
ಐಪಿಎಲ್ 2022ರ ಆವೃತ್ತಿಯಲ್ಲಿ ಸಾಕಷ್ಟು ಆಟಗಾರರಿಂದ ಅದ್ಭುತ ಪ್ರದರ್ಶನಗಳು ಬರುತ್ತಿದೆ. ಅದರಲ್ಲೂ ಕೆಲ ಆಟಗಾರರು ತಮ್ಮ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ಟೂರ್ನಿಗೆ ಮೆರುಗಿ ನೀಡಿದ್ದಾರೆ. ಜೋಸ್ ಬಟ್ಲರ್ ಬ್ಯಾಟಿಂಗ್‌ನಲ್ಲಿ ಹಿಂದೆಂದಿಗಿಂತಲೂ ಅದ್ಭುತ ಫಾರ್ಮ್ ಪ್ರದರ್ಶಿಸುತ್ತಿದ್ದರೆ ಬೌಲಿಂಗ್‌ನಲ್ಲಿ ಯುಜುವೇಂದ್ರ ಚಾಹಲ್ ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ. ಈ ಅನುಭವಿಗಳಲ್ಲದೆ ಕೆಲ ಯುವ ಆಟಗಾರರು ಅಮೋಘ ಪ್ರದರ್ಶನ ನೀಡುತ್ತಿದ್ದು ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಉಮ್ರಾನ್ ಮಲಿಕ್, ಆಯುಷ್ ಬದೋನಿ, ತಿಲಕ್ ವರ್ಮ ಮೊದಲಾದ ಆಟಗಾರರಿಂದ ಅದ್ಭುತ ಪ್ರದರ್ಶನಗಳು ಬರುತ್ತಿದೆ.
ಈ ಸಂದರ್ಭದಲ್ಲಿ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥಿವ್ ಪಟೇಲ್ ತಮ್ಮ ಮನ ಗೆದ್ದ ಯುವ ಆಟಗಾರನ ಬಗ್ಗೆ ವಿಶೇಷ ಮಾತುಗಳನ್ನು ಆಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಪರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಬ್ಯಾಟರ್ ಆಯುಷ್ ಬದೋನಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವ ಬದೋನಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಮೊದಲ ಪಂದ್ಯದಲಲ್ಇಯೇ ಗುಜರಾತ್ ಟೈಟನ್ಸ್ ವಿರುದ್ಧ 54 ರನ್‌ಗಳ ಪ್ರದರ್ಶನ ನೀಡಿ ಪರಿಣಾಮಕಾರಿ ಆಟವನ್ನಾಡಿದ ಆಯುಷ್ ಬದೋನಿ ಚೊಚ್ಚಲ ಪಂದ್ಯದಲ್ಲಿಯೇ ಮನಗೆದ್ದಿದ್ದರು.
"ಆಯುಷ್ ಬದೋನಿ ಆಟ ನನಗೆ ಅಚ್ಚರಿಯುಂಟು ಮಾಡಿದೆ. ನಾವು ಸಾಕಷ್ಟು ಪಂದ್ಯಗಳಲ್ಲಿ ಸಾಕಷ್ಟು ಅಚ್ಚರಿಯ ಪ್ರದರ್ಶನಗಳನ್ನು ಕಂಡಿದ್ದೇವೆ. ಅದರಲ್ಲಿ ಅದ್ಭುತವಾಗಿ ಸಿಕ್ಸರ್ ಅಟ್ಟುವ ರೀತಿ, ಪಂದ್ಯವನ್ನು ಮುಗಿಸುವ ಶೈಲಿ, ಪರಿಸ್ಥಿತಿಯನ್ನು ಅದ್ಭುತವಾಗಿ ನಿಭಾಯಿಸುವ ಬಗೆಯಿಂದಾಗಿ ನನಗೆ ಅಚ್ಚರಿಯ ಆಟಗಾರನಾಗಿ ಆಯುಷ್ ಬದೋನಿಯನ್ನು ಆಯ್ಕೆ ಮಾಡಲು ಬಯಸುತ್ತೇನೆ" ಎಂದಿದ್ದಾರೆ ಪಾರ್ಥಿವ್ ಪಟೇಲ್.
ಯುವ ಆಟಗಾರ ಆಯುಷ್ ಬದೋನಿ ಮಧ್ಯಮ ಕ್ರಮಾಂಕದಲ್ಲಿ ನೀಡಿದ ಪ್ರದರ್ಶನ ಅದ್ಭುತವಾಗಿತ್ತು. ಆಡಿರುವ 7 ಪಂದ್ಯಗಳಲ್ಲಿ ಆಯುಷ್ ಬದೋನಿ 134 ರನ್‌ಗಳಿಸಿದ್ದು ಇದರಲ್ಲಿ ಎರಡು ಪಂದ್ಯಗಳಲ್ಲಿ ಅಜೇಯವಾಗಿ ಉಳಿದುಕೊಂಡಿದ್ದಾರೆ. 26.80ರ ಸರಾಸರಿಯಲ್ಲಿ 139.58ರ ಸ್ಟ್ರೈಕ್‌ರೇಟ್‌ನಲ್ಲಿ ಆಯುಷ್ ಬದಲಾನಿ ಬ್ಯಾಟ್ ಬೀಸಿದ್ದಾರೆ. 20 ಲಕ್ಷ ಮೂಲ ಬೆಲೆಗೆ ಆಯುಷ್ ಬದೋನಿ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿತ್ತು.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿದ ಕೊನೆಯ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದೆ. ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇಆಫ್‌ಗೇರುವ ಸ್ಪರ್ಧೆಯಿಂದ ಅಧಿಕೃತವಾಗಿ ಹೊರ ಬಿದ್ದಂತಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬದೋನಿ ಕೇವಲ 14 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾದರು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಟೂರ್ನಿಯ ಎರಡನೇ ಶತಕಗಳಿಸಿದರು. ಈ ಪ್ರದರ್ಶನದ ಕಾರಣದಿಂದಾಗಿ ಲಕ್ನೋ ತಂಡ 169 ರನ್‌ಗಳ ಗುರಿಯನ್ನು ಮುಂಬೈ ನೀಡಿತ್ತು. ಈ ಮೊತ್ತವನ್ನು ರಕ್ಷಣೆ ಮಾಡುವಲ್ಲಿ ಲಕ್ನೋ ಬೌಲರ್‌ಗಳು ಯಶಸ್ವಿಯಾದರು.
ಲಕ್ನೋ ಸೂಪರ್ ಜೈಂಟ್ಸ್ ಸ್ಕ್ವಾಡ್: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್, ಎವಿನ್ ಲೂಯಿಸ್, ಆಂಡ್ರ್ಯೂ ಟೈ, ಮನೀಶ್ ಪಾಂಡೆ, ಶಹಬಾಜ್ ನದೀಮ್, ಮನನ್ ವೋಹ್ರಾ, ಕೈಲ್ ಮೇಯರ್ಸ್, ಅಂಕಿತ್ ರಾಜ್‌ಪೂತ್, ಮೊಹ್ಸಿನ್ ಖಾನ್, ಕರಣ್ ಶರ್ಮಾ, ಮಯಾಂಕ್ ಯಾದವ್