
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ತನ್ನ ಪಯಣವನ್ನು ಆರಂಭಿಸಲಿದೆ. ಇನ್ನು ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಈ ಪಂದ್ಯ ಮಾರ್ಚ್ 27ರಂದು ನಡೆಯಲಿದ್ದು, ಈ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೂತನ ನಾಯಕನನ್ನು ಪಡೆಯಲಿದೆ.
ಹೌದು, ಈ ಬಾರಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಅವರನ್ನು 7 ಕೋಟಿಗೆ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕಳೆದ ಶನಿವಾರ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ವಿಶೇಷ ಕಾರ್ಯಕ್ರಮದಲ್ಲಿ ತನ್ನ ತಂಡದ ನೂತನ ನಾಯಕ ಎಂದು ಘೋಷಣೆ ಮಾಡಿತು. ಹೀಗೆ ಫಾಫ್ ಡು ಪ್ಲೆಸಿಸ್ ನಾಯಕ ಎಂದು ಘೋಷಣೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಹಾಗೂ ಟ್ರೋಲ್ಸ್ ಶುರುವಾಗಿದ್ದು, ಕೆಲ ಅಭಿಮಾನಿಗಳು ಫಾಫ್ ಡು ಪ್ಲೆಸಿಸ್ ಅವರ ಫೋಟೋಗಳನ್ನು ವಿಭಿನ್ನವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಆ ಸಾಲಿಗೆ ಇದೀಗ ಪ್ರಸಿದ್ಢ ಕ್ರೀಡಾ ಟಿವಿ ಚಾನೆಲ್ ಆಗಿರುವ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಕೂಡ ಸೇರಿಕೊಂಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನೂತನ ನಾಯಕ ಫಾಫ್ ಡು ಪ್ಲೆಸಿಸ್ ಅವರ ಚಿತ್ರವನ್ನು ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಪೋಸ್ಟರ್‌ವೊಂದಕ್ಕೆ ಹಾಕಿ ಎಡಿಟ್ ಮಾಡಲಾಗಿದೆ.
ಈ ಫೋಟೋವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಕನ್ನಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೂ ಜೇಮ್ಸ್ ಚಿತ್ರದ ಟೀಸರ್‌ನಲ್ಲಿ ಇರುವ 'ಗನ್ ಥರ ಇರೋ ಒಬ್ಬ ಇದ್ರೆ ಸಾಕು' ಎಂಬ ಡೈಲಾಗ್‌ನ್ನು ಬಳಸಿಕೊಂಡಿದ್ದು, ಟ್ವೀಟ್‌ನಲ್ಲಿ ಈ ಸಾಲುಗಳನ್ನು 'ನೂರ್ ಜನ ಗನ್ ಹಿಡ್ಕೊಂಡಿರೋರಿಗಿಂತ, ಒಬ್ಬ ಗನ್ ಥರ ಇರೋ ಹೀರೋ ಬೇಕು' ಎಂದು ಬರೆದುಕೊಂಡಿರುವ ಸ್ಟಾರ್ ಸ್ಪೋರ್ಟ್ಸ್ ಕನ್ನಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕನಾಗಿ ಅಯ್ಕೆಯಾದ ಫಾಫ್ ಡು ಪ್ಲೆಸಿಸ್ ಅವರಿಗೆ ಶುಭಾಶಯವನ್ನು ತಿಳಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ಸ್ಕ್ವಾಡ್: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್ ( ನಾಯಕ ), ಹರ್ಷಲ್ ಪಟೇಲ್, ವನಿಂದು ಹಸರಂಗಾ, ದಿನೇಶ್ ಕಾರ್ತಿಕ್, ಜೋಶ್ ಹೇಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫಾನ್ ರುದರ್ ಫೋರ್ಡ್, ಜೇಸನ್ ಬೆಹ್ರಾಯ್, ಜೇಸನ್ ಬೆಹ್ರಾಯ್ ಮಿಲಿಂದ್, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್