ನೋಬಾಲ್ ವಿವಾದ: ಅಂಪೈರ್ ತೀರ್ಪಿನ ವಿರುದ್ಧ ನಿಂತ ಪಂತ್, ಆಮ್ರೆಗೆ ದಂಡ ಮತ್ತು ಬ್ಯಾನ್ ಬರೆ!

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 34ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಬೃಹತ್ ರನ್ ಹೊಳೆಯೇ ಹರಿದಿದ್ದು, ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ 15 ರನ್‌ಗಳ ರೋಚಕ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಶತಕ ಚಚ್ಚಿ ಅಬ್ಬರಿಸಿದರೆ, ದೇವದತ್ ಪಡಿಕ್ಕಲ್ ಅರ್ಧಶತಕ ಮತ್ತು ನಾಯಕ ಸಂಜು ಸ್ಯಾಮ್ಸನ್ 19 ಎಸೆತಗಳಲ್ಲಿ 46 ರನ್ ಬಾರಿಸಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಜೆ ಗೆಲ್ಲಲು 223 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಲು ಪ್ರಯತ್ನಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂತಿಮ ಓವರ್‌ನಲ್ಲಿ ಗೆಲ್ಲಲು 36 ರನ್ ಬಾರಿಸಬೇಕಿತ್ತು.
ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪೋಟಕ ಆಟಗಾರ ರೋವ್‌ಮನ್ ಪೊವೆಲ್ ಕ್ರೀಸ್‌ನಲ್ಲಿದ್ದರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಒಬೆಡ್ ಮೆಕ್‌ಕಾಯ್ ಅಂತಿಮ ಓವರ್ ಬೌಲಿಂಗ್ ಮಾಡಿದರು. ಈ ಓವರ್‌ನ ಮೊದಲ 3 ಎಸೆತಗಳನ್ನು ಸಿಕ್ಸರ್ ಬಾರಿಸಿದ ರೋವ್‌ಮನ್ ಭರವಸೆ ಮೂಡಿಸಿದರು. ಅದರಲ್ಲಿಯೂ ಒಬೆಡ್ ಮೆಕ್‌ಕಾಯ್ ಎಸೆದ ಮೂರನೇ ಎಸೆತ ಫುಲ್ ಟಾಸ್ ಹಾಗೂ ಎತ್ತರ ಸೊಂಟಕ್ಕಿಂತ ಹೆಚ್ಚಿದ್ದ ಕಾರಣ ಈ ಎಸೆತ ನೋಬಾಲ್ ಆಗಲಿದ್ದು, ತಂಡಕ್ಕೆ ಮತ್ತೊಂದು ಹೆಚ್ಚಿನ ಎಸೆತ ಹಾಗೂ ಫ್ರೀ ಹಿಟ್ ಲಭಿಸಲಿದೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ಪಾಳಯ ಊಹಿಸಿತ್ತು. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷೆಗೆ ತಣ್ಣೀರು ಎರಚಿದ ಅಂಪೈರ್ ಈ ಎಸೆತ ಸರಿಯಾಗಿದೆ ಎಂದು ನೋ ಬಾಲ್ ನೀಡಲು ನಿರಾಕರಿಸಿದರು. ಅಂಪೈರ್ ನೋಬಾಲ್ ನೀಡದೇ ಇದ್ದದ್ದರ ಕುರಿತು ಸ್ಥಳದಲ್ಲೇ ಪ್ರತಿಕ್ರಿಯಿಸಿ ವಿರೋಧ ವ್ಯಕ್ತಪಡಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಹಾಗೂ ಸಹಾಯಕ ಕೋಚ್ ಪ್ರವೀಣ್ ಆಮ್ರೆಗೆ ಇದೀಗ ದಂಡ ಮತ್ತು ಬ್ಯಾನ್ ಬರೆ ಬಿದ್ದಿದ್ದು, ಈ ಕುರಿತಾದ ವಿವರ ಈ ಕೆಳಕಂಡಂತಿದೆ.

