
ಈ ಬಾರಿಯ ಐಪಿಎಲ್‌ನಲ್ಲಿ ಸಂಪೂರ್ಣ ಹಿನ್ನಡೆ ಅನುಭವಿಸಿರುವ ಮುಂಬೈ ಇಂಡಿಯನ್ಸ್ ಒಂದೇ ಒಂದು ಗೆಲುವು ದಾಖಲಿಸಲು ಈವರೆಗೆ ವಿಫಲವಾಗಿದೆ. ತಂಡದ ಎಲ್ಲಾ ವಿಭಾಗಗಳು ಕೂಡ ಸಂಪೂರ್ಣ ವೈಫಲ್ಯವನ್ನು ಅನುಭವಿಸುತ್ತಿದ್ದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಈ ಸಂದರ್ಭದಲ್ಲಿ ತಂಡದ ಬೌಲಿಂಗ್ ಬಲಗೊಳಿಸುವ ನಿಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ಧವಳ್ ಕಲ್ಕರ್ಣಿ ಅವರೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು ಅನುಭವಿ ವೇಗಿ ಮುಂಬೈ ಇಂಡಿಯನ್ಸ್ ಸ್ಕ್ವಾಡ್ ಸೇರಿಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.
ಐಪಿಎಲ್ ಮೂಲಗಳ ಮಾಹಿತಿಯ ಪ್ರಕಾರ ಧವಳ್ ಕುಲ್ಕರ್ಣಿ ಪ್ರಸ್ತುತ ತಂಡದ ಬಯೋಬಬಲ್‌ಗೆ ಸೇರಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಅವರು ಅಭ್ಯಾಸವನ್ನು ಆರಂಭಿಸಲಿದ್ದಾರೆ ಎಂದು ಮಾಹಿತಿ ದೊರೆತಿದೆ. ಅಭ್ಯಾಸದಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಧವಳ್ ಕುಲ್ಕರ್ಣಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಕಳೆದ ಫೆಬ್ರವರಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಹಾರಾಜಾಗದೆ ಉಳಿದುಕೊಂಡಿದ್ದ ಧವಳ್ ಕುಲ್ಕರ್ಣಿ ನಂತರ ಕಾಮೆಂಟರಿ ಪ್ಯಾನೆಲ್‌ಗೆ ಸೇರಿಕೊಂಡಿದ್ದರು. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಿಂದ ಕರೆ ಸ್ವೀಕರಿಸುವ ಮುನ್ನ ಐಪಿಎಲ್ ಅಧಿಕೃತ ಪ್ರಸಾರಕರೊಂದಿಗೆ ಕಾಮೆಂಟೇಟರ್ ಆಗಿ ಒಪ್ಪಂದವನ್ನು ಮಾಡಿಕೊಂಡಿದ್ದರು ಧವಳ್ ಕುಲ್ಕರ್ಣಿ. ಈ ಸಂದರ್ಭದಲ್ಲಿ ಮತ್ತೆ ಅನುಭವಿ ವೇಗಿಗೆ ಅದೃಷ್ಟ ಒಲಿದು ಬಂದಿದೆ.
ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ವೇಗಿಗಳು ನಿರೀಕ್ಷಿತ ಪ್ರದರ್ಶನ ನಿಡಲು ವಿಫಲವಾಗುತ್ತಿದ್ದಾರೆ. ಅದರಲ್ಲೂ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಕೂಡ ಭಾರೀ ನಿರಾಸೆ ಮೂಡಿಸಿರುವುದು ಮುಂಬೈ ತಂಡಕ್ಕೆ ಮತ್ತಷ್ಟು ಆಘಾತ ಮೂಡಿಸಿದೆ. ಆಡಿರುವ 8 ಪಂದ್ಯಗಳಲ್ಲಿ ಬೂಮ್ರಾ 229 ರನ್ ಬಿಟ್ಟುಕೊಟ್ಟಿದ್ದು ಕೇವಲ 5 ವಿಕೆಟ್ ಪಡೆಯಲು ಮಾತ್ರವೇ ಶಕ್ತವಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಮಡದ ಇತರ ವೇಗಿಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಎಡಗೈ ವೇಗಿ ಜಯ್‌ದೇವ್ ಉನಾದ್ಕಟ್ ಐದು ಪಂದ್ಯಗಳನ್ನು ಆಡಿದ್ದು 190 ರನ್ ನೀಡಿದ 6 ವಿಕೆಟ್ ಪಡೆದಿದ್ದರೆ ಡೇನಿಯಲ್ ಸ್ಯಾಮ್ಸ್ 5 ಪಂದ್ಯಗಳನ್ನು ಆಡಿ 209 ರನ್‌ಗಳಿಗೆ 6 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ವೇಗಿಗಳ ಪ್ರದರ್ಶನ ತೀರಾ ಸಾಮಾನ್ಯ ಮಟ್ಟದಲ್ಲಿರುವುದು ಹಿನ್ನಡೆಗೆ ಕಾರಣವಾಗಿದೆ.
ಹೀಗಾಗಿ ಮುಂಬೈ ಮೂಲದ ವೇಗದ ಬೌಲರ್ ಧವಳ್ ಕುಲ್ಕರ್ಣಿ ತಂಡವನ್ನು ಸೇರಿಕೊಳ್ಳುವುದು ಬಲ ನೀಡಲಿದೆ ಎಂಬ ನಿರೀಕ್ಷೆಯಲ್ಲಿದೆ ಫ್ರಾಂಚೈಸಿ. ಮುಂಬೈ ರಣಜಿ ತಂಡದ ಪ್ರಮುಖ ಸದಸ್ಯನಾಗಿರುವ ಕುಲ್ಕರ್ಣಿ ಐಪಿಎಲ್‌ನಲ್ಲಿ ಆಡಿರುವ ಅನುಭವವನ್ನು ಕೂಡ ಹೊಂದಿದ್ದಾರೆ. 2008ರಲ್ಲಿ ಪದಾರ್ಪಣೆ ಮಾಡಿರುವ ಧವಳ್ ಕುಲ್ಕರ್ಣಿ 92 ಪಂದ್ಯಗಳನ್ನು ಆಡಿದ್ದು 86 ವಿಕೆಟ್ ಸಂಪಾದಿಸಿದ್ದಾರೆ. ಐಪಿಎಲ್‌ನಲ್ಲಿ ಹೆಚ್ಚಿನ ಪಂದ್ಯಗಳನ್ನು ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡಿರುವ ಧವಳ್ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಲಯನ್ಸ್ ಪರವಾಗಿಯೂ ಕೆಲ ಪಂದ್ಯಗಳನ್ನು ಆಡಿದ್ದಾರೆ.