ಚೆನ್ನೈ ಆಟಗಾರ ಔಟ್ ಇದ್ದರೂ ನಾಟ್ಔಟ್ ಕೊಟ್ಟ ಅಂಪೈರ್; ಮುಂಬೈ ಸೋಲಿಗೆ ಇದೇ ಪ್ರಮುಖ ಕಾರಣವಾಯ್ತಾ?

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 33ನೇ ಪಂದ್ಯದಲ್ಲಿ ಐಪಿಎಲ್ ಇತಿಹಾಸದ ಬಲಿಷ್ಠ ತಂಡಗಳು ಎಂಬ ಖ್ಯಾತಿಯನ್ನು ಹೊಂದಿರುವಂತಹ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಿದವು.
ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮತ್ತು ಹೃತಿಕ್ ಶೋಕೀನ್ ಜವಾಬ್ದಾರಿಯುತ ಆಟದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿತು. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಈ ಮಹತ್ವದ ಪಂದ್ಯದಲ್ಲಿ ಡಕ್ ಔಟ್ ಆಗಿ ತಂಡಕ್ಕೆ ಆಸರೆಯಾಗುವಲ್ಲಿ ಎಡವಿದರು.
ಇನ್ನು ಮುಂಬೈ ಇಂಡಿಯನ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ನೀಡಿದ ಗುರಿಯನ್ನು ಬೆನ್ನತ್ತಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಕಲೆಹಾಕಿ 3 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸಿತು. ಈ ಗೆಲುವಿನ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿನ ತನ್ನ ಎರಡನೇ ಜಯವನ್ನು ದಾಖಲಿಸಿದೆ. ಇತ್ತ ಈ ಸೋಲಿನ ಮೂಲಕ ಟೂರ್ನಿಯಲ್ಲಿ ಸತತ ಏಳನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋತಿದೆ. ಚೆನ್ನೈ ಸೂಪರ್ ಕಿಂಗ್ಸ್ ಪರ ರಾಬಿನ್ ಉತ್ತಪ್ಪ, ಎಂಎಸ್ ಧೋನಿ, ಅಂಬಾಟಿ ರಾಯುಡು ಮತ್ತು ಪ್ರಿಟೋರಿಯಸ್ ಜವಾಬ್ದಾರಿಯುತ ಪ್ರದರ್ಶನ ನೀಡಿದರು. ಇನ್ನು ಈ ಪಂದ್ಯದಲ್ಲಿ ಅಂಪೈರ್ ನೀಡಿದ ಗೊಂದಲದ ತೀರ್ಪು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೀಡಾಗಿದ್ದು, ಔಟ್ ಇದ್ದರೂ ಅಂಪೈರ್ ನಾಟೌಟ್ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಕುರಿತಾದ ಮಾಹಿತಿ ಮುಂದೆ ಇದೆ ಓದಿ.