ರಿಷಭ್ ಪಂತ್ ಮತ್ತು ಶಾರ್ದೂಲ್ ಠಾಕೂರ್‌ಗೆ ದಂಡ
ಪಂದ್ಯದ ವೇಳೆ ನೋಬಾಲ್ ವಿರುದ್ಧ ಕಿಡಿಕಾರಿ ಕಣದಲ್ಲಿದ್ದ ತನ್ನ ಆಟಗಾರರನ್ನು ವಾಪಸ್ ಕರೆದು ಹಾಗೂ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರನ್ನು ಮೈದಾನಕ್ಕೆ ಕಳುಹಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್‌ಗೆ ಪಂದ್ಯದ ಶೇಕಡಾ 100ರಷ್ಟು ದಂಡವನ್ನು ವಿಧಿಸಲಾಗಿದೆ. ಟಾಟಾ ಐಪಿಎಲ್ 2022ರ ನೀತಿ ಸಂಹಿತೆಯ 2.7 ಅಡಿಯಲ್ಲಿ ಎರಡನೇ ಹಂತದ ಅಪರಾಧ ಎಸಗಿದ ಆಧಾರದ ಮೇಲೆ ರಿಷಭ್ ಪಂತ್‌ಗೆ ಈ ದಂಡವನ್ನು ವಿಧಿಸಲಾಗಿದೆ. ಇನ್ನು ತಂಡದ ಮತ್ತೋರ್ವ ಆಟಗಾರ ಶಾರ್ದೂಲ್ ಠಾಕೂರ್‌ಗೂ ಸಹ ಶೇಕಡಾ 50ರಷ್ಟು ದಂಡವನ್ನು ವಿಧಿಸಲಾಗಿದೆ.

ಪ್ರವೀಣ್ ಆಮ್ರೆಗೆ ದಂಡ ಸಹಿತ ಬ್ಯಾನ್ ಶಿಕ್ಷೆ
ಇನ್ನು ಪಂದ್ಯದ ವೇಳೆ ಮೈದಾನಕ್ಕೆ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಪ್ರವೀಣ್ ಆಮ್ರೆಗೆ ಐಪಿಎಲ್ ನೀತಿ ಸಂಹಿತೆ 2.2ರ ಅಡಿಯಲ್ಲಿ ಶೇಕಡಾ 100ರಷ್ಟು ದಂಡ ವಿಧಿಸುವುದರ ಜೊತೆಗೆ ಮುಂದಿನ ಒಂದು ಪಂದ್ಯದಿಂದ ಪ್ರವೀಣ್ ಆಮ್ರೆಯವರನ್ನು ಬ್ಯಾನ್ ಮಾಡಲಾಗಿದೆ.

ಐಪಿಎಲ್‌ನ 2.2 ಮತ್ತು 2.7 ನಿಯಮಗಳು ಹೇಳುವುದೇನು?
ಇಂಡಿಯನ್ ಪ್ರೀಮಿಯರ್ ಲೀಗ್‌ನ 2.2 ಮತ್ತು 2.7 ನಿಯಮಗಳ ಪ್ರಕಾರ ಪಂದ್ಯದ ಕುರಿತಾದ ಯಾವುದೇ ವಿಷಯವನ್ನಾದರೂ ಮೈದಾನದಲ್ಲಿಯೇ ಬಗೆಹರಿಸಿಕೊಳ್ಳಬೇಕು, ಪಂದ್ಯದ ವೇಳೆ ಅಂಪೈರ್ ನೀಡಿದ ತೀರ್ಪಿನ ಕುರಿತು ಕಣದಲ್ಲಿರುವ ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ ಉಳಿದ ಯಾವುದೇ ವ್ಯಕ್ತಿ ಕೂಡ ಮಧ್ಯ ಪ್ರವೇಶಿಸುವಂತಿಲ್ಲ ಹಾಗೂ ಮೈದಾನಕ್ಕೆ ಪ್ರವೇಶಿಸುವುದು ಮತ್ತು ಮೈದಾನಕ್ಕೆ ಪ್ರವೇಶಿಸುವಂತೆ ನಿರ್ದೇಶನ ನೀಡುವುದು ಈ ನಿಯಮಗಳ ಅಡಿಯಲ್ಲಿ ನಿಷಿದ್ದವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications