಲಿ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದ್ದಾರೆ. 140 ಪಂದ್ಯಗಳಲ್ಲಿ ಕೊಹ್ಲಿ ನಾಯಕತ್ವ ವಹಿಸಿಕೊಂಡಿದ್ದು 64 ಗೆಲುವು ಹಾಗೂ 69 ಸೋಲು ಅನುಭವಿಸಿದ್ದಾರೆ.
ಮೊದಲಿಗೆ ಬ್ಯಾಟಿಗ್ ನಡೆಸಿದ ರೋಹಿತ್ ಪಡೆ 178 ರನ್‌ಗಳ ಸವಾಲಿನ ಗುರಿ ನೀಡಿದೆ. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಮಿಂಚಿದರೆ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಬೌಲಿಂಗ್‌ನಲ್ಲಿ ಕುಲ್‌ದೀಪ್ ಯಾದವ್ ಭರ್ಜರಿ ಪ್ರದರ್ಶನ ನೀಡಿದರು.
ಇನ್ನು ರೋಹಿತ್ ಮೈಲುಗಲ್ಲಿ ಸಾಧಿಸಿದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಪರವಾಗಿ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 67 ರನ್‌ಗಳ ಕೊಡುಗೆ ನೀಡಿದ್ದಾರೆ. ರೋಹಿತ್ ಶರ್ಮಾ 41 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಆದರೆ ಇಶಾನ್ ಕಿಶನ್ ಅಂತಿಮ ಹಂತದವರೆಗೂ ಭರ್ಜರಿ ಹೋರಾಟವನ್ನು ನಡೆಸಿದ್ದು 81 ರನ್‌ಗಳಿಸಿ ಅಜೇಯವಾಗುಳಿದಿದ್ದಾರೆ. 48 ಎಸೆತ ಎದುರಿಸಿದ ಇಶಾನ್ ಕಿಶನ್ ಎರಡು ಸಿಕ್ಸರ್ ಹಾಗೂ 11 ಬೌಂಡರಿ ಸಿಡಿಸಿ ಮಿಂಚಿದ್ದಾರೆ. ರೋಹಿತ್ ಪಡೆ 178 ರನ್‌ಗಳ ಸವಾಲಿನ ಗುರಿಯನ್ನು ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ನೀಡಿದೆ