ರಾಬಿನ್ ಉತ್ತಪ್ಪ ಕುರಿತು ವಿವಾದಾತ್ಮಕ ತೀರ್ಪು
ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ವೇಳೆ 8ನೇ ಓವರ್ ಬೌಲಿಂಗ್ ಮಾಡಿದ ಯುವ ಕ್ರಿಕೆಟಿಗ ಹೃತಿಕ್ ಶೋಕೀನ್ ನಾಲ್ಕನೇ ಎಸೆತವನ್ನು ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪಗೆ ಎಸೆದರು. ಈ ಎಸೆತವನ್ನು ನೇರವಾಗಿ ಹೊಡೆಯಲು ಯತ್ನಿಸಿದ ರಾಬಿನ್ ಉತ್ತಪ್ಪ ಬೌಲರ್ ಹೃತಿಕ್ ಶೋಕಿನ್ ಅವರಿಗೆ ಕ್ಯಾಚ್ ನೀಡಿದ್ದರು. ಈ ಕ್ಯಾಚ್ ಕುರಿತಾಗಿ ತೀರ್ಪು ನೀಡದ ಅಂಪೈರ್ ಮೂರನೇ ಅಂಪೈರ್‌ಗೆ ವರ್ಗಾಯಿಸಿದರು. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ ನಾಟ್ ಔಟ್ ಎಂದು ತೀರ್ಪು ನೀಡಿದರು. ಆದರೆ ಹೃತಿಕ್ ಶೋಕೀನ್ ರಾಬಿನ್ ಉತ್ತಪ್ಪ ಅವರ ಕ್ಯಾಚ್ ಹಿಡಿಯುವಾಗ ಚೆಂಡನ್ನು ನೆಲಕ್ಕೆ ತಾಗಿಸದ ಹಾಗೆ ವಿಡಿಯೋದಲ್ಲಿ ಕಂಡು ಬಂದಿದೆ. ಹೀಗಾಗಿ ಮೂರನೇ ಅಂಪೈರ್ ತಪ್ಪಾದ ತೀರ್ಪನ್ನು ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಅಂಪೈರ್ ತೀರ್ಪಿಗೆ ಮೈದಾನದಲ್ಲೇ ಬೇಸರಗೊಂಡ ಮುಂಬೈ ಇಂಡಿಯನ್ಸ್ ಆಟಗಾರರು
ಇನ್ನು ಮೂರನೇ ಅಂಪೈರ್ ರಾಬಿನ್ ಉತ್ತಪ್ಪ ಕ್ಯಾಚ್ ಕುರಿತಾಗಿ ನೀಡಿದ ತೀರ್ಪಿನಿಂದಾಗಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಮೈದಾನದಲ್ಲಿಯೇ ಬೇಸರಕ್ಕೊಳಗಾದರು. ಮೂರನೇ ಅಂಪೈರ್ ಈ ಕುರಿತಾಗಿ ನೀಡಿದ್ದು ತಪ್ಪಾದ ತೀರ್ಪು ಎಂಬುದನ್ನು ಮುಂಬೈ ಇಂಡಿಯನ್ಸ್ ಆಟಗಾರರ ಪ್ರತಿಕ್ರಿಯೆಯೇ ಹೇಳುತ್ತಿತ್ತು.

ಮುಂದಿನ ಎಸೆತದಲ್ಲಿಯೇ ಸಿಕ್ಸರ್ ಚಚ್ಚಿದ ಉತ್ತಪ್ಪ
ಮೂರನೇ ಅಂಪೈರ್ ವಿವಾದಾತ್ಮಕ ತೀರ್ಪು ನೀಡಿದ ಮುಂದಿನ ಎಸೆತದಲ್ಲಿಯೇ ರಾಬಿನ್ ಉತ್ತಪ್ಪ ಭರ್ಜರಿ ಸಿಕ್ಸರ್ ಸಿಡಿಸಿದರು. ಒಂದುವೇಳೆ ಮೂರನೇ ಅಂಪೈರ್ ರಾಬಿನ್ ಉತ್ತಪ್ಪ ಔಟ್ ಎಂದು ತೀರ್ಪು ನೀಡಿದ್ದರೆ ಕೊನೆಯ ಎಸೆತದವರೆಗೂ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜಯ ಗಳಿಸುತ್ತಿತ್ತು ಎನ್ನಬಹುದು. ರಾಬಿನ್ ಉತ್ತಪ್ಪ ಔಟ್ ಆಗಿದ್ದರೆ ಮುಂದಿನ ಎಸೆತದಲ್ಲಿ ಸಿಕ್ಸರ್ ಬರುತ್ತಿರಲಿಲ್ಲ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತಷ್ಟು ಒತ್ತಡಕ್ಕೆ ಸಿಲುಕಿಕೊಳ್ಳುತ್ತಿತ್ತು. ಹೀಗಾಗಿ ಮೂರನೇ ಅಂಪೈರ್ ನಾಟ್ ಔಟ್ ಎಂದು ತೀರ್ಪು ನೀಡಿದ್ದು ಮುಂಬೈ ಇಂಡಿಯನ್ಸ್ ತಂಡದ ಸೋಲಿಗೆ ಕಾರಣಗಳಲ್ಲೊಂದು ಎನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